ಕೊರಟಗೆರೆ: ಸ್ಮಾರ್ಟ್ ಸಿಟಿಯಲ್ಲಿ ಡಬಲ್ ಸೈಟ್, ಖಾಸಗಿ ಕಾಲೇಜಿನಲ್ಲಿ ಮೆಡಿಕಲ್ ಸೀಟ್, ಸ್ಮಾಲ್ ಇಂಡಸ್ಟ್ರಿಯಲ್ಲಿ ಉನ್ನತ ಹುದ್ದೆ, ತುಮಕೂರು- ಶಿರಾದಲ್ಲಿ ಮನೆ ಸೈಟ್ ಮಾರಾಟ ಮಾಡಿಕೊಡುವ ಆಮಿಷವೊಡ್ಡಿ ಅಮಾಯಕ ಜನರನ್ನು ವಂಚಿಸಿ ಕೋಟ್ಯಾಂತರ ರೂ. ವಂಚನೆ ಮಾಡಿರುವ ಕೊರಟಗೆರೆಯ ಮಹಮದ್ ಜುಬೇರ್ ಎಂಬಾತ ಈಗ ಬೆಂಗಳೂರಿನ ಕೆಂಗೇರಿ ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ.
ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ 15ನೇ ವಾರ್ಡ್ನ ಸಮಿವುಲ್ಲ ಎಂಬಾತನ ಮಗನಾದ ಮಹಮದ್ ಜುಬೇರ್ ಮತ್ತು ಆತನ ಹೆಂಡತಿ ರುಹಿ ಜುವಾರಿ ಈಗ ಕೆಂಗೇರಿ ಪೊಲೀಸರ ಅತಿಥಿಯಾಗಿದ್ದಾರೆ, ಕೋಟ್ಯಾಂತರ ರೂ. ವಂಚನೆಯ ಜೊತೆ ರಾಜ್ಯಪಾಲರು ಮತ್ತು ರಿಸರ್ವ್ ಬ್ಯಾಂಕ್ ನ ಮುದ್ರೆ, ಸಹಿಯ ಜೊತೆ ಪತ್ರವು ನಕಲಿಯ ದೂರು ಸೇರಿ ಈತನ ಮೇಲೆ ಈಗ 15 ಪ್ರಕರಣಗಳಿವೆ.
ಕೊರಟಗೆರೆ ಪಟ್ಟಣದಲ್ಲಿ ಕಾರ್ಯಾಚರಣೆ: ಬೆಂಗಳೂರು ನಗರದ ಕೆಂಗೇರಿ ಪಿಎಸೈ ಮುರುಳಿಯ ಜೊತೆ ಕೊರಟಗೆರೆ ಪೊಲೀಸರ ತಂಡ ಕೊರಟಗೆರೆ ಪಟ್ಟಣದ ಆರೋಪಿ ಮಹಮದ್ ಜುಬೇರ್ ಮನೆ ಮತ್ತು ಇಟ್ಟಿಗೆ ಪ್ಯಾಕ್ಟರಿ, ಕಚೇರಿ ತಪಾಸಣೆ ನಡೆಸಿದ್ದಾರೆ, ಮನೆ ಮತ್ತು ಕಚೇರಿಯಲ್ಲಿ ರಾಜ್ಯಪಾಲರ ನಕಲಿ ದಾಖಲೆ ಪತ್ರದ ಜೊತೆಯಲ್ಲಿ ಐದಾರು ಬ್ಯಾಂಕುಗಳ ನಕಲಿ ಮುದ್ರೆ ಮತ್ತು ಸಹಿಯುಳ್ಳ ಹಲವು ಪತ್ರಗಳು ಕೆಂಗೇರಿ ಪೊಲೀಸರಿಗೆ ದೊರಕಿವೆ.
