ಕಾಯಕ, ದಾಸೋಹದ ಮಹತ್ವ ಸಾರಿದ್ದು ಬಸವಣ್ಣ

ಉತ್ತಮ ಸಮಾಜ ನಿರ್ಮಾಣಕ್ಕೆ ಮಹನೀಯರ ಕೊಡುಗೆ ಅಪಾರ

29

Get real time updates directly on you device, subscribe now.


ತುಮಕೂರು: 12ನೇ ಶತಮಾನದಲ್ಲಿ ಕಾಯಕ ತತ್ವ, ದಾಸೋಹ ತತ್ವ ಸಾರುವ ಮೂಲಕ ಕಾಯಕ, ದಾಸೋಹದ ಮಹತ್ವ ಹೇಳಿದ ಬಸವಣ್ಣನವರು ಸರ್ವರು ಸಮಾನರು ಎಂಬ ಸಂದೇಶ ನೀಡಿ ಸೌಹಾರ್ದ ಸಮಾಜ ನಿರ್ಮಾಣಕ್ಕೆ ನಾಂದಿಯಾದವರು, ಶರಣೆ ಹೆಮರೆಡ್ಡಿ ಮಲ್ಲಮ್ಮ ಅವರೂ ಸಮಾಜ ಸುಧಾರಣೆಗೆ ಶ್ರಮಿಸಿದರು, ಇಂತಹ ಸಾರ್ವಕಾಲಿಕ ಮಹನೀಯರ ಆದರ್ಶಗಳನ್ನು ಮುಂದಿನ ತಲೆಮಾರಿಗೂ ತಲುಪಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಖಿಲ ಭಾರತ ವೀರಶೈವ ಮಹಾಸಭಾ, ತುಮಕೂರು ವೀರಶೈವ ಸಮಾಜ ಸೇವಾ ಸಮಿತಿ, ಜಿಲ್ಲಾ ರೆಡ್ಡಿ ಜನಸಂಘದ ಆಶ್ರಯದಲ್ಲಿ ಶುಕ್ರವಾರ ನಗರದ ಡಾ.ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ನಡೆದ ಜಗಜ್ಯೋತಿ ಬಸವೇಶ್ವರರು ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತುತ್ಸವ ಉದ್ಘಾಟಿಸಿ ಮಾತನಾಡಿದರು.

