ಶಿರಾ: 1.7ಲಕ್ಷ ವಿದ್ಯಾರ್ಥಿಗಳು ಕೃಪಾಂಕದಿಂದಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ, ಇಲ್ಲದೇ ಹೋಗಿದ್ದಲ್ಲಿ ಫಲಿತಾಂಶ ಶೇ.54ಕ್ಕೆ ಇಳಿಯುತ್ತಿತ್ತು ಎಂದು ಪರೀಕ್ಷಾ ಮಂಡಳಿಯೇ ತಿಳಿಸಿದೆ ಎಂದಾಗ ನಮ್ಮ ಶಿಕ್ಷಣ ವ್ಯವಸ್ಥೆ ಯಾವ ಕಡೆಗೆ ಸಾಗುತ್ತಿದೆ ಎನ್ನುವ ಬಗ್ಗೆ ಪ್ರಜ್ಞಾವಂತರು ಚಿಂತನೆ ನಡೆಸುವ ಅವಶ್ಯಕತೆ ಇದೆ ಎಂದು ವಿಧಾನ ಪರಿಷತ್ ಶಾಸಕ ಚಿದಾನಂದ ಎಂ.ಗೌಡ ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ತಮ್ಮ ಶಾಸಕ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ನಡುವೆ ಶಿಕ್ಷಣ ಕ್ಷೇತ್ರ ಕಡೆಗಣಿಸಲಾಗುತ್ತಿದೆ, ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾದಂತೆ ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಶಾಲೆಗಳ ಸುಮಾರು 60 ಸಾವಿರ ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ, ಇಂಥ ಸಂದರ್ಭದಲ್ಲಿ ಸರ್ಕಾರದ ಹೊಣೆಗಾರಿಗೆ ದೊಡ್ಡದಾಗಿರುತ್ತದೆ, ಈ ನಿಟ್ಟಿನಲ್ಲಿ ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿಗಳು ಇದರ ಹೊಣೆ ಹೊರಬೇಕು, ಕೇವಲ ಫಲಿತಾಂಶ ಹೆಚ್ಚಿಸುವ ಸಲುವಾಗಿ ಕೃಪಾಂಕ ಹೆಚ್ಚಳ ಮಾಡುವುದು ನಾಚಿಕೆಗೇಡಿನ ಸಂಗತಿ, ಅದರ ಹೊರತುಪಡಿಸಿ ಶಿಕ್ಷಣದ ಮೂಲಭೂತ ಸಮಸ್ಯೆ ಬಗೆಹರಿಸಿ, ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಿದರೆ ಹೆಚ್ಚಿನ ಫಲಿತಾಂಶ ನಿರೀಕ್ಷಿಸಬಹುದು ಎಂದರು.
ಸರ್ಕಾರಿ ಶಾಲೆಗಳು, ಬಡವರ, ದೀನ ದಲಿತರ ಶಿಕ್ಷಣದಲ್ಲಿ ಬಹಳ ಮಹತ್ವದ ಪಾತ್ರವಹಿಸುತ್ತವೆ, ಹಲವು ಕಡೆ ಶಿಕ್ಷಕರಿದ್ದರೆ, ಕಟ್ಟಡ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ, ಕೆಲವೆಡೆ ಮೂಲ ಸೌಕರ್ಯಗಳಿದ್ದರೆ ಶಿಕ್ಷಕರ ಕೊರತೆ, ಇದನ್ನು ಸರಿದೂಗಿಸಲು ಕ್ರಮ ಕೈಗೊಳ್ಳಬೇಕು, ಪರೀಕ್ಷೆಯಷ್ಟೇ ಪೂರ್ವ ಸಿದ್ಧತೆ, ತರಬೇತಿ ಎಲ್ಲವೂ ಮುಖ್ಯ, 3 ಪರೀಕ್ಷೆ ಮಾಡ್ತೀವಿ ಎನ್ನುವ ಶಿಕ್ಷಣ ಸಚಿವರ ಮಾತು ಕೇವಲ ಬಾಲಿಶ, ಹತ್ತು ವರ್ಷದಲ್ಲಿ ಕಲಿಯದ ಮಕ್ಕಳು ಹತ್ತು ಹದಿನೈದು ದಿನಗಳಲ್ಲಿ ಕಲಿತು ಮರು ಪರೀಕ್ಷೆ ಬರೆಯುವುದು ಸಾಧ್ಯವೇ? ಇದು ಮಕ್ಕಳ ಮಾನಸಿಕ ಸ್ಥೈರ್ಯ ಕುಗ್ಗಿಸಲಿದೆ, ಈಗಲೂ ಇಷ್ಟರ ಮಟ್ಟಿಗೆ ಫಲಿತಾಂಶ ಬಂದಿದೆ ಎಂದರೆ ಅದು ಶಿಕ್ಷಕರ ಪರಿಶ್ರಮದಿಂದ, ಸರ್ಕಾರದ ಮರ್ಯಾದೆ ಕಿಂಚಿತ್ತಾದರೂ ಉಳಿದಿದೆ ಎಂದರೆ ಅದಕ್ಕೆ ಶಿಕ್ಷಕರಿಂದ ಮಾತ್ರ ಎಂದರು.
