ಲಿಂಕ್ ಕೆನಾಲ್ ವಿರೋಧಿಸಿ ಡಿಕೆಶಿ ಅಣಕು ಶವಯಾತ್ರೆ

34

Get real time updates directly on you device, subscribe now.


ತುಮಕೂರು: ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದ ಟೌನ್ ಹಾಲ್ ವೃತ್ತದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಣಕು ಶವಯಾತ್ರೆ ನಡೆಸಿದರು.
ನಗರದ ಟೌನ್ ಹಾಲ್ ವೃತ್ತದಲ್ಲಿ ಜಿಲ್ಲಾ ಕನ್ನಡ ಸೇನೆ ಅಧ್ಯಕ್ಷ ಧನಿಯಾ ಕುಮಾರ್ ನೇತೃತ್ವದಲ್ಲಿ ಸಮಾವೇಶಗೊಂಡ ವಿವಿಧ ಸಂಘಟನೆಗಳ ಕಾರ್ಯಕರ್ತರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಣಕು ಶವಯಾತ್ರೆ ನಡೆಸಿ ಮಾಗಡಿ ತಾಲ್ಲೂಕಿಗೆ ಹೇಮಾವತಿ ನೀರು ಕೊಂಡೊಯ್ಯುವ ಸಲುವಾಗಿ ಕೈಗೊಂಡಿರುವ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ಸರ್ಕಾರ ಕೈ ಬಿಡುಬೇಕು, ರಕ್ತ ಕೊಟ್ಟೇವು ಯಾವುದೇ ಕಾರಣಕ್ಕೂ ಒಂದು ಹನಿ ನೀರು ಸಹ ಬಿಡೆವು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಕುಮಾರ್, ಜಿಲ್ಲೆಯ ಜಲಮೂಲವಾದ ಹೇಮಾವತಿ ನಾಲೆಯಿಂದ ನೀರನ್ನು ಮಾಗಡಿ, ರಾಮನಗರ, ಕನಕಪುರ ತಾಲ್ಲೂಕಿಗೆ ತೆಗೆದುಕೊಂಡು ಹೋದರೆ ಇಲ್ಲಿ ಕುಡಿಯುವ ನೀರಿಗೂ ಸಮಸ್ಯೆಯಾಗುತ್ತದೆ, ಈ ಕಾಮಗಾರಿ ಸ್ಥಗಿತಗೊಳಿಸಲೇಬೇಕು ಎಂದು ಆಗ್ರಹಿಸಿದರು.

ಪೈಪ್ ಲೈನ್ ಮೂಲಕ ಮಾಗಡಿ, ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗುವುದರಿಂದ ಜಿಲ್ಲೆಯ ಜನರಿಗೆ ಕುಡಿಯುವ ನೀರು ಸಿಗದೆ ಅನ್ಯಾಯವಾಗುತ್ತದೆ, ಜಿಲ್ಲೆಗೆ ಹೇಮಾವತಿಯಿಂದ 24.5 ಟಿಎಂಸಿ ನೀರು ಹಂಚಿಕೆ ಮಾಡಿರುವಷ್ಟನ್ನೂ ಬಳಸಿಕೊಳ್ಳಲು ಆಗದಿರುವ ಪರಿಸ್ಥಿತಿ ಇದೆ, ಕೇವಲ 17 ರಿಂದ 18 ಟಿಎಂಸಿ ನೀರು ಮಾತ್ರ ನಮಗೆ ಸಿಗುತ್ತಿದೆ, ಪರಿಸ್ಥಿತಿ ಹೀಗಿದ್ದರೂ ಮಾಗಡಿ ತಾಲ್ಲೂಕಿಗೆ ನೀರು ತೆಗೆದುಕೊಂಡು ಹೋಗಲು ಹುನ್ನಾರ ನಡೆಸಿದ್ದಾರೆ, ಇದರಿಂದ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗಳಿಗೆ ತೊಂದರೆಯಾಗುತ್ತದೆ, ಹಾಗಾಗಿ ಸರ್ಕಾರ ಕೂಡಲೇ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ 900 ಕೋಟಿ ಹಣ ಮಂಜೂರಾಗಿದೆ, ಪೈಪ್ ಲೈನ್ ಮುಖಾಂತರ ಹಣ ಮಾಡುವ ಹುನ್ನಾರವೂ ಇದರಲ್ಲಿ ಅಡಗಿದೆ ಎಂದು ದೂರಿದರು.
ರೈತರಿಗೆ ನೋಟಿಸ್ ಸಹ ಕೊಡದೆ ಕಾಮಗಾರಿ ಆರಂಭಿಸಿದ್ದಾರೆ, ಕಾಮಗಾರಿ ನಡೆಸಿರುವ ಜಮೀನುಗಳ ರೈತರಿಗೆ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ, ಅಕ್ರಮವಾಗಿ ಕಾಮಗಾರಿ ಕೈಗೊಂಡಿರುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು, ಒಂದು ವೇಳೆ ಕಾಮಗಾರಿ ನಿಲ್ಲಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪಾದಯಾತ್ರೆ ನಡೆಸಿ ತುಮಕೂರು ಬಂದ್ ಆಚರಿಸಿ ಹೋರಾಟ ತೀವ್ರಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಲ್ಲ ಕನ್ನಡಪರ ಸಂಘಟನೆಗಳು ಸೇರಿ ಹೇಮಾವತಿ ಉಳಿವಿಗಾಗಿ ಹೋರಾಟ ಮಾಡಿದ್ದೇವೆ, ಮಾಗಡಿ, ರಾಮನಗರ, ಕನಕಪುರಕ್ಕೆ ಹೇಮಾವತಿ ನೀರು ತೆಗೆದುಕೊಂಡು ಹೋಗಲು ಹುನ್ನಾರ ಮಾಡಿರುವ ಡಿ.ಕೆ.ಶಿವಕುಮಾರ್ ಅವರ ಅಣಕು ಶವಯಾತ್ರೆ ನಡೆಸಿದ್ದೇವೆ, ಈ ಅಣಕು ಶವಯಾತ್ರೆಯನ್ನು ಡಿ.ರಾಂಪುರದಲ್ಲಿ ಕೊನೆಗೊಳಿಸಿ ಹೇಮಾವತಿ ಚಾನಲ್ ನಲ್ಲಿ ಮುಚ್ಚುತ್ತೇವೆ ಎಂದರು.

ನಗರದ ಟೌನ್ ಹಾಲ್ ವೃತ್ತದಲ್ಲಿ ನಡೆಸಿದ ಡಿ.ಕೆ.ಶಿವಕುಮಾರ್ ಅಣಕು ಶವಯಾತ್ರೆಯನ್ನು ಆ್ಯಂಬುಲೆನ್ಸ್ ಮುಖಾಂತರ ಡಿ. ರಾಂಪುರಕ್ಕೆ ಕೊಂಡೊಯ್ದ ವಿವಿಧ ಸಂಘಟನೆಗಳ ಕಾರ್ಯಕರ್ತರು ಅಲ್ಲಿ ಹೇಮಾವತಿ ನಾಲೆಗೆ ಎಸೆದು ಮಣ್ಣು ಮುಚ್ಚುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದರು.
ಈ ಹೋರಾಟದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಕನ್ನಡ ಪ್ರಕಾಶ್, ಉದಯ್, ಸಂತೋಷ್, ಮೀಸೆ ಸತೀಶ್, ಬಾಲಕೃಷ್ಣ, ರಾಮಚಂದ್ರರಾವ್, ಶಬ್ಬೀರ್ ಮತ್ತಿತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!