ಮನುಷ್ಯರೆಲ್ಲರೂ ಸಮಾನರು, ಮನುಷ್ಯರ ನಡುವೆ ಜಾತಿ ಭೇದ ಇರಬಾರದು ಎಂದು ಸಾರಿದ್ದ ಬಸವಣ್ಣನವರು ಜಾತಿ ನಿವಾರಣೆಗೆ ಸಾಮಾಜಿಕ ಕ್ರಾಂತಿ ಮಾಡಿದ್ದರು, ಅಂತರ್ಜಾತಿ ವಿವಾಹಗಳನ್ನು ಬೆಂಬಲಿಸಿದ್ದರು, ಸಮಾಜದ ಅನಿಷ್ಟಗಳ ನಿರ್ಮೂಲನೆಗಾಗಿ ಆಡು ಭಾಷೆಯ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು ಎಂದು ಹೇಳಿದರು.
ಭಾವೈಕ್ಯತೆ, ಸಮಾನತೆಯ ಸಮಾಜ ನಿರ್ಮಾಣಕ್ಕೆ ಬಸವಣ್ಣನವರ ಆದರ್ಶಗಳು ಮಾದರಿಯಾಗಿವೆ, ಅವುಗಳನ್ನು ನಾವೆಲ್ಲಾ ಅನುಸರಿಸಿಕೊಂಡು ಹೋಗಬೇಕು ಎಂದ ಅವರು ಬಸವಣ್ಣನವರ ಆದರ್ಶಗಳನ್ನು ಅಳವಡಿಸಿಕೊಂಡಿದ್ದ ಹೇಮರೆಡ್ಡಿ ಮಲ್ಲಮ್ಮ ಅವರು ಸಮಾಜ ಸುಧಾರಣೆಗೆ ನೆರವಾಗಿದ್ದರು ಎಂದು ಶಿವಾನಂದ ಕರಾಳೆ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ, ವಚನಗಳ ಮೂಲಕ ಬಸವಣ್ಣನವರು ಜನಸಾಮಾನ್ಯರಿಗೆ ಕನ್ನಡ ಕಟ್ಟಿಕೊಡುವಲ್ಲಿ ವಿಶೇಷ ಕೊಡುಗೆ ನೀಡಿದ್ದಾರೆ, ಮೇಲು ಕೀಳೆಂಬ ಭಾವನೆ ಹೊಡೆದೋಡಿಸಿ ಜನರ ಕಷ್ಟ ಕಾರ್ಪಣ್ಯ ನಿವಾರಣೆಗೆ ವಚನಗಳ ಮೂಲಕ ಮಾರ್ಗದರ್ಶನ ನೀಡಿದ್ದರು ಎಂದರು.
ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಬಸವಣ್ಣನವರು ನೀಡಿದ ವಚನಗಳ ಸಂದೇಶಗಳು ಸಾರ್ವಕಾಲಿಕವಾಗಿ ಉಳಿಯುತ್ತವೆ, ಎಲ್ಲರೂ ಸಮಾನರು, ಇವನಾರವ, ಇವನಾರವ ಎನ್ನದೆ ಇವ ನಮ್ಮವ ಎಂದು ಸಾರಿದ ಬಸವಣ್ಣನವರು ಶ್ರೇಷ್ಠ ಸಮಾಜ ಸುಧಾರಕ, ಬಸವಣ್ಣನವರ ತತ್ವಗಳ ತಳಹದಿಯಲ್ಲೇ ನಮ್ಮ ಸಂವಿಧಾನ ರಚನೆಯಾಗಿದೆ, ಬಸವಣ್ಣರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಸರ್ಕಾರ ಅವರ ಕೊಡುಗೆ ಸ್ಮರಿಸಿದೆ ಎಂದ ಅವರು ಹೇಮರೆಡ್ಡಿ ಮಲ್ಲಮ್ಮ ಅವರು ಕುಟುಂಬ ಮಟ್ಟದಲ್ಲಿ ಪರಿವರ್ತನೆ ತಂದ ಮಹಾನ್ ಸಾಧ್ವಿ, ಶರಣರ ಹಾದಿಲ್ಲೇ ಸಾಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ತುಮಕೂರು ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್, ಜಿಲ್ಲಾ ರೆಡ್ಡಿ ಜನಸಂಘದ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಮೋಹನ್ ಕುಮಾರ್ ಪಟೇಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಾಂತ್ರಿಕ ಮೇಲ್ವಿಚಾರಕ ಸುರೇಶ್ ಕುಮಾರ್, ಮುಖಂಡರಾದ ಟಿ.ಆರ್.ಸದಾಶಿವಯ್ಯ, ವೆಂಕಟರೆಡ್ಡಿ ರಾಮರೆಡ್ಡಿ, ಕನ್ನಡ ಪ್ರಕಾಶ್, ಕೊಪ್ಪಲ್ ನಾಗರಾಜು, ಅನುಸೂಯಮ್ಮ ಮೊದಲಾದವರು ಭಾಗವಹಿಸಿದ್ದರು.
ಈ ವೇಳೆ ಸಾಹಿತಿ ವಿಧ್ವಾನ್ ಎಂ.ಜಿ.ಸಿದ್ಧರಾಮಯ್ಯ ಅವರು ಸಂಗ್ರಹಿಸಿದ ಬಸವಣ್ಣನವರ ವಚನಗಳ ಕೃತಿ ಬಿಡುಗಡೆ ಮಾಡಲಾಯಿತು.

Get real time updates directly on you device, subscribe now.

Comments are closed.

error: Content is protected !!