ತುಮಕೂರು: ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬೆಳ್ಳಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಹಾಲೆನೂರು ಲೇಪಾಕ್ಷ ಅವರು ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡುತ್ತಿದ್ದು, ಅವರನ್ನು ಪಕ್ಷದಿಂದ ವಜಾಗೊಳಿಸುವಂತೆ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಸೈಯದ್ ಸದಾತ್, ಕಾರ್ಯಕರ್ತರಾದ ರಘು ಕುಮಾರ್, ಹರ್ಷವರ್ಧನ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ಒಂದು ತತ್ವ, ಸಿದ್ಧಾಂತದ ಮೇಲೆ ನಡೆದುಕೊಂಡು ಬಂದಿರುವ ಪಕ್ಷ, ಇಲ್ಲಿ ವ್ಯಕ್ತಿ ಪೂಜೆಗಿಂತ ಪಕ್ಷಕ್ಕೆ ಹೆಚ್ಚು ಬೆಲೆಯಿದೆ, ಆದರೆ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಬಂದಂತಹ ಕೆಲವರು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಪಾಲಿಸದೆ, ಹಳೆಯ ಪಕ್ಷದ ರೀತಿಯಲ್ಲಿ ವ್ಯಕ್ತಿ ಪೂಜೆಗೆ ಮುಂದಾಗಿದ್ದಾರೆ, ಇದರಿಂದ ಮೂಲ ಕಾಂಗ್ರೆಸಿಗರು ಮುಜುಗರ ಅನುಭವಿಸುವಂತಾಗಿದೆ, ಹಾಗಾಗಿ ಪಕ್ಷದ ಮುಖಂಡರು ಮತ್ತು ರಾಜ್ಯ ಮಟ್ಟದ ನಾಯಕರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ಹಾಲೇನೂರು ಲೇಪಾಕ್ಷ ಅವರನ್ನು ಪಕ್ಷದಿಂದ ಹಾಗೂ ಬೆಳ್ಳಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕೆಂಬುದು ನಮ್ಮಗಳ ಒತ್ತಾಯವಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಈಗಾಗಲೇ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಿ ಡಿ.ಟಿ.ಶ್ರೀನಿವಾಸ್ ಅವರನ್ನು ಘೋಷಿಸಿದೆ, ಅವರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಹಿರಿಯ ಸಚಿವರ ಜೊತೆಗೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬೆಳ್ಳಾವಿ ಬ್ಲಾಕ್ ನ ಅಧ್ಯಕ್ಷರಾಗಿರುವ ಹಾಲೆನೂರು ಲೇಪಾಕ್ಷ ಅವರು ಪಕ್ಷದ ಅಧಿಕೃತ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಪರ ಕೆಲಸ ಮಾಡುವ ಬದಲು ಪಕ್ಷೇತರ ಅಭ್ಯರ್ಥಿಯಾಗಿರುವ ಶಿವರಾಜ್ ಎಂಬುವವರ ಜೊತೆಗೆ ಇಡೀ ಜಿಲ್ಲೆಯಾದ್ಯಂತ ಓಡಾಟ ನಡೆಸಿ ಶಿಕ್ಷಕರಿಂದ ಮತಯಾಚಿಸುತ್ತಿದ್ದಾರೆ, ಇದು ಪಕ್ಷವಿರೋಧಿ ಚಟುವಟಿಕೆಯಾಗಿದೆ, ಹಾಗಾಗಿ ಅವರನ್ನು ಪಕ್ಷದಿಂದ ಕೈಬಿಡಬೇಕು ಎಂಬುದು ನಮ್ಮಂತಹ ನಿಷ್ಠಾವಂತ ಕಾರ್ಯಕರ್ತರು ಒತ್ತಾಯವಾಗಿದೆ, ಒಂದು ವೇಳೆ ಪಕ್ಷದ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಜಿಲ್ಲಾ ಕಚೇರಿ ಮುಂಭಾಗದ ಧರಣಿ ನಡೆಸಲು ಸಿದ್ಧರಿರುವುದಾಗಿ ತಿಳಿಸಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಆರ್ಭಟದ ನಡುವೆಯೂ ಕಾಂಗ್ರೆಸ್ ಪಕ್ಷವನ್ನು ನಮ್ಮಂತಹ ಸಾವಿರಾರು ನಿಷ್ಠಾವಂತ ಕಾರ್ಯಕರ್ತರು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ, ಕಳೆದ ಚುನಾವಣೆಯಲ್ಲಿ ಸೋತ ಗೌರಿಶಂಕರ್ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದರಿಂದ ಪಕ್ಷಕ್ಕೆ ಬಲ ಬಂದಿದೆ ನಿಜ, ಆದರೆ ಅವರ ಜೊತೆಗೆ ಪಕ್ಷಕ್ಕೆ ಬಂದಿರುವ ಕಾರ್ಯಕರ್ತರು ಇಂದಿಗೂ ಜೆಡಿಎಸ್ ಪಕ್ಷದ ವ್ಯಕ್ತಿ ಪೂಜೆಯಿಂದ ಹೊರ ಬಂದಂತೆ ಕಾಣುತ್ತಿಲ್ಲ, ಇದು ನಮ್ಮಂತಹ ಮೂಲ ಕಾರ್ಯಕರ್ತರಿಗೆ ನೋವುಂಟು ಮಾಡುವ ವಿಚಾರವಾಗಿದೆ ಎಂದರು.
ಪಕ್ಷದ ಮುಖಂಡರು ಸಹ ಮೂಲ ಕಾರ್ಯಕರ್ತರನ್ನು ಕಡೆಗಣಿಸಿ ಹೊಸದಾಗಿ ಪಕ್ಷ ಸೇರಿದವರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಂತಹ ಹುದ್ದೆ ನೀಡಿ ಕಾರ್ಯಕರ್ತರಿಗೆ ನೋವುಂಟು ಮಾಡಿದರೂ ಸಹಿಸಿಕೊಂಡು ಪಕ್ಷದ ಹಿತದೃಷ್ಟಿಯಿಂದ ಸುಮ್ಮನಿದ್ದೇವು, ಆದರೆ ಪಕ್ಷ ವಿರೋಧಿ ಚಟುವಟಿಕೆ ಸಹಿಸಲು ಸಾಧ್ಯವಿಲ್ಲ, ಡಿ.ಸಿ.ಗೌರಿಶಂಕರ್ ಅವರು ಸಹ ಇದನ್ನು ತಮ್ಮ ಹಿಂಬಾಲಕರಿಗೆ ಮನವರಿಕೆ ಮಾಡಿಕೊಡಬೇಕು, ಕಾಂಗ್ರೆಸ್ ಪಕ್ಷಕ್ಕೆ ಬಂದ ನಂತರ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ದರಾಗಿ ಕೆಲಸ ಮಾಡುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.
Comments are closed.