ಅಬ್ಬರಿಸಿದ ಭರಣಿ ಮಳೆ- ರೈತರಲ್ಲಿ ಹರ್ಷ

ಬಿಸಿಲ ತಾಪಮಾನಕ್ಕೆ ತಂಪೆರೆದ ಮಳೆರಾಯ- ಬೆಳೆಗೆ ಜೀವ ಕಳೆ

30

Get real time updates directly on you device, subscribe now.


ತುಮಕೂರು: ಕಳೆದ 7-8 ತಿಂಗಳಿಂದ ಮಳೆಯಿಲ್ಲದೆ ಭೀಕರ ಬರ, ಮಿತಿ ಮೀರಿದ ಬಿಸಿಲಿನ ಝಳದಿಂದ ಬಸವಳಿದು ಮಳೆಗಾಗಿ ಆಗಸದತ್ತ ಮುಖ ಮಾಡಿದ್ದ ರೈತ ಸಮೂಹ ಹಾಗೂ ಜನಸಾಮಾನ್ಯರ ಮೊಗದಲ್ಲಿ ರಾತ್ರಿ ಸುರಿದ ವರ್ಷಧಾರೆ ಮಂದಹಾಸ ಮೂಡಿಸಿದೆ.
ಭರಣಿ ಮಳೆ ಹುಯ್ದರೆ ಧರಣಿಯೆಲ್ಲಾ ಆರಂಭ ಎಂಬ ಗಾದೆ ಮಾತಿದೆ, ಹಾಗಾಗಿ ಭರಣಿ ಮಳೆಗಾಗಿ ರೈತ ಸಮೂಹ ಆಗಸದತ್ತ ಮುಖಮಾಡಿ ಕುಳಿತಿದ್ದರು, ರಾಜಧಾನಿ ಬೆಂಗಳೂರು, ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ಇತರೆಡೆಗಳಲ್ಲಿ ಭರಣಿ ಮಳೆಯಾಗುತ್ತಿದ್ದರೂ ಅದೇಕೋ ಏನೋ ತುಮಕೂರು ಸುತ್ತಮುತ್ತ ಮಾತ್ರ ಮಳೆಯ ಲಕ್ಷಣವೇ ಕಾಣುತ್ತಿರಲಿಲ್ಲ, ಮೊದಲೇ ಭೀಕರ ಬರದಿಂದ ಕಂಗೆಟ್ಟಿದ್ದ ಕಲ್ಪತರು ನಾಡಿನ ಜನತೆಗೆ ಭರಣಿ ಮಳೆ ಬಾರದಿರುವುದು ಮತ್ತಷ್ಟು ಆತಂಕಕ್ಕೆ ದೂಡಿತ್ತು,
ಶುಕ್ರವಾರ ರಾತ್ರಿ ಸುಮಾರು 11.20 ರಿಂದ 1 ಗಂಟೆ ವರೆಗೂ ಸಿರಿದ ಭರಣಿ ಮಳೆ ಕೊನೆ ಹಂತದಲ್ಲಿ ಇಳೆಗೆ ತಂಪೆರೆದಿರುವುದು ರೈತರಲ್ಲಿ ಎಲ್ಲಿಲ್ಲದ ಸಂತಸ ತಂದಿದೆ.
ಕಳೆದ 7-8 ತಿಂಗಳಿಂದ ವರ್ಷಧಾರೆ ಇಲ್ಲದೆ ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನ ಸಾಮಾನ್ಯರಿಗೆ ರಾತ್ರಿ ಸುರಿದ ಮಳೆ ಇಳೆಗೆ ತಂಪೆರೆದಿದ್ದು, ಬಿಸಿಲಿನ ಬೇಗೆಯಿಂದ ಬಾಡುತ್ತಿದ್ದ ಅಡಿಕೆ, ತೆಂಗು, ಬಾಳೆ ಸೇರಿದಂತೆ ಇನ್ನಿತರೆ ಬೆಳೆ ವರುಣ ಕೃಪೆಯಿಂದ ಕೊಂಚ ನಳನಳಿಸುವಂತಾಗಿದೆ.

