ಎಕ್ಸ್‌ ಪ್ರೆಸ್‌ ಕೆನಾಲ್ ಯೋಜನೆ ಕೈಬಿಡಿ

ಎಕ್ಸ್‌ ಪ್ರೆಸ್‌ ಕೆನಾಲ್ ಮುಚ್ಚುವ ಹೋರಾಟ ಮಾಡ್ತೀವಿ: ಸೊಗಡು

22

Get real time updates directly on you device, subscribe now.


ತುಮಕೂರು: ತುಮಕೂರು ಜಿಲ್ಲೆಗೆ ಮಂಜೂರಾಗಿರುವ 24.08 ಟಿಎಂಸಿ ನೀರಿನಲ್ಲಿಯೇ ಎಕ್ಸ್‌ ಪ್ರೆಸ್‌ ಕೆನಾಲ್ ಮೂಲಕ ರಾಮನಗರ ಜಿಲ್ಲೆ ಮಾಗಡಿ ತಾಲೂಕಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಶ್ರೀರಂಗ ಏತ ನೀರಾವರಿ ಯೋಜನೆಯನ್ನು ಮೇ 15ರೊಳಗೆ ಸಂಪೂರ್ಣವಾಗಿ ಸ್ಥಗಿತಗೊಳಿಸದಿದ್ದರೆ ಮೇ 16 ರಿಂದ ತುಮಕೂರು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ರೈತ ಸಂಘಟನೆಗಳು, ಮಠಾಧೀಶರು ಪಕ್ಷಾತೀತವಾಗಿ ಎಕ್ಸ್‌ ಪ್ರೆಸ್‌ ಕೆನಾಲ್ ಮುಚ್ಚುವ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೇಮಾವತಿ ಜಲಾಶಯದಿಂದ ಕುಣಿಗಲ್ ತಾಲೂಕಿಗೆ 3 ಟಿಎಂಸಿ ನೀರು ಹಂಚಿಕೆಯಾಗಿದ್ದು, ನಾಲೆಯ 0-241 ಕಿ.ಮೀ ವರೆಗೆ ನೀರು ತೆಗೆದುಕೊಂಡು ಹೋಗಲು ಸುಮಾರು 751 ಕೋಟಿ ರೂ. ಖರ್ಚು ಮಾಡಿ 72-241ರ ವರೆಗೆ ನಾಲೆಯ ಅಧುನೀಕರಣ ಕಾಮಗಾರಿ ಸಹ ಚಾಲ್ತಿಯಲಿದೆ, ನೆರೆಯ ಮಾಗಡಿ ತಾಲೂಕಿಗೆ ನೀರು ತೆಗೆದುಕೊಂಡು ಹೋಗಲು ಕೆಡಿಪಿ ಸಭೆಯ ನಿರ್ಣಯ ಲಕ್ಕಿಸದೆ ಸರಕಾರಿ ಭೂಮಿ ಇರುವ ಕಡೆ ಕಾಮಗಾರಿಯನ್ನು ಹೇಮಾವತಿ ನಾಲಾ ಅಧಿಕಾರಿಗಳು ಕೈಗೊಂಡಿದ್ದಾರೆ, ಇದರಿಂದ ಜಿಲ್ಲೆಗೆ, ಜನರಿಗೆ ಬಹಳ ಅನ್ಯಾಯವಾಗಲಿದೆ ಎಂದರು.