ಮಹಿಳೆಯಿಂದ ಪ್ರಕರಣಕ್ಕೆ ತಿರುವು: ಕೆಂಗೇರಿಯ ವಾಸಿ ಸೈದಾ ತಬಾಸುಮ್ ಎಂಬಾಕೆಯಿಂದ 1 ಕೋಟಿ 15 ಲಕ್ಷ ನಗದು ಮತ್ತು 184 ಗ್ರಾಂ ಚಿನ್ನ ಪಡೆದು ಕಳೆದ 4 ವರ್ಷದಿಂದ ವಂಚಿಸುತ್ತಿದ್ದ ದೂರಿನ ಅನ್ವಯ ಮಹಮದ್ ಜುಬೇರ್ ಎಂಬಾತನ ಮೇಲೆ ಪ್ರಕರಣ ದಾಖಲಾದ ಬೆನ್ನಲ್ಲೆ ಕೆಂಗೇರಿ ಠಾಣೆಯಲ್ಲಿ 13 ಪ್ರಕರಣ, ರಾಜ ರಾಜೇಶ್ವರಿ ಠಾಣೆ- 1 ಮತ್ತು ಶಿರಾ ನಗರ- 1 ಪ್ರಕರಣ ಸೇರಿ ಈತನ ಮೇಲೆ 15 ಪ್ರಕರಣ ದಾಖಲು ಆಗಿರೋದು ಬೆಳಕಿಗೆ ಬಂದು ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಕೆಂಗೇರಿಯ ಸೈದಾ ತಬಾಸುಮ್ ದೂರಿನ ಅನ್ವಯ ಕೊರಟಗೆರೆ ಪಟ್ಟಣದ ಮಹಮದ್ ಜುಬೇರ್ ಮತ್ತು ರುಹಿ ಜುಬೈರ್ ಎಂಬುವರು ಈಗ ಕೆಂಗೇರಿ ಪೊಲೀಸರ ಅತಿಥಿ ಆಗಿದ್ದಾರೆ, ಬೆಂಗಳೂರು ನಗರದ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ, ಪಿಎಸೈ ಮೋಹನ್ ಮುರುಳಿ ನೇತೃತ್ವದ ತಂಡ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ರಾಜ್ಯಪಾಲರ ಮುದ್ರೆ, ಸಹಿ ನಕಲು
ಭಾರತ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಮತ್ತು ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಐಸಿಐಸಿಐ ಹಾಗೂ ಆಕ್ಸಿಸ್ ಬ್ಯಾಂಕ್ ಮೂಲಕ ಬೆಂಗಳೂರು ಮತ್ತು ತುಮಕೂರಿನ ಹಲವರಿಂದ ಕೋಟ್ಯಾಂತರ ರೂ. ಹಣ ಪಡೆದು ದೊಡ್ಡ ಮೊತ್ತದ ಸಾಲ ಕೊಡಿಸುವ ಆಮಿಷ, ರಾಜ್ಯಪಾಲರು ಮತ್ತು ಆರ್ ಬಿ ಐ ಗವರ್ನರ್ ಅವರ ನಕಲಿ ಪತ್ರದ ಜೊತೆ ಮುದ್ರೆ ಮತ್ತು ಸಹಿಯ ಜೊತೆ ನಕಲಿ ಪತ್ರಗಳು ಕೊರಟಗೆರೆಯ ಮನೆಯಲ್ಲಿ ಪೊಲೀಸರಿಗೆ ದೊರಕಿವೆ.
ಗೃಹ ಸಚಿವರ ಫೋಟೊ ದುರ್ಬಳಕೆ
ವಂಚಕ ಮಹಮದ್ ಜುಬೇರ್ ಕೊರಟಗೆರೆ ಪಟ್ಟಣದ ಮುಸ್ಲಿಂರನ್ನು ಯಾಮಾರಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷನು ಆಗಿದ್ದಾನೆ, ಡಾ.ಜಿ.ಪರಮೇಶ್ವರ್ ಜೊತೆಗಿರುವ ಹಳೆಯ ಫೋಟೊ ತೋರಿಸಿ ಅಮಾಯಕ ಜನರಿಗೆ ಸರಕಾರಿ ಕೆಲಸ ಕೊಡಿಸುವ ಆಮಿಷವೊಡ್ಡಿ ಗೃಹ ಸಚಿವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ, ಇದಲ್ಲದೇ ಕೊರಟಗೆರೆಯಲ್ಲಿ ಇಟ್ಟಿಗೆ ಪ್ಯಾಕ್ಟರಿ ಮತ್ತು ರಿಯನ್ ಎಸ್ಟೇಟ್ ವ್ಯಾಪಾರಕ್ಕೂ ಇಳಿದಿದ್ದ.
Comments are closed.