ರಾತ್ರಿ ಭರಣಿ ಮಳೆ ಕೊನೆಯ ಹಂತದಲ್ಲಿ ಸುರಿದಿರುವುದು ಕೃಷಿ ಚಟುವಟಿಕೆ ಆರಂಭಿಸಲು ಶುಭ ಸೂಚನೆಯಾಗಿದೆ ಎಂಬುದು ರೈತರ ಸಂತಸದ ಮಾತು.
ಬಿರು ಬೇಸಿಗೆ, ಅತಿಯಾದ ತಾಪಮಾನದಿಂದ ಜನಸಾಮಾನ್ಯರು ಮಧ್ಯಾಹ್ನ ಇರಲಿ, ರಾತ್ರಿ ವೇಳೆ ಗಲಿ ಮನೆಯಲ್ಲಿ ಇರಲಾರದೆ, ನಿದ್ದೆ ಮಾಡಲಾಗದೆ ಬಸವಳಿಯುತ್ತಾ ಮಳೆಗಾಗಿ ದೇವರಲ್ಲಿ ಮೊರೆಯಿಡುತ್ತಿದ್ದರು, ಕೊನೆಗೂ ವರುಣ ಕೃಪೆ ತೋರಿ ರಾತ್ರಿ ಭೂಮಿಗೆ ತಂಪೆರೆದಿರುವುದು ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಜನರಲ್ಲಿ ಹರ್ಷ ಮೂಡಿಸಿದೆ.

ಭರಣಿ ಮಳೆ ಇಳೆಗೆ ತಂಪೆರೆದಿದ್ದು, ಕೃತಿಕಾ ಮಳೆ ಆರಂಭವಾಗಲಿದೆ, ಇನ್ನು ಮುಂದಿನ ಮಳೆ ನಕ್ಷತ್ರಗಳು ಕೃಪೆ ತೋರಿದರೆ ಸಾಕು, ಇಷ್ಟು ಭೀಕರ ಬರದ ಬೇಗೆಯಿಂದ ಬೇಯ್ದಿದ್ದೇವೆ, ಈ ಭೀಕರತೆಯಿಂದ ಹೊರ ಬರಲು ಮಳೆರಾಯ ಬಂದರೆ ಸಾಕು ಎಂಬ ಮಾತುಗಳು ತುಮಕೂರು ಸೇರಿದಂತೆ ಜಿಲ್ಲೆಯಾದ್ಯಂತ ರೈತರಿಂದ ಕೇಳಿ ಬಂದಿವೆ.
ಕಳೆದ ವರ್ಷ ಬರದಿಂದಾಗಿ ಇಟ್ಟಿದ್ದ ಬೆಳೆಯೂ ಕೈಗೆ ಸಿಗದೆ ನಷ್ಟ ಅನುಭವಿಸಿದ್ದೆವು, ಈ ಬಾರಿಯಾದರೂ ಸಂತೃಪ್ತಿಯಾಗಿ ಬೆಳೆಯಾಗುವಂತೆ ಮಳೆ ಆಶೀರ್ವದಿಸಿದರೆ ಸಾಕು ಎಂದು ರೈತರು ದೇವರಲ್ಲಿ ಮೊರೆಯಿಡುತ್ತಿದ್ದರು, ರೈತರ ಬೇಡಿಕೆಯಂತೆಯೇ ರಾತ್ರಿ ಕೊನೆ ಹಂತದಲ್ಲಿ ಭರಣಿ ಮಳೆ ಅಬ್ಬರಿಸಿರುವುದು ಅನ್ನದಾತರಲ್ಲಿ ಸಮಾಧಾನ ತಂದಿದೆ.

Get real time updates directly on you device, subscribe now.

Comments are closed.

error: Content is protected !!