ಕುಣಿಗಲ್: ಕುಣಿಗಲ್ ತಾಲೂಕು ಬರಪೀಡಿತ ಪ್ರದೇಶವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸೂಚನೆ ಮೇರೆಗೆ ಬುಧವಾರ ಮೇವು ಬ್ಯಾಂಕ್ ಆರಂಭಿಸಲು ಸಿದ್ಧತೆ ನಡೆಸಲಾಗಿದ್ದು ಕೊನೆ ಕ್ಷಣದಲ್ಲಿ ಅಧಿಕಾರಿಗಳು ಕಾರ್ಯಕ್ರಮ ಮುಂದೂಡಿದ್ದರಿಂದ ಜಾನುವಾರು ಮಾಲೀಕರು ಪರದಾಡುವಂತಾಯಿತು.
ಬರಪೀಡಿತ ಪ್ರದೇಶವಾದ್ದರಿಂದ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೇವು ಬ್ಯಾಂಕ್ ಆರಂಭಿಸಲು ಸೂಚನೆ ನೀಡಿದ್ದರಿಂದ ತಾಲೂಕು ಆಡಳಿತ ಕಸಬಾ ಹೋಬಳಿಯ ಟಿ.ಹೊಸಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಮೇವು ಬ್ಯಾಂಕ್ ಆರಂಭಿಸುವುದಾಗಿ ಪ್ರಕಟಿಸಿದ್ದರು, ಈ ಹಿನ್ನೆಲೆಯಲ್ಲಿ ಜಾನುವಾರು ಮಾಲೀಕರು ಪಶು ವೈದ್ಯ ಇಲಾಖಾಧಿಕಾರಿಗಳಿಂದ ತಾವು ಸಾಕಿರುವ ರಾಸುಗಳ ದಾಖಲೆ ಸಮೇತ ಮೇವು ಪಡೆಯಲು ತಮ್ಮ ಗ್ರಾಮಗಳಿಂದ ಟಿ.ಹೊಸಹಳ್ಳಿಗೆ ಬುಧವಾರ ಬೆಳಗ್ಗೆ ಆಗಮಿಸಿದ್ದರು.
ಈ ಮಧ್ಯೆ ತಾಲೂಕಿನ ಕಂದಾಯ ಇಲಾಖೆಯ ಕೆಳಹಂತದ ಸಿಬ್ಬಂದಿ ಸಹ ಗ್ರಾಮಗಳ ವ್ಯಾಪ್ತಿಯಲ್ಲಿ ಮೇವು ಬ್ಯಾಂಕ್ ಆರಂಭಿಸುವ ಮಾಹಿತಿ ನೀಡಿದ್ದರು, ಮೇವು ಪಡೆಯಲು ವಿವಿಧೆಡೆಯಿಂದ ಟಿ.ಹೊಸಹಳ್ಳಿಗೆ ಆಗಮಿಸಿದ ಜಾನುವಾರು ಮಾಲೀಕರಿಗೆ ಅಚ್ಚರಿ ಕಾದಿತ್ತು, ತುರ್ತು ಕಾರ್ಯದ ನಿಮಿತ್ತ ತಹಶೀಲ್ದಾರ್ ಸೇರಿದಂತೆ ಕಂದಾಯ ಇಲಾಖೆಯ ಮೇಲಾಧಿಕಾರಿಗಳು ಬೇರೆಡೆ ತೆರಳಿದ್ದರಿಂದ ಮೇವು ಬ್ಯಾಂಕ್ ಉದ್ಘಾಟನೆಯಾಗದೆ, ತಮ್ಮ ಜಾನುವಾರುಗಳಿಗೆ ಮೇವು ತರಲು ಬಂದಿದ್ದ ಮಾಲೀಕರು ನಿರಾಸೆಗೊಂಡರು, ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಜೆಡಿಎಸ್ ವಕ್ತಾರ ತರೀಕೆರೆ ಪ್ರಕಾಶ್, ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದರೂ ಮೇವು ಬ್ಯಾಂಕ್ ಆರಂಭಿಸಲು ಮೀನ ಮೇಷಾ ಎಣಿಸಿ ಕೊನೆಗೆ ಆರಂಭಿಸಲು ಸರ್ಕಾರ ಮುಂದಾಗಿದೆ, ಆದರೆ ಬುಧವಾರ ಅಧಿಕಾರಿಗಳು ಅನ್ಯ ಕಾರ್ಯ ನಿಮಿತ್ತ ತೆರಳಿದ್ದು ಮೇವು ವಿತರಣೆಯಾಗಿಲ್ಲ, ಅಧಿಕಾರಿಗಳು, ಪಶು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರೆ, ಪಶು ವೈದ್ಯಾಧಿಕಾರಿಗಳೇ ಮೇವು ವಿತರಣೆ ಮಾಡುತ್ತಿದ್ದರು, ಆದರೆ ಅಧಿಕಾರಿಗಳ ನಿರಾಸಕ್ತಿಯಿಂದಾಗಿ ಜಾನುವಾರು ಮಾಲೀಕರು ಪರದಾಡುವಂತಾಗಿದ್ದು ಇನ್ನಾದರೂ ಎಚ್ಚೆತ್ತು ಮೇವು ಬ್ಯಾಂಕ್ ನಲ್ಲಿ ಮೇವು ವಿತರಿಸಿ ಜಾನುವಾರು ಮಾಲೀಕರಿಗೆ ಅನುಕೂಲ ಮಾಡಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.
Comments are closed.