ಕುಣಿಗಲ್: ದಿನಕ್ಕೆ 10 ನಿಮಿಷವಾದರೂ ಕನ್ನಡ ಪುಸ್ತಕ ಓದಿ, ದಿನಕ್ಕೆ ಕನಿಷ್ಟ ಪಕ್ಷ 10 ಕನ್ನಡ ಹೊಸ ಕನ್ನಡ ಪದ ಕಲಿತು ನಿಮ್ಮ ಪದ ಸಂಪತ್ತು ಹೆಚ್ಚಿಸಿಕೊಂಡು ಕನ್ನಡ ಪಸರಿಸುವ ಕಾರ್ಯ ಮಾಡಿ ಎಂದು ಸಾಹಿತಿ ಹಾಗೂ ವ್ಯಾಖ್ಯಾನಕಾರ ತನಾಶಿ ಕರೆ ನೀಡಿದರು.
ಕುಣಿಗಲ್ ನ ಬ್ರಾಹ್ಮಣ ಸಮುದಾಯ ಭವನದಲ್ಲಿ ನಡೆದ ನುಡಿ ಸಂಭ್ರಮ ವಾರ್ಷಿಕ ಸಮ್ಮಿಲನ ಕಾರ್ಯಕ್ರಮದಲ್ಲಿ ನುಡಿ ಹೆಜ್ಜೆ ಈ ಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಅನುಸೂಯ ಸಿದ್ದರಾಮ ಅವರು ನುಡಿ ತೋರಣ ವಾಟ್ಸಪ್ ಬಳಗ ಅಚ್ಚುಕಟ್ಟಾದ ಕಾರ್ಯಕ್ರಮ ಆಯೋಜನೆಯಲ್ಲಿ ಸಂಚಾಲನ ಸಮಿತಿಯ ಸದಸ್ಯರ ಪಾತ್ರ ಮಹತ್ವದ್ದು, ಮುಂದೆಯೂ ಇಂತಹ ಕನ್ನಡದ ಕೈಂಕರ್ಯ ಮುಂದುವರೆಯಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಪ್ನಾ ಬುಕ್ ಹೌಸ್ ನ ಕನ್ನಡ ವಿಭಾಗದ ಮುಖ್ಯಸ್ಥ ಆರ್.ದೊಡ್ಡೇಗೌಡ ಮಾತನಾಡಿ, ಸಾಹಿತ್ಯ ಪರಿಷತ್ತು ಮಾಡುವ ಕೆಲಸವನ್ನು ನುಡಿತೋರಣ ಬಳಗ ಮಾಡುತ್ತಿರುವುದು ಶ್ಲಾಘನೀಯ, ಇದು ಹೀಗೆಯೇ ಮುಂದುವರೆಯಲಿ, ಮುಂದಿನ ನುಡಿ ತೋರಣ ಸಮಾಗಮಕ್ಕೆ ಪುಸ್ತಕ ತಾಂಬೂಲ ನೀಡಲು ನಾನು ಸಿದ್ಧ ಎಂದರು.
ಸಾಹಿತಿಗಳು ಹಾಗೂ ನುಡಿ ತೋರಣದ ಸಂಚಾಲಕರಲ್ಲಿ ಒಬ್ಬರಾದ ಕಿರಣ್ ಹಿರಿಸಾವೆ ಅವರು ನುಡಿತೋರಣ ಬೆಳೆದು ಬಂದ ದಾರಿ ಮತ್ತು ಮುಂದಿನ ಯೋಜನೆಯ ರೂಪರೇಷೆಯನ್ನು ಕವಿಮನಗಳೊಂದಿಗೆ ಹಂಚಿಕೊಂಡರು.
ಈ ಸಂದರ್ಭದಲ್ಲಿ ಎರಡು ಕೃತಿ ಬಿಡುಗಡೆ ಮಾಡಲಾಯಿತು, ಮಾನಸ.ಕೆ.ಕೆ. ಅವರ ಚಿತ್ತದ ಸುತ್ತ ಹಾಗೂ ಸಿ.ಬಿ.ಶೈಲ ಜಯಕುಮಾರ್ ಅವರ ವೃತ್ತಿ ಬದುಕಿನ ಹಿನ್ನೋಟ ಲೋಕಾರ್ಪಣೆಗೊಂಡ ಕೃತಿಗಳು.
ಈ ಸಂದರ್ಭದಲ್ಲಿ ಸಾಹಿತಿ ಮತ್ತು ಮಾತಿನಮನೆ ಸಂಸ್ಥಾಪಕ ರಾ.ಸು.ವೆಂಕಟೇಶ, ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯ ನಿವೃತ್ತ ನಿರ್ದೇಶಕ ಎಂ.ವೆಂಕಟೇಶ ಶೇಷಾದ್ರಿ ಮತ್ತುಸಾಹಿತಿ ಮತ್ತು ಆರೋಗ್ಯಾಂಕಣಕಾರ ಡಾ.ಟಿ.ಶಿವಕುಮಾರ್ ಅವರಿಗೆ ನುಡಿ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಖ್ಯಾತ ಸಾಹಿತಿಗಳಾದ ಮಧು ವಸ್ತ್ರದ್, ಮಾಧುರಿ ದೇಶಪಾಂಡೆ, ಜಯಂತಿ ಚಂದ್ರಶೇಖರ್, ಅಬಿಜ್ಞಾ, ವಸುಮತಿ, ಸಾಕ್ಷಿ ಮತ್ತು ಸುಮಾ ಆರ್ ಸೂರ್ಯ ಅವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಡಾ.ರುಕ್ಮಿಣಿ ವ್ಯಾಸರಾಜ್ ಮತ್ತು ತಂಡದವರು ನಾಡಗೀತೆ ಪ್ರಸ್ತುತ ಪಡಿಸಿದರು, ನುಡಿಹೆಜ್ಜೆ ಈ ಪತ್ರಿಕೆಯ ಸಂಪಾದಕ ಎಂ.ವೆಂಕಟೇಶ ಶೇಷಾದ್ರಿ, ನಳಿನಾ ಸುಬ್ರಮಣ್ಯ, ಪವಿತ್ರ ಮೃತ್ಯುಂಜಯ ಸ್ವಾಮಿ, ಪ್ರಶಾಂತ್, ಶ್ರೀಕಾಂತ ಪತ್ರೆಮರ, ಪ್ರಿಯ, ಜಯಶ್ರೀ ರಾಜು ಇತರರು ಇದ್ದರು.
Comments are closed.