ಜೀವ ಸಂಕುಲಕ್ಕೆ ಆಪತ್ತು ತರಲಿದೆ ಪ್ಲಾಸ್ಟಿಕ್: ಕುಲಪತಿ

28

Get real time updates directly on you device, subscribe now.


ತುಮಕೂರು: ಪರಿಸರದ ಅರಿವು ಮತ್ತು ಕಾಳಜಿ ಮೊದಲು ನಮ್ಮ ಮನೆಯಿಂದಲೇ ಆರಂಭವಾಗಬೇಕು, ಅತಿಯಾದ ಪ್ಲಾಸ್ಟಿಕ್ ಬಳಕೆ ಜಲಚರ ಜೀವಿಗಳಿಗೆ ಮತ್ತು ಮಾನವ ಸಂಕುಲಕ್ಕೆ ಕಂಟಕವಾಗುತ್ತಿದೆ ಎಂದು ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಕಳವಳ ವ್ಯಕ್ತಪಡಿಸಿದರು.
ವಿಶ್ವ ವಿದ್ಯಾಲಯ ವಿಜ್ಞಾನ ಕಾಲೇಜಿನ ಪರಿಸರ ವಿಜ್ಞಾನ ಅಧ್ಯಯನ ವಿಭಾಗ ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯ ಹಾಗೂ ಜೀವನ್ ಜ್ಯೋತಿ ಗ್ರಾಮೀಣ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ಸಹಯೋಗದೊಂದಿಗೆ ಪ್ಲಾನೆಟ್ ವರ್ಸಸ್ ಪ್ಲಾಸ್ಟಿಕ್ ವಿಷಯದ ಅಡಿಯಲ್ಲಿ ಆಯೋಜಿಸಿದ್ದ ವಿಶ್ವ ಭೂಮಿಯ ದಿನ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಮೀನು ಹಿಡಿಯಲು ಮೀನುಗಾರರು ಬಲೆ ಬೀಸಿದರೆ ಪ್ಲಾಸ್ಟಿಕ್ ಬಾಟಲಿಗಳು ಸಿಗುತ್ತಿವೆ, ಭೂಮಿ ಕಾಪಾಡಿಕೊಳ್ಳ ಬೇಕಾದರೆ ಮರ ಗಿಡಗಳನ್ನು ಬೆಳೆಸುವುದರೊಂದಿಗೆ ಸ್ವಚ್ಛತೆ ಕಾಪಾಡಿಕೊಳ್ಳುವುದೂ ಮುಖ್ಯ, ಪ್ಲಾಸ್ಟಿಕ್ ಬಳಸಬೇಡಿ ಎಂದು ಹೇಳುವವರೇ ಹೆಚ್ಚು ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್.ಕೆ. ಮಾತನಾಡಿ, ಮರ- ಗಿಡಗಳಿದ್ದರೆ ಜೀವ, ಜೀವನ, ಆದರೆ ಇಂದು ಪ್ರಕೃತಿ ಅಳಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ, ಮುಂದಿನ ತಲೆಮಾರಿಗೆ ಪ್ರಕೃತಿ ಉಳಿಸಿಕೊಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ, ಪ್ರಕೃತಿಗೆ ಸಂಬಂಧಿಸಿದ ಪ್ರತಿಯೊಂದು ವಿಷಯವು ಈ ವಿಚಾರ ಸಂಕಿರಣದಲ್ಲಿ ಚರ್ಚೆ ಆಗಬೇಕು ಎಂದು ಹೇಳಿದರು.
ಕರ್ನಾಟಕ ಗೃಹ ಸಚಿವಾಲಯದ ವಿಶೇಷ ಅಧಿಕಾರಿ ಡಾ.ನಾಗಣ್ಣ ಮಾತನಾಡಿ, ಬೆಳೆ ಬೆಳೆಯಲು ರಾಸಾಯನಿಕ ಗೊಬ್ಬರದ ಬದಲಿಗೆ ಸಾವಯವ ಗೊಬ್ಬರ ಬಳಸಿದರೆ ಭೂಮಿ ಮತ್ತು ನಮ್ಮ ಆರೋಗ್ಯಎರಡೂ ಸುರಕ್ಷಿತವಾಗಿರುತ್ತದೆ, ಇದನ್ನು ಕೃಷಿಕರು ಅರ್ಥ ಮಾಡಿಕೊಳ್ಳಬೇಕು, ಕೃಷಿಕರಿಗೆ ಈ ಕುರಿತು ಅರಿವು ಮೂಡಿಸುವ ಕಾರ್ಯವನ್ನು ವಿದ್ಯಾವಂತರಾದ ನಾವು ಮಾಡಬೇಕು ಎಂದು ತಿಳಿಸಿದರು.

ವಿವಿಯ ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಯೋಜಕ ಡಾ.ದ್ವಾರಕಾನಾಥ್.ವಿ, ಕುವೆಂಪು ವಿವಿಯ ಪರಿಸರ ವಿಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ನಾರಾಯಣ.ಜೆ, ಪ್ರೊ.ಯೋಗೇಂದ್ರ.ಕೆ, ಜೀವನ್ ಜ್ಯೋತಿ ಗ್ರಾಮೀಣ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಎನ್.ಚಂದ್ರಶೇಖರ್, ಅಭಿವೃದ್ಧಿ ಸಂಸ್ಥೆಯ ಸಿ.ನರಸಿಂಹಮೂರ್ತಿ, ಸ್ವಾರ್ಡ್ಸ್ ಸಂಸ್ಥೆಯ ಡಿ.ಟಿ.ಶ್ರೀನಿವಾಸ್ ಮೂರ್ತಿ ಇದ್ದರು.

Get real time updates directly on you device, subscribe now.

Comments are closed.

error: Content is protected !!