ಲಿಂಕ್ ಕೆನಾಲ್ ವಿರುದ್ಧ ಹೋರಾಟಕ್ಕೆ ಸಂಘಟನೆಗಳ ಬೆಂಬಲ

26

Get real time updates directly on you device, subscribe now.


ತುಮಕೂರು: ಕುಣಿಗಲ್ ಮೂಲಕ ಮಾಗಡಿ ತಾಲೂಕಿಗೆ ಹೇಮಾವತಿ ನಾಲೆಯಿಂದ ಎಕ್ಸ್ಪ್ರೆಸ್ ಕೆನಾಲ್ ಮೂಲಕ ನೀರು ತೆಗೆದುಕೊಂಡು ಹೊಗುವ ಕಾಮಗಾರಿಗೆ ಜಿಲ್ಲೆಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಜಿಲ್ಲೆಯ ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ವಿವಿಧ ಸಂಘ, ಸಂಸ್ಥೆಗಳ ಮುಖ್ಯಸ್ಥರು ಸಭೆ ಸೇರಿ ಮೇ 16 ರಂದು ನಡೆಯುವ ಹೇಮಾವತಿ ಹೋರಾಟ ಸಮಿತಿಯ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ.
ನಗರದ ಖಾಸಗಿ ಹೊಟೇಲ್ ನಲ್ಲಿ ಸಭೆ ಸೇರಿದ್ದ ಕನ್ನಡಸೇನೆಯ ಧನಿಯಕುಮಾರ್, ಕನ್ನಡ ಮತ್ತು ಸಂಸ್ಕೃತಿ ವೇದಿಕೆಯ ಕನ್ನಡ ಪ್ರಕಾಶ್, ತುಮಕೂರು ಜಿಲ್ಲಾ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವೀರೇಂದ್ರ ಪ್ರಸಾದ್, ಭಗತ್ ಕ್ರಾಂತಿ ಸೇನೆಯ ಜಿಲ್ಲಾಧ್ಯಕ್ಷ ಆರಾಧ್ಯ, ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಸವರಾಜು, ಅಖಿಲ ಕರ್ನಾಟಕ ಕಾರ್ಮಿಕರ ಪ್ರಜಾ ವೇದಿಕೆಯ ರಾಜ್ಯ ಅಧ್ಯಕ್ಷ ಮೀಸೆ ಸತೀಶ್, ಕರ್ನಾಟಕ ರಕ್ಷಣಾ ವೇದಿಕೆಯ ಅರುಣ್ ಕುಮಾರ್, ಮಾಜಿ ಕಾರ್ಪೋರೇಟರ್ ಬಾಲಕೃಷ್ಣ ಅವರು ಮೇ 16 ರಂದು ಜಿಲ್ಲೆಯ ಜನಪ್ರತಿನಿಧಿಗಳು, ಮಠಾಧೀಶರು, ರೈತ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆಯುವ ಹೋರಾಟದಲ್ಲಿ ಕನ್ನಡ ಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳಲು ತೀರ್ಮಾನ ಕೈಗೊಂಡರು.

ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ, ಹಲವಾರು ಮಹನೀಯರು ಹೋರಾಟದ ಫಲವಾಗಿ ಜಿಲ್ಲೆಗೆ ಹೇಮಾವತಿ ನೀರು ಹರಿದಿದೆ, ಜಿಲ್ಲೆಗೆ ನಿಗದಿಯಾಗಿರುವ 24.08 ಟಿಎಂಸಿ ನೀರು ಯೋಜನೆ ಪ್ರಾರಂಭವಾದ ಅಂದಿನಿಂದ ಇಂದಿನವರೆಗೆ ಪೂರ್ಣ ಪ್ರಮಾಣದಲ್ಲಿ ಹರಿದಿಲ್ಲ, ಹೀಗಿರುವಾಗ ನಾಲೆಯ ಮಧ್ಯ ಭಾಗದಿಂದ ಕೊಳವೆ ಮೂಲಕ ನಮ್ಮ ಜಿಲ್ಲೆಯ ನೀರನ್ನು ಬೇರೆ ಜಿಲ್ಲೆಗೆ ತೆಗೆದುಕೊಂಡು ಹೋಗಲು ಕಾಮಗಾರಿ ನಡೆಸುತ್ತಿರುವುದು ಖಂಡನೀಯ, ಇದರಿಂದ ಇಡೀ ಜಿಲ್ಲೆಯ ಕುಡಿಯುವ ನೀರಿನ ಮೇಲೆ ದೊಡ್ಡ ದುಷ್ಪರಿಣಾಮ ಬೀರಲಿದೆ, ಹಾಗಾಗಿ ಯೋಜನೆಯನ್ನು ಸರಕಾರ ಕೂಡಲೇ ರದ್ದು ಪಡಿಸಿ, ಹಾಲಿ ಇರುವ ಓಪನ್ ಕೆನಾಲ್ ಮೂಲಕವೇ ಕುಣಿಗಲ್ ತಾಲೂಕಿಗೆ ನೀರು ತೆಗೆದುಕೊಂಡು ಹೋಗಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಯ ಕುಡಿಯುವ ನೀರಿಗಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ಭಾಗಿಯಾಗುವಂತೆ ಈಗಾಗಲೇ ಹೊಟೇಲ್ ಮಾಲೀಕರ ಸಂಘ, ಬಸ್ ಮಾಲೀಕರು ಮತ್ತು ಚಾಲಕರ ಸಂಘ, ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘ, ಆಟೋ ಚಾಲಕರು ಮತ್ತು ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಮನವಿ ಮಾಡಲಾಗಿದೆ, ಅಂದು ಸುಮಾರು 15- 20 ಸಾವಿರ ಜನರು ಸೇರಿ ಪ್ರತಿಭಟನೆ ನಡೆಸುವ ಮೂಲಕ ಜಿಲ್ಲೆಗೆ ಹಂಚಿಕೆಯಾಗಿರುವ ನೀರನ್ನು ಹೊರ ಜಿಲ್ಲೆಗೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ, ಒಂದು ವೇಳೆ ನೀರು ತೆಗೆದುಕೊಂಡು ಹೋಗಲೇ ಬೇಕು ಎಂದಾಂದರೆ ಮೊದಲು ತುಮಕೂರು ಜಿಲ್ಲೆಗೆ ಹೆಚ್ಚುವರಿ ಅಲೋಕೇಷನ್ ಮಾಡಿಸಿ ನಂತರ ಹಾಲಿ ಇರುವ ನಾಲೆಯ ಮೂಲಕ ನೀರು ತೆಗೆದುಕೊಂಡು ಹೊಗಲಿ, ಪೈಪ್ ಲೈನ್ ಮೂಲಕ ನೀರು ತೆಗೆದುಕೊಂಡು ಹೋಗಲು ಎಂದಿಗೂ ಬಿಡುವುದಿಲ್ಲ ಎಂದು ಧನಿಯಕುಮಾರ್ ತಿಳಿಸಿದರು.

ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಸವರಾಜು ಮಾತನಾಡಿ, ಈ ಹಿಂದೆ ಕಾರೇಹಳ್ಳಿ ಮುಖ್ಯ ತಿರುವು ಮೂಲಕ ಮಾಗಡಿಗೆ ನೀರು ತೆಗೆದುಕೊಂಡು ಹೋಗಲು ಮುಂದಾದಾಗ ರೈತ ಸಂಘ ಹಾಗೂ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅದನ್ನು ಕೈಬಿಟ್ಟಿದ್ದರು, ಈಗ ಕಾರೇಹಳ್ಳಿ ಮುಖ್ಯ ತಿರುವಿಗಿಂತ ಹಿಂದೆಯೇ ಡಿ.ರಾಮಪುರದ ಬಳಿ ಪೈಪ್ ಲೈನ್ ಮೂಲಕ ತೆಗೆದುಕೊಂಡು ಹೊಗಲು ಮುಂದಾಗಿದೆ, ಈ ಯೋಜನೆಯ ಹಿಂದೆ ರಾಮನಗರ ಜಿಲ್ಲೆಯ ಜನಪ್ರತಿನಿಧಿಗಳ ಸ್ವಹಿತಾಸಕ್ತಿ ಅಡಗಿದೆ, ಈ ಯೋಜನೆ ಪೂರ್ಣಗೊಂಡರೆ ತುಮಕೂರು ಜಿಲ್ಲೆಯ ಜನರು ಕುಡಿಯುವ ನೀರಿಗೂ ಪರದಾಡಬೇಕಾಗುತ್ತದೆ, ಹಾಗಾಗಿ ಈ ಯೋಜನೆಗೆ ಎಂದಿಗೂ ಅವಕಾಶ ನೀಡುವುದಿಲ್ಲ,ಯಾವ ಹಂತದ ಹೋರಾಟಕ್ಕೂ ರೈತ ಸಂಘ ಕೈಜೋಡಿಸಲಿದೆ ಎಂದರು.

Get real time updates directly on you device, subscribe now.

Comments are closed.

error: Content is protected !!