ತುಮಕೂರು: ಮನುಷ್ಯನ ಆರೋಗ್ಯ ಸದ್ದಿಲ್ಲದೆ ಕೊಲ್ಲುವ ಮಹಾಮಾರಿ ರಕ್ತದೊತ್ತಡವಾಗಿದ್ದು 18 ವರ್ಷ ಮೇಲ್ಪಟ್ಟವರು ವಾರ್ಷಿಕವಾಗಿ ಬಿಪಿ ಪರೀಕ್ಷೆ ಮಾಡಿಸುವ ಮೂಲಕ ಎಚ್ಚರಿಕೆ ವಹಿಸಬೇಕು ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು.
ನಗರದ ಸಿದ್ಧಗಂಗಾ ವೈದ್ಯಕೀಯ ಮಹಾ ವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯಿಂದ ನಡೆದ ಅಂತಾರಾಷ್ಟ್ರೀಯ ರಕ್ತದೊತ್ತಡ ದಿನ ಉದ್ಘಾಟಿಸಿ ಮಾತನಾಡಿ, ಉತ್ತಮ ಆರೋಗ್ಯ, ಜೀವನ ಶೈಲಿ ಹಾಗೂ ಒತ್ತಡ ಮುಕ್ತ ಜೀವನ ಅನುಸರಿಸಿ ರಕ್ತದೊತ್ತಡ ಕಾಡುವ ಮುನ್ನವೇ ನಿಯಂತ್ರಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಿದ್ಧಗಂಗಾ ಸೂಪರ್ ಸ್ಪೆಷಾಲಿಟಿ ವಿಭಾಗದ ನಿರ್ದೇಶಕ ಡಾ.ಭಾನುಪ್ರಕಾಶ್ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆ ವರದಿಯ ಪ್ರಕಾರ ಭಾರತದಲ್ಲಿನ ಮೂರನೇ ಒಂದು ಭಾಗದಷ್ಟು ಸಾವು ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಉಂಟಾಗುತ್ತಿದ್ದು, ಇಂತಹ ಕಾಯಿಲೆಗಳಿಗೆ ಅಧಿಕ ರಕ್ತದೊತ್ತಡವು ಪ್ರಮುಖ ಕಾರಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಿದ್ಧಗಂಗಾ ವೈದ್ಯಕೀಯ ಮಹಾ ವಿದ್ಯಾಲಯ ಪ್ರಾಚಾರ್ಯರಾದ ಡಾ.ಶಾಲಿನಿ ಮಾತನಾಡಿ, ರಕ್ತದೊತ್ತಡ ಧೂಮಪಾನ, ಬೊಜ್ಜು, ದೈಹಿಕ ಚಟುವಟಿಕೆಯ ಕೊರತೆ, ಆಹಾರದಲ್ಲಿ ಹೆಚ್ಚು ಪ್ರಮಾಣದ ಉಪ್ಪು, ಹೆಚ್ಚಿನ ಮದ್ಯಪಾನ, ಒತ್ತಡ, ವಯಸ್ಸು, ಅನುವಂಶಿಕ, ಕೌಟುಂಬಿಕ ಇತಿಹಾಸದ ಕಾರಣದಿಂದ ಉಂಟಾಗುತ್ತದೆ, ಪ್ರತಿನಿತ್ಯ ನಡಿಗೆ, ಧೂಮಪಾನ ಮಾಡದೇ ಇರುವುದು, ಆರೋಗ್ಯಕರ ಆಹಾರ ಸೇವನೆ, ಆರೋಗ್ಯಕರ ತೂಕ ನಿರ್ವಹಣೆ, ಒತ್ತಡ ನಿರ್ವಹಣೆ ಮೊದಲಾದ ಚಟುವಟಿಕೆ ಅನುಸರಿಸಿ ಬಿಪಿಯಿಂದ ದೂರವಿರಬಹುದು ಎಂದರು.
ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಂದ ರಕ್ತದೊತ್ತಡದ ಕುರಿತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು, ಹೃದ್ರೋಗ ತಜ್ಞ ಡಾ.ಶರತ್, ವೈದ್ಯಕೀಯ ಅಧೀಕ್ಷಕ ಡಾ.ನಿರಂಜನಮೂರ್ತಿ, ಡಾ.ವೀಣಾ, ಡಾ.ಕುಶಾಲ್, ಡಾ.ನಳಿನ, ಡಾ.ಸಿದ್ಧೇಶ್ವರ ಸ್ವಾಮಿ, ಸಿಇಓ ಡಾ.ಸಂಜೀವ ಕುಮಾರ್, ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ.ಪುರುಷೋತ್ತಮ್ ಮೊದಲಾದವರಿದ್ದರು.
Comments are closed.