ತುಮಕೂರು: ಜಿಲ್ಲೆಯಲ್ಲಿ ನರೇಗಾ ಸೇರಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಬರುವ ಪ್ರತಿಯೊಂದು ಯೋಜನೆಗಳ ಪ್ರಗತಿ ಇಮ್ಮಡಿಯಾಗುವಂತೆ ಶ್ರಮಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು.ಜಿ. ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಜರುಗಿದ ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳ ಮಾರ್ಗಸೂಚಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಗ್ರಾಮೀಣ ಜನರಿಗೆ ಹೆಚ್ಚು ಅನುಕೂಲವಾಗುತ್ತಿರುವ ನರೇಗಾ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದರ ಮೂಲಕ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಪ್ರಗತಿ ಸಾಧನೆ ಮಾಡಬೇಕೆಂದರಲ್ಲದೆ ಜಿಲ್ಲೆಯಲ್ಲಿ ಈಗಾಗಲೇ ನರೇಗಾ ಯೋಜನೆಯಡಿ 70,000 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ ಹಾಗೂ 461 ಕೋಟಿ ರೂ. ಗಳಷ್ಟು ಅನುದಾನದ ಕಾಮಗಾರಿ ಅನುಷ್ಠಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳಿಗೆ ತರಬೇತಿ
ಬರುವ ಜೂನ್ ಮಾಹೆ 2ನೇ ವಾರದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ನರೇಗಾ ಯೋಜನೆ ಸೇರಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಬರುವ ಯೋಜನೆಗಳ ಸಮಗ್ರ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಒಂದು ದಿನದ ವಿಷಯಾಧಾರಿತ ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ತರಬೇತಿ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ಜಿಲ್ಲೆಯು ಕಳೆದ ವರ್ಷದಲ್ಲಿ ಮಾನವ ದಿನಗಳ ಸೃಜನೆಯಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸಿತ್ತು, ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯತಿ ಮಿಷನ್ 500 ಅಭಿಯಾನವೇ ಈ ಸಾಧನೆಗೆ ಕಾರಣ, ರೈತರಿಗೆ ಅನುಕೂಲವಾಗುವ ಕಾಮಗಾರಿ ಅನುಷ್ಠಾನ ಮಾಡುವ ಮೂಲಕ ಗ್ರಾಮೀಣರಿಗೆ ಹೆಚ್ಚು ಉದ್ಯೋಗ ನೀಡುವ ನಿಟ್ಟಿನಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಅಭಿಯಾನದಡಿ ಈ ವರ್ಷವೂ ಪ್ರತೀ ಗ್ರಾಮ ಪಂಚಾಯತಿಗಳಲ್ಲಿ 500 ವೈಯಕ್ತಿಕ ಕಾಮಗಾರಿ ಕೈಗೊಳ್ಳುವ ಗುರಿ ನಿಗದಿ ಮಾಡಲಾಗಿದೆ ಎಂದರು.
ಶಾಲೆ ಮತ್ತು ಚರಂಡಿಗಳಿಗೆ ಹೆಚ್ಚಿನ ಆದ್ಯತೆ
ಜಿಲ್ಲೆಯಲ್ಲಿ ಈಗಾಗಲೇ ಪ್ರಾರಂಭವಾಗಿರುವ 1000 ಶಾಲಾಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಹಾಗೂ ಸ್ವಚ್ಛತೆ ಅಂಗವಾಗಿ 3 ಲಕ್ಷ ಮೀಟರ್ ಚರಂಡಿ ಕಾಮಗಾರಿಗೆ ಈಗಾಗಲೇ ಅನುಮೋದನೆ ನೀಡಿದ್ದು, ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಸಿದ್ಧತೆ ನಡೆಸಬೇಕೆಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಹಾಲಸಿದ್ಧಪ್ಪ ಪೂಜೇರಿ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ರವೀಶ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಾರದಮ್ಮ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಬಾಲಕೃಷ್ಣ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳು ಹಾಜರಿದ್ದರು.
Comments are closed.