ನೈರ್ಮಲ್ಯ ನಿರ್ವಹಣೆಗೆ ಎಲ್ಲರ ಸಹಕಾರ ಅಗತ್ಯ

38

Get real time updates directly on you device, subscribe now.


ಕುಣಿಗಲ್: ಪಟ್ಟಣದಲ್ಲಿ ನೈರ್ಮಲ್ಯ ನಿರ್ವಹಣೆ ಸೇರಿದಂತೆ ಉತ್ತಮ ಪರಿಸರ ಸಂರಕ್ಷಣೆಗೆ ಕೋಳಿ, ಮೇಕೆ, ಕುರಿ ಮಾಂಸ ಮಾರಾಟಗಾರರ ಸಹಕಾರ ಅತ್ಯಗತ್ಯವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಂಜುಳಾ ಹೇಳಿದರು.
ಸೋಮವಾರ ಪುರಸಭೆ ಸಭಾಂಗಣದಲ್ಲಿ ಕೋಳಿ, ಕುರಿ, ಮೇಕೆ ಮಾಂಸ ಮಾರಾಟಗಾರರಿಗೆ ಹಮ್ಮಿಕೊಳ್ಳಲಾದ ತ್ಯಾಜ್ಯ ನಿರ್ವಹಣೆ ಸಭೆಯಲ್ಲಿ ಮಾತನಾಡಿ, ಪಟ್ಟಣದಲ್ಲಿ ಸಾಕಷ್ಟು ಮಂದಿ ಮಾರಾಟಗಾರರಿದ್ದು ಮೇಕೆ, ಕುರಿ ಮಾಂಸ ನಿರ್ವಹಣೆಯ ತ್ಯಾಜ್ಯ, ಕೋಳಿ ಮಾಂಸ ನಿರ್ವಹಣೆ ತ್ಯಾಜ್ಯ ವಿಲೆವಾರಿ ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕಿದೆ, ಇದಕ್ಕೆ ಸಂಬಂಧಿಸಿದಂತೆ ತ್ಯಾಜ್ಯ ನಿರ್ವಹಣೆ ನಿಯಮಗಳು ಜಾರಿಯಲ್ಲಿದೆ, ಎಲ್ಲೆಂದರಲ್ಲಿ ಮಾಂಸ ನಿರ್ವಹಣೆ ತ್ಯಾಜ್ಯ ವಿಲೆ ಮಾಡುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಜೊತೆಯಲ್ಲಿ ಹಲವು ಸಮಸ್ಯೆಗೂ ಕಾರಣವಾಗುತ್ತದೆ, ಈ ಹಿನ್ನೆಲೆಯಲ್ಲಿ ಮಾರಾಟಗಾರರು ಪುರಸಭೆ ವಿವಿಧ ನಿಯಮಾವಳಿ ಪ್ರಕಾರ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಸಹಕಾರ ನೀಡಿ ಉತ್ತಮ ನೈರ್ಮಲ್ಯ ನಿರ್ವಹಣೆಗೆ ಸಹಕಾರ ನೀಡಬೇಕು, ನಿಯಮ ಉಲ್ಲಂಸಿದಲ್ಲಿ ಕಾನೂನು ಕ್ರಮ ಅನಿವಾರ್ಯವಾಗುತ್ತದೆ ಎಂದರು.

ಪರಿಸರ ಅಭಿಯಂತರ ಚಂದ್ರಶೇಖರ ಮಾತನಾಡಿ, ಮಾಂಸ ನಿರ್ವಹಣೆ ತ್ಯಾಜ್ಯದ ಸಾಗಾಣೆಗೆ ಪುರಸಭೆಯಿಂದ ಅಗತ್ಯ ಕ್ರಮ ಕೈಗೊಂಡು ವಾಹನವನ್ನು ಅಂಗಡಿಗಳ ಬಳಿ ಕಳಿಸಿದರೂ ಕೆಲವರು ತ್ಯಾಜ್ಯವನ್ನು ಪಟ್ಟಣದ ಹೊರವಲಯದ ಮುಖ್ಯರಸ್ತೆ, ಕೆರೆ ಅಂಗಳ ಇತರೆಡೆ ಹಾಕುತ್ತಿರುವುದು ಹಲವು ಸಮಸ್ಯೆಗೆ ಕಾರಣವಾಗಿದೆ, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪೀಠದ ಸ್ಪಷ್ಟ ಆದೇಶದ ಮೇರೆಗೆ ಪ್ರಾಣಿ, ಪಕ್ಷಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ವಿಲೆ ಮಾಡುವಂತಿಲ್ಲ, ಈ ಬಗ್ಗೆ ನಿರ್ಲಕ್ಷ್ಯ ವಹಿಸಿದಲ್ಲಿ ಸ್ಥಳೀಯ ಪ್ರಾಧಿಕಾರದ ಮೇಲೂ ಕ್ರಮ ಜರುಗಿಸಬಹುದಾಗಿದೆ, ಆದ್ದರಿಂದ ಎಲ್ಲಾ ಮಾರಾಟಗಾರರು ತಮ್ಮ ಜವಾಬ್ದಾರಿ ಅರಿತು ತ್ಯಾಜ್ಯ ನಿರ್ವಹಣೆ ನಿಟ್ಟಿನಲ್ಲಿ ಸಹಕಾರ ನೀಡಬೇಕೆಂದು ಮನವಿ ಮಾಡಿ, ನಿಯಮಗಳು ಸೂಕ್ತವಾಗಿ ಪಾಲನೆ ಮಾಡದೆ ಎಲ್ಲೆಂದರಲ್ಲಿ ತ್ಯಾಜ್ಯ ವಿಲೆಮಾಡುವ ಮಳಿಗೆಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ಹಾಜರಿದ್ದ ಮಾರಾಟಗಾರರು, ತ್ಯಾಜ್ಯ ಸಾಗಿಸುವ ಪುರಸಭೆ ವಾಹನ ಸಮರ್ಪಕವಾಗಿ ಬರುವುದಿಲ್ಲ, ಮನಬಂದಂತೆ ಬರುತ್ತಾರೆ, ಸರಿಯಾಗಿ ಒಂದು ಸಮಯಕ್ಕೆ ಬರೋದಿಲ್ಲ, ಕೆಲವೊಮ್ಮೆ ಬರೋದೆ ಇಲ್ಲ, ತ್ಯಾಜ್ಯ ಮಳಿಗೆಯಲ್ಲಿ ಇಟ್ಟುಕೊಳ್ಳಲು ಆಗದ ಸ್ಥಿತಿ ಇದೆ, ವಾಹನ ಸರಿಯಾಗಿ ಬರಬೇಕೆಂದು ಒತ್ತಾಯಿಸಿದರು, ಇದಕ್ಕೆ ಸ್ಪಂದಿಸಿದ ಹಿರಿಯ ಆರೋಗ್ಯ ನಿರೀಕ್ಷಕ ಚಿಕ್ಕಸ್ವಾಮಿ, ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳೊಂದಿಗೆ ಚರ್ಚಿಸಿ, ವಾಹನ ಸರಿಯಾದ ಸಮಯಕ್ಕೆ ಮಳಿಗೆ ಬಳಿ ಕಳಿಸುವ ಭರವಸೆ ನೀಡಿದರು. ಆರೋಗ್ಯ ನಿರೀಕ್ಷಕ ಶ್ರೀಕಾಂತ್, ಡೇ ನಲ್ಮ್ ವ್ಯವಸ್ಥಾಪಕ ಕೃಷ್ಣಪ್ಪ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!