ದುಡುಕದಿರಿ ಮಕ್ಕಳೇ: ಪರೀಕ್ಷೆ ಫಲಿತಾಂಶ ಏರುಪೇರಾದರೆ ಹಲವು ವಿದ್ಯಾರ್ಥಿಗಳು ತಮ್ಮ ಜೀವನವೇ ವ್ಯರ್ಥ ಎನ್ನುವ ನಿರ್ಧಾರಕ್ಕೆ ಬಂದು ಬಿಡುತ್ತಾರೆ, ಅದು ಪರೀಕ್ಷೆ ಫಲಿತಾಂಶದ ವೇಳೆ ನಾವು ಕಾಣುತ್ತಿರುವ ಸತ್ಯ, ಈ ಫಲಿತಾಂಶ ಕೇವಲ ವಿದ್ಯಾರ್ಥಿಗಳದ್ದೂ ಅಲ್ಲ, ಸರ್ಕಾರದ್ದೂ ಕೂಡಾ, ಪೂರಕ ವಾತಾವರಣ ರೂಪಿಸಿದ್ದರೆ ನೀವೂ ಕೂಡಾ ಪಾಸಾಗುತ್ತಿದ್ರಿ, ಪರೀಕ್ಷೆ ಮಾತ್ರವೇ ಜೀವನವಲ್ಲ, ಜೀವನ ಪರೀಕ್ಷೆಗೂ ಮೀರಿದ್ದು, ಆದ್ದರಿಂದ ಸಾವಧಾನದಿಂದ ಪರಿಸ್ಥಿತಿ ನಿಭಾಯಿಸಿ ಎಂದು ಕರೆ ನೀಡಿದರು.
100 ಮಂದಿಗೆ ಉಚಿತ ಶಿಕ್ಷಣ: ಪ್ರತಿ ವರ್ಷದಂತೆ ತಮ್ಮ ಪ್ರೆಸಿಡೆನ್ಸಿ ಪಿಯು ಕಾಲೇಜಿನಲ್ಲಿ ಈ ವರ್ಷವೂ 100 ಮಕ್ಕಳಿಗೆ ಉಚಿತ ಶಿಕ್ಷಣ ಕೊಡುವ ಬಗ್ಗೆ ಮಾತನಾಡಿದ ಅವರು ಸ್ಟೇಟ್ ಸಿಲಬಸ್ ಪರೀಕ್ಷೆಯಲ್ಲಿ 610 ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಐಸಿಎಸ್ ಸಿ ಮತ್ತು ಸಿಬಿಎಸ್ ಸಿ ಪಠ್ಯ ಕ್ರಮಗಳಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಪಡೆದ ಯಾವುದೇ ವಿದ್ಯಾರ್ಥಿ ತಮ್ಮ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಸಾಧ್ಯವಿದೆ, ಶಿರಾ ತಾಲ್ಲೂಕಿನವರಿಗೆ ಮೊದಲ ಆದ್ಯತೆ ನಂತರ ಮೊದಲು ಬಂದವರಿಗೆ ಮೊದಲ ಆದ್ಯತೆಯಂತೆ ಪ್ರವೇಶಾವಕಾಶ ನೀಡಲಾಗುವುದು ಎಂದು ತಿಳಿಸಿದರು.
Comments are closed.