ಗುಬ್ಬಿ: ತಾಲ್ಲೂಕಿನ ಸಿ.ಎಸ್.ಪುರ ಕೆರೆಯ ಬಳಿ ತುರುವೇಕೆರೆ ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಮಸಾಲ ಜಯರಾಮ್ ನೇತೃತ್ವದಲ್ಲಿ ನೂರಾರು ಸಂಖ್ಯೆಯ ರೈತರು, ಸಾರ್ವಜನಿಕ ಸಮ್ಮುಖದಲ್ಲಿ ಕಾಮಗಾರಿ ನಡೆಯುತ್ತಿರುವ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಗೆ ಜೆಸಿಬಿ ಯಂತ್ರಗಳ ಮೂಲಕ ಮಣ್ಣು ಹಾಕಿಸಿ ನಾಲೆ ಮುಚ್ಚಿಸುವ ಕೆಲಸಕ್ಕೆ ಮುಂದಾದರು, ನೂರಾರು ಸಂಖ್ಯೆಯಲ್ಲಿ ಸೇರಿದ ವಿವಿಧ ಸಂಘಟನೆಗಳು, ರೈತರು, ಮುಖಂಡರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷೆಣೆ ಕೂಗುವ ಮೂಲಕ ಕೂಡಲೇ ಸರಕಾರ ಕಾಮಗಾರಿ ಸ್ಥಗಿತಗೊಳಿಸಲು ಮುಂದಾಗಬೇಕು ಎಂದು ಆಕ್ರೋಶ ಹೊರ ಹಾಕಿದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅವೈಜ್ಞಾನಿಕವಾಗಿ ಕಾಮಗಾರಿ ಮಾಡುತ್ತಿರುವುದು ಸರಿಯಲ್ಲ, ಕಾಮಗಾರಿ ನಡೆಸುವ ಮುಂಚೆ ರೈತರ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡು ಸೂಕ್ತ ಪರಿಹಾರ ನೀಡುವ ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಮಾಡಬೇಕು, ಆದರೆ ಕಾನೂನಾತ್ಮಕವಾಗಿ ಟೆಂಡರ್ ಪ್ರಕ್ರಿಯೆ ಮಾಡದೆ ಬೇಕಾಬಿಟ್ಟಿಯಾಗಿ ಕಾಮಗಾರಿ ಮಾಡಲು ಮುಂದಾಗಿರುವುದು, ಈ ಭಾಗದ ರೈತರಿಗೆ ಸಾಕಷ್ಟು ತೊಂದರೆ ಉಂಟುಮಾಡುತ್ತಿದ್ದು, ಇಷ್ಟು ದೊಡ್ಡ ಪ್ರಮಾಣದ ಪೈಪುಗಳ ಮೂಲಕ ನೀರು ಬೇರೆ ಜಿಲ್ಲೆಗೆ ಹೊದರೆ, ಈ ಭಾಗದ ರೈತರಿಗೆ ಕಿಂಚಿತ್ತು ಸಹ ನೀರು ದೊರೆಯಲು ಸಾಧ್ಯವಿಲ್ಲ, ನಮಗೆ ನೀರಿಗೆ ತೊಂದರೆ ಇರುವಂತ ಸಮಯದಲ್ಲಿ ಮತ್ತೊಂದು ಜಿಲ್ಲೆಗೆ ನೀರು ತೆಗೆದುಕೊಂಡು ಹೋಗುವುದು ಸೂಕ್ತವಲ್ಲ, ಈ ನಿಟ್ಟಿನಲ್ಲಿ ಈ ಭಾಗದ ಜನತೆಗೆ ಹಾಗೂ ರೈತರಿಗೆ ನಾವು ಅನ್ಯಾಯ ವಾಗಲು ಬಿಡುವುದಿಲ್ಲ, ಜನತೆಗೆ ನಾವು ಕೊಟ್ಟ ಮಾತಿನಂತೆ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಮುಂದುವರಿಸಲು ಬಿಡುವುದಿಲ್ಲ, ಯಾವುದೇ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂದರು.
ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ ಈಗಾಗಲೇ ಕಾಮಗಾರಿ ನಿಲ್ಲಿಸುವ ಕುರಿತು ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಮಾತನಾಡಿದ್ದು ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಸಮರ್ಪಕವಾಗಿ ಸ್ಪಂದನೆ ದೊರೆಯದಿರುವ ಹಿನ್ನೆಲೆ ರೈತರ ಹಿತಕ್ಕಾಗಿ ನಾವು ಹೋರಾಟ ಮಾಡಲು ಬದ್ಧರಾಗಿದ್ದೇವೆ, ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ರೈತರು ಹಾಗೂ ಜನತೆಯ ಸಹಕಾರದೊಂದಿಗೆ ಕಾಮಗಾರಿ ಸ್ಥಗಿತ ಮಾಡುವಂತೆ ಜೆಸಿಬಿ ಮೂಲಕ ಮಣ್ಣು ಹಾಕಿ ಹೇಮಾವತಿ ನಾಲೆ ಮುಚ್ಚುತ್ತಿದ್ದು ಇದಕ್ಕೂ ಸಹ ಸರ್ಕಾರಗಳು ಅಧಿಕಾರಿಗಳು ಸ್ಪಂದನೆ ಮಾಡದಿದ್ದರೆ ನಾವೇ ಸ್ವತಃ ನಾಲೆ ಮುಚ್ಚಲು ಮುಂದಾಗುತ್ತೇವೆ, ಶಿರಾ, ಮಧುಗಿರಿ ಈ ಭಾಗದ ರೈತರು ಹೋರಾಟಕ್ಕೆ ಬರುವುದಾಗಿ ತಿಳಿಸುತ್ತಿದ್ದು ಎಲ್ಲರ ಸಹಕಾರ ಪಡೆದು ಈ ಅವೈಜ್ಞಾನಿಕ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಸ್ಥಗಿತಕ್ಕೆ ಹೋರಾಟಕ್ಕೆ ಸಿದ್ಧರಿದ್ದೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ಮಸಾಲ ಜಯರಾಮ್ ಮಾತನಾಡಿ ಹೇಮಾವತಿ ನೀರನ್ನು ಕುಣಿಗಲ್ ಭಾಗಕ್ಕೆ ತೆಗೆದುಕೊಂಡು ಹೋಗುವುದಕ್ಕೆ ನಮ್ಮದು ಯಾವುದೇ ವಿರೋಧವಿಲ್ಲ, ಕುಣಿಗಲ್ ಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಳೆದ ಬಾರಿ ನೀರು ಹರಿದು ಕೆರೆಕಟ್ಟೆಗಳು ತುಂಬಿ ನೀರಿಗೆ ಯಾವುದೇ ರೀತಿಯ ಅಭಾವ ಎದುರಾಗಿಲ್ಲ, ಇಷ್ಟು ಇದ್ದರೂ ಈ ಭಾಗದ ಜನತೆಗೆ ಹಾಗೂ ರೈತರಿಗೆ ಅನಾನುಕೂಲವಾಗುವ ದೃಷ್ಟಿಯಿಂದ ಕಾಂಗ್ರೆಸ್ ಸರಕಾರ ಏಕಾಏಕಿ ಹೇಮಾವತಿ ಲಿಂಕ್ ಕಾಮಗಾರಿಗೆ ಮುಂದಾಗಿದ್ದು, ಈ ಭಾಗದ ಜನತೆಗೆ ಮರಣ ಶಾಸನ ಬರೆಯುತ್ತಿದ್ದಾರೆ, ಯಾವುದೇ ಕಾರಣಕ್ಕೂ ಈ ಭಾಗದ ರೈತರು ಹಾಗೂ ಜನತೆಗೆ ನಾವು ಅನ್ಯಾಯವಾಗಲು ಬಿಡುವುದಿಲ್ಲ, ಕಾಮಗಾರಿ ಏನಾದರೂ ಪ್ರಾರಂಭ ಮಾಡಿದಲ್ಲಿ ಕೂಡಲೇ ನಮ್ಮ ಗಮನಕ್ಕೆ ತಂದರೆ ಎಂತಹ ಸಮಯದಲ್ಲೂ ನಾವುಗಳು ಸ್ಥಳಕ್ಕೆ ಬಂದು ಕಾಮಗಾರಿ ಮಾಡದಂತೆ ತಡೆ ಹಾಕಲಿದ್ದೇವೆ ಎಂದರು.
ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ನಾಲೆ ಮುಚ್ಚಲು ನನ್ನ ಸ್ವಂತ ಹಿಟಾಚಿಗಳನ್ನು ತಂದು ನಾಲೆ ಮುಚ್ಚಿಸುವುದಕ್ಕೆ ಸಿದ್ಧವಿದ್ದೇವೆ, ಯಾವುದೇ ಕಾರಣಕ್ಕೂ ಇಲ್ಲಿಂದ ರಾಮನಗರ ಮಾಗಡಿ ಭಾಗಕ್ಕೆ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ, ತಾವೆಲ್ಲ ರೈತರು ಒಗ್ಗಟ್ಟಿನಿಂದ ನಡೆದರೆ ಖಂಡಿತವಾಗಿ ಯಶಸ್ಸು ಗಳಿಸುತ್ತೇವೆ, ನಮ್ಮ ನೀರನ್ನ ನಾವು ಉಳಿಸಿಕೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಜೀವ್ ಕೃಷ್ಣಪ್ಪ, ವೆಂಕಟೇಶ್ ಕೃಷ್ಣಪ್ಪ, ನಂಜೇಗೌಡ, ಧನಿಯಾ ಕುಮಾರ್, ಬೊರಪ್ಪನ ಹಳ್ಳಿ ಕುಮಾರ್, ಜಗದೀಶ್, ಸುರೇಶ್, ವಿವಿಧ ಸಂಘಟನೆಯ ಮುಖಂಡರು, ರೈತರು ಸಾರ್ವಜನಿಕರು ಹಾಜರಿದ್ದರು.
Comments are closed.