ಹೆಚ್.ಡಿ.ದೇವೇಗೌಡರು ಈ ದೇಶದ ದೊಡ್ಡ ಶಕ್ತಿ

56

Get real time updates directly on you device, subscribe now.


ತುಮಕೂರು: ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರ 92ನೇ ಹುಟ್ಟು ಹಬ್ಬವನ್ನು ಜಿಲ್ಲಾ ಜೆಡಿಎಸ್ ಮುಖಂಡರು ಶನಿವಾರ ನಗರದ ಅಂಧ ಮಕ್ಕಳ ಆಶ್ರಮದಲ್ಲಿ ಮಕ್ಕಳ ಜೊತೆ ಆಚರಿಸಿದರು.
ಬಟವಾಡಿಯ ಮಹಾಲಕ್ಷ್ಮಿ ನಗರದ ಅಂಧ ಮಕ್ಕಳ ಆಶ್ರಮದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ಮತ್ತಿತರ ಮುಖಂಡರು ಕೇಕ್ ಕತ್ತರಿಸಿ, ಆಶ್ರಮದ ಮಕ್ಕಳಿಗೆ ಸಿಹಿ ಊಟ ಬಡಿಸಿ ತಮ್ಮ ನಾಯಕನ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿದರು.

ಇದಕ್ಕೂ ಮೊದಲು ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಬೃಹತ್ ಕೇಕ್ ಕತ್ತರಿಸಿ ದೇವೇಗೌಡರ ಹುಟ್ಟು ಹಬ್ಬ ಆಚರಣೆ ಮಾಡಿದರು, ಈ ವೇಳೆ ಮಾತನಾಡಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ದೇಶದ ಪ್ರಧಾನಿಯಾದ ಮೊಟ್ಟ ಮೊದಲ ಕನ್ನಡಿಗ ದೇವೇಗೌಡರು ಈ ದೇಶದ ದೊಡ್ಡ ಶಕ್ತಿ, ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಮಾದರಿ ಆಡಳಿತ ನೀಡಿದರು, ತಮ್ಮ ಅಧಿಕಾರವಧಿಯಲ್ಲಿ ದೇಶದ ಅನೇಕ ಸಮಸ್ಯೆ ಬಗೆಹರಿಸಿದರು ಎಂದು ಹೇಳಿದರು.
ತಮ್ಮ 92ರ ವಯಸ್ಸಿನಲ್ಲೂ ದೇವೇಗೌಡರು ದೇಶದ, ರಾಜ್ಯದ ಅಭಿವೃದ್ಧಿಗೆ ದೇವೇಗೌಡರ ದೂರದೃಷ್ಟಿ ಚಿಂತನೆ, ಮಾರ್ಗದರ್ಶನ ಅತ್ಯಗತ್ಯವಾಗಿದೆ, ಇವರು ಆರೋಗ್ಯವಾಗಿ ದೀರ್ಘ ಕಾಲ ನಮ್ಮ ಜೊತೆಗಿದ್ದು ಮಾರ್ಗದರ್ಶನ ನೀಡಲಿ ಎಂದು ಆರ್.ಸಿ.ಆಂಜನಪ್ಪ ಆಶಿಸಿದರು.

ಮಾಜಿ ಶಾಸಕ ಹೆಚ್.ನಿಂಗಪ್ಪ ಮಾತನಾಡಿ, ಪ್ರಧಾನಿಯಾಗಿ ದೆಹಲಿಯ ಕೆಂಪು ಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಮೊದಲ ಕನ್ನಡಿಗ ದೇವೇಗೌಡರು ಈ ನಾಡಿನ ಹೆಮ್ಮೆ, ದೇವೇಗೌಡರ ಸುದೀರ್ಘ ರಾಜಕಾರಣದಲ್ಲೂ ಇವರು ಅಧಿಕಾರ ಅನುಭವಿಸಿದ್ದು ಕಡಿಮೆಯೇ, ಆ ಅವಧಿಯಲ್ಲಿ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದ್ದರು, ಶೋಷಿತ ಸಮುದಾಯಗಳಿಗೆ ನೆರವಾಗುವ ಕಾರ್ಯಕ್ರಮಗಳನ್ನು ತಂದರು, ಹಿಂದುಳಿದ ವರ್ಗ, ಮಹಿಳೆಯರು, ಅಲ್ಪಸಂಖ್ಯಾತರಿಗೆ ಮೀಸಲಾತಿ ದೊರಕಿಸುವಲ್ಲಿ ದೇವೇಗೌಡರ ಕೊಡುಗೆ ದೊಡ್ಡದು ಎಂದು ಹೇಳಿದರು.

ಪಂಜಾಬ್ ನಲ್ಲಿ ದೇವೇಗೌಡರ ಹೆಸರಿನ ಭತ್ತದ ತಳಿ ಇದೆ, ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮುತ್ಸದ್ಧಿ ನಾಯಕ ದೇವೇಗೌಡರ ಸಲಹೆ, ಸಹಕಾರ, ಮಾರ್ಗದರ್ಶನ ಈ ದೇಶಕ್ಕೆ, ರಾಜ್ಯಕ್ಕೆ ಅಗತ್ಯವಿದೆ ಎಂದು ತಿಳಿಸಿದರು.

ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ನಗರ ಅಧ್ಯಕ್ಷ ವಿಜಯ್ ಗೌಡ, ಜಿಲ್ಲಾ ರೈತ ಘಟಕ ಅಧ್ಯಕ್ಷ ರಂಗನಾಥ್, ಎಸ್ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸೋಲಾರ್ ಕೃಷ್ಣಮೂರ್ತಿ, ಜಿಪಂ ಮಾಜಿ ಅಧ್ಯಕ್ಷೆ ಕುಸುಮಾ ಜಗನ್ನಾಥ್, ನಗರ ಪಾಲಿಕೆ ಮಾಜಿ ಸದಸ್ಯರಾದ ಟಿ.ಹೆ.ಬಾಲಕೃಷ್ಣ, ಹೆಚ್.ಡಿ.ಕೆ.ಮಂಜುನಾಥ್, ಮುಖಂಡರಾದ ಚೆಲುವರಾಜು, ರಂಗಪ್ಪ, ವಿಶ್ವೇಶ್ವರಯ್ಯ, ಕೆಂಪರಾಜು, ಭೈರೇಶ್, ಪ್ರಸನ್ನ, ತಾಹೇರಾ ಕುಲ್ಸಂ, ಉಪ್ಪಾರಹಳ್ಳಿ ಕುಮಾರ್, ಲೀಲಾವತಿ, ದಿಬ್ಬೂರು ವಿಜಯಕುಮಾರ್, ಮಧುಗೌಡ, ಗಣೇಶ್ ಮತ್ತಿತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!