ಕುಣಿಗಲ್: ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಖರೀದಿ ಮಾಡಲಾಗುತ್ತಿದ್ದು ಪಟ್ಟಣದ ಆರ್ ಎಂ ಸಿ ಯಾರ್ಡ್ನ ರಾಗಿ ಖರೀದಿ ಕೇಂದ್ರ ಸಮಸ್ಯೆಗಳ ಆಗರವಾಗಿದ್ದು ಇಲಾಖೆಯ ಮೇಲಾಧಿಕಾರಿಗಳು, ಜನಪ್ರತಿನಿಧಿಗಳು ರೈತರ ಸಮಸ್ಯೆ ಬಗೆಹರಿಸುವಂತೆ ರಾಗಿ ಹಾಕಲು ಬಂದ ರೈತರು ಆಗ್ರಹಿಸಿದ್ದಾರೆ.
2024- 25ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ಮಾರ್ಚ್ ಮಾಹೆಯಲ್ಲಿ ಟೋಕನ್ ನೀಡಲಾಗಿತ್ತು, ಬರಗಾಲ ಪ್ರದೇಶ ಎಂದು ಘೋಷಣೆಯಾದರೂ ತಾಲೂಕಿನ ರೈತರು ತಮ್ಮ ಕಷ್ಟ ಕಾಲಕ್ಕೆಂದು ಸಂಗ್ರಹಿಸಿದ್ದ ರಾಗಿ ಮಾರಾಟ ಮಾಡಿ ಮುಂದಿನ ಬೇಸಾಯಕ್ಕೆ ಸಹಕಾರಿಯಾಗಲೆಂದು ರಾಗಿ ಖರೀದಿ ಕೇಂದ್ರದಲ್ಲಿ ದಾಖಲೆ ನೀಡಿ ಟೋಕನ್ ಪಡೆದಿದ್ದರು, ಈ ಮಧ್ಯೆ ಲೋಕಸಭೆ ಚುನಾವಣೆ ಘೋಷಣೆಯಾಗಿ ಖರೀದಿ ಕಾರ್ಯ ವಿಳಂಬವಾಗಿದ್ದು ಮೇ ಮಾಹೆಯಲ್ಲಿ ಖರೀದಿ ಆರಂಭವಾಗಿದೆ, ರೈತರು ತಾವು ಪಡೆದ ಟೋಕನ್ ಗೆ ಅನುಗುಣವಾಗಿ ರಾಗಿ ಖರೀದಿ ಕೇಂದ್ರಕ್ಕೆ ರಾಗಿ ತಂದು ಆರ್ಎಂಎಸಿ ಪ್ಲಾಟ್ ಫಾರಂನಲ್ಲಿ ಮಳೆ, ಬಿಸಿಲು, ಚಳಿ ಎನ್ನದೆ ಹಾವು, ಚೇಳಿನ ಕಾಟದ ನಡುವೆ ರಾಗಿ ಹಾಕಲು ಕಾಯುತ್ತಾ ಕುಳಿತಿದ್ದಾರೆ, ಆರ್ ಎಂ ಸಿ ಯಾರ್ಡ್ನಲ್ಲಿ ಕೆಲವೆಡೆ ದೀಪ ಇದ್ದರೆ ಮತ್ತೆ ಕೆಲವೆಡೆ ಇಲ್ಲ.
ತಾಲೂಕಿನ ಆರು ಹೋಬಳಿಗಳಿಂದ ನೂರಾರು ರೈತರು ರಾಗಿ ಕೇಂದ್ರಕ್ಕೆ ರಾಗಿ ಸಮೇತ ಟೋಕನ್ ನಲ್ಲಿ ನೀಡಲಾದ ದಿನಾಂಕಕ್ಕೆ ಬಂದರೂ ಸರಿಯಾದ ಸಮಯಕ್ಕೆ ರಾಗಿ ಎತ್ತುವಳಿ ಆಗುತ್ತಿಲ್ಲ, ಇದರಿಂದಾಗಿ ಮೂರು ದಿನಗಳಿಂದಲೂ ರೈತರು ಮನೆ, ಜಾನುವಾರು, ಬಿಟ್ಟು, ಚಳಿ, ಮಳೆ, ಗಾಳಿ ಎನ್ನದೆ ತಂದಿರುವ ರಾಗಿ ಕಾಯುವ ಕೆಲಸ ಮಾಡಬೇಕಿದೆ, ಶಾಲೆಗೆ ರಜೆ ಇರುವ ಕಾರಣ ಕೃಷಿಕ ತಂದೆಗೆ ನೆರೆವಾಗಲು ಮಕ್ಕಳು ಸಹ ರಾಗಿ ಮೂಟೆ ಮೇಲೆ ಜೀವ, ಜೀವನ ಕಳೆಯುವಂತಾಗಿದೆ.