ಎಕ್ಸ್‌ ಪ್ರೆಸ್‌ ಕೆನಾಲ್ ಆರಂಭವಾದರೆ 72 ಕಿ.ಮೀ ಗಿಂತ ಹಿಂದೆ ಇರುವ ಗುಬ್ಬಿ, ಮಧುಗಿರಿ, ಕೊರಟಗೆರೆ, ತುಮಕೂರು ನಗರ, ಗ್ರಾಮಾಂತರ ತಾಲೂಕುಗಳಿಗೆ ನೀರಿನ ಸಮಸ್ಯೆ ಎದುರಾಗಲಿದೆ, ಕಾಮಗಾರಿ ನಿಲ್ಲಿಸುವಂತೆ ಜಿಲ್ಲೆಯ ಇಬ್ಬರು ಮಂತ್ರಿಗಳಿಗೆ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಲಾಗಿದೆ, ಸರಕಾರ ಮೇ 15ರೊಳಗೆ ಕಾಮಗಾರಿ ನಿಲ್ಲಿಸದಿದ್ದರೆ ಮೇ 16 ರಂದು ಆರಂಭವಾಗಿರುವ ಕಾಮಗಾರಿ ಮುಚ್ಚುವ ಹೋರಾಟವನ್ನು ಜಿಲ್ಲೆಯ ಜನರೊಂದಿಗೆ ಹಮ್ಮಿಕೊಳ್ಳುವುದಾಗಿ ಸೊಗಡು ಶಿವಣ್ಣ ತಿಳಿಸಿದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ತುಮಕೂರು ಜಿಲ್ಲೆಗೆ ಹಂಚಿಕೆಯಾಗಿರುವ ನೀರಿನಲ್ಲಿಯೇ ತರಾತುರಿಯಲ್ಲಿ ಮಾಗಡಿಗೆ ನೀರು ತೆಗೆದುಕೊಂಡು ಹೋಗಲು ಹಾಲಿ ಇರುವ ನಾಲೆಯ ಮಾರ್ಗ ಬದಲಾಯಿಸಲು ಹೊರಟಿದ್ದಾರೆ, ಜಿಲ್ಲಾ ಕೆಡಿಪಿ ಸಭೆಯ ನಿರ್ಣಯಕ್ಕೂ ಬೆಲೆ ಇಲ್ಲದಂತೆ ಖಾಸಗಿ ಜಮೀನುಗಳನ್ನು ಹೊರತು ಪಡಿಸಿ, ಸರಕಾರಿ ಭೂಮಿಯಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ, ನ್ಯಾಯೋಚಿತವಾಗಿ ಕಾಮಗಾರಿ ನಿಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಸಹಕಾರಿ ಸಚಿವರೊಂದಿಗೆ ಸರಕಾರದ ಮುಖ್ಯ ಕಾರ್ಯದರ್ಶಿ ಅವರಿಗೂ ಮನವಿ ಸಲ್ಲಿಸಿದ್ದೇವೆ, ಸರಕಾರಕ್ಕೆ ಮೇ 15ರ ವರೆಗೆ ಗಡುವು ನೀಡಿದ್ದು, ಮೇ 16 ರಿಂದ ಜಿಲ್ಲೆಯ ರೈತರು, ಜನಪ್ರತಿನಿಧಿಗಳು, ಮಠಾಧೀಶರೊಂದಿಗೆ ಈಗಾಗಲೇ ನಡೆದಿರುವ ಕಾಮಗಾರಿ ಮುಚ್ಚುವ ಕೆಲಸ ಮಾಡಲಿದ್ದೇವೆ, ಇದಕ್ಕಾಗಿ ಯಾವ ರೀತಿಯ ಹೋರಾಟಕ್ಕೂ ಸಿದ್ಧ, ಜಿಲ್ಲೆಯ ಜನರಿಗೋಸ್ಕರ ಜೈಲಿಗೆ ಹೋಗಲು ತಯಾರಿದ್ದೇವೆ ಎಂದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್ ಗೌಡ ಮಾತನಾಡಿ, ಜಿಲ್ಲೆಗೆ ಹಂಚಿಕೆಯಾಗಿರುವ ನೀರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇದೊಂದು ನಿರ್ಣಾಯಕ ಹೋರಾಟವಾಗಿದೆ, ಜಿಲ್ಲೆಯ ಉಸ್ತುವಾರಿ ಸಚಿವರು, ಸಹಕಾರಿ ಸಚಿವರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು, ಹೋರಾಟಗಾರರು ಈ ಅನ್ಯಾಯ ತಡೆಯುವ ನಿಟ್ಟಿನಲ್ಲಿ ಹೋರಾಟದಲ್ಲಿ ಭಾಗಿಯಾಗಬೇಕಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಹೆಚ್.ನಿಂಗಪ್ಪ, ಮುಖಂಡರಾದ ವೈ.ಹೆಚ್.ಹುಚ್ಚಯ್ಯ, ಪಿ.ಸಿ.ಲೋಕೇಶ್ವರ್, ದಿಲೀಪ್ ಕುಮಾರ್, ಪಂಚಾಕ್ಷರಯ್ಯ, ಪ್ರಭಾಕರ, ಡಾ.ಸಂಜಯ್ ನಾಯಕ್, ಸೌಮ್ಯ, ಪುಟ್ಟಕಾಮಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!