ಬೇಗೂರಿನ ರೈತ ಚಂದ್ರಯ್ಯ ಮಾತನಾಡಿ ಟೋಕನ್ ಪ್ರಕಾರ ಮೂರು ದಿನವಾಗಿದೆ, ಇನ್ನು ಎತ್ತುವಳಿ ಮಾಡಿಲ್ಲ, ಲೋಡರ್ ಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ, ಬೆಳಗ್ಗೆ ಒಂಬತ್ತು, ಹತ್ತು ಗಂಟೆಗೆ ಬರ್ತಾರೆ, ಹನ್ನೆರಡುವರೆಗೆ ಊಟಕ್ಕೆ ಹೋಗ್ತಾರೆ, ಮಧ್ಯಾಹ್ನ ಮೂರು ಗಂಟೆಗೆ ಬರ್ತಾರೆ, ಎಷ್ಟು ಕೆಲಸ ಮಾಡ್ತಾರೋ ಅಷ್ಟೆ ಸಂಜೆ ಬೇಗನೆ ಕೆಲಸ ನಿಲ್ಲಿಸುತ್ತಾರೆ, ಇದರಿಂದ ಸಾಕಷ್ಟು ಸಮಸ್ಯೆ ಆಗ್ತಿದೆ, ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮ ಕಷ್ಟ ಕೇಳಲು ಬಂದಿಲ್ಲ, ಮಳೆಗಾಲ ಹಾವು, ಚೇಳು ಕಾಣಿಸಿ ಕೊಳ್ಳುತ್ತಿವೆ, ಒಂದೆಡೆ ನಾವು ತಂದಿರುವ ರಾಗಿ ಕಾಪಾಡೋ ಜೊತೆ ನಮ್ಮ ಜೀವನೂ ಕಾಪಾಡಬೇಕೆಂದು ಅಳಲು ತೋಡಿ ಕೊಂಡರು.
ರಾಗಿ ಖರೀದಿ ಕೇಂದ್ರದ ವ್ಯವಸ್ಥಾಪಕ ಕೃಷ್ಣಮೂರ್ತಿ ಮಾತನಾಡಿ, ರೈತರ ಸಮಸ್ಯೆ ನಮಗೂ ಅರಿವಾಗುತ್ತಿದೆ, ಸರ್ಕಾರ ಜೂನ್ 30ರ ವರೆಗೂ ಖರೀದಿಗೆ ಅವಕಾಶ ನೀಡಿರುವುದರಿಂದ ನಾವು ರೈತರಿಗೆ ಕರೆ ಮಾಡಿ ತಿಳಿಸಿದರೂ ರೈತರು ಆತುರ ಪಟ್ಟು ಬರುತ್ತಾರೆ, ರೈತರಲ್ಲಿ ಯಾವುದೇ ಗೊಂದಲ ಬೇಡ, ಟೋಕನ್ ನೀಡಿರುವ ಎಲ್ಲಾ ರೈತರಿಂದಲೂ ರಾಗಿ ಖರೀದಿ ಮಾಡಲಾಗುವುದು, ರೈತರು ಕೇಂದ್ರಕ್ಕೆ ಬಂದು ಪ್ಲಾಟ್ ಫಾರಂ ಖಾಲಿ ಇದ್ದಲ್ಲಿ ರಾಗಿ ತರಬೇಕು, ಈ ನಿಟ್ಟಿನಲ್ಲಿ ನಮಗೆ ಸಹಕಾರ ನೀಡಬೇಕು, ಈಬಾರಿ ಲೋಡರ್ ಸಂಖ್ಯೆ 50 ರಿಂದ 25ಕ್ಕೆ ಇಳಿದಿದೆ, ಕಾರಣ ಬಹುತೇಕ ಲೋಡರ್ ಗಳು ಹೊರ ರಾಜ್ಯದವರಾದ್ದರಿಂದ ಚುನಾವಣೆಗಾಗಿ ಹೋಗಿದ್ದಾರೆ, ಶೀಘ್ರದಲ್ಲೆ ಬರಲಿದ್ದು ಆಗ ಲೋಡಿಂಗ್ ವೇಗವಾಗಿ ಸಾಗುತ್ತದೆ, ಈ ಬಾರಿ ಸರ್ಕಾರ ಕೈಯಿಂದ ಮೂಟೆ ಹೊಲೆಯಲು ಆದೇಶಿಸಿರುವುದರಿಂದ ಲೋಡಿಂಗ್ ವಿಳಂಬವಾಗುತ್ತದೆ, ಆದರೂ ದಿನಕ್ಕೆ ಎರಡರಿಂದ ಮೂರು ಸಾವಿರ ಟನ್ ರಾಗಿ ಎತ್ತುವಳಿ ಮಾಡಲಾಗುತ್ತಿದೆ, ರೈತರು ಸಹಕಾರ ನೀಡಿದಲ್ಲಿ ಯಾವುದೇ ಸಮಸ್ಯೆ ಆಗದಂತೆ ರಾಗಿ ಎತ್ತುವಳಿ ಕಾರ್ಯ ಸುಗಮವಾಗಿ ಆಗುತ್ತದೆ ಎನ್ನುತ್ತಾರೆ.
Comments are closed.