ತುಮಕೂರು: ಅಪಘಾತದಲ್ಲಿ ಗಂಡನನ್ನು ಕಳೆದುಕೊಂಡು ಹಸುಗೂಸಿನೊಂದಿಗೆ ಜೀವಿಸುತ್ತಿರುವ ಮಹಿಳೆಗೆ ಗಂಡನ ಮನೆಯವರು ಇನ್ನಿಲ್ಲದ ಕಿರುಕುಳ ನೀಡುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಪತಿಯ ಮನೆ ಕಡೆಯವರ ಕಿರುಕುಳಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಬೆಳ್ಳಾವಿ ಹೋಬಳಿ ಕನ್ನೇನಹಳ್ಳಿಯ ಲಕ್ಷ್ಮಮ್ಮ ಕೋಂ ಲೇ.ಹನುಮಂತರಾಜು ಅವರು ದೂರಿದ್ದಾರೆ.
ಬೆಳ್ಳಾವಿ ಹೋಬಳಿ ಕನ್ನೇನಹಳ್ಳಿ ಗ್ರಾಮದ ಪುಟ್ಟಕಾಮಯ್ಯ ಅವರಿಗೆ ನಾಲ್ಕು ಗಂಡು ಮತ್ತು ನಾಲ್ವರು ಹೆಣ್ಣು ಮಕ್ಕಳಿದ್ದು, ಕೊನೆಯ ಮಗನಾದ ಹನುಮಂತರಾಜು ಎಂಬುವವರಿಗೆ ಲಕ್ಷಮ್ಮ ಎಂಬ ಹೆಣ್ಣು ಮಗಳನ್ನು ತಂದು ಮದುವೆ ಮಾಡಲಾ ಗಿತ್ತು, ಪುಟ್ಟಕಾಮಯ್ಯ ಊರಿನವರ ಸಮ್ಮುಖದಲ್ಲಿ ತನಗಿದ್ದ ಆಸ್ತಿಯನ್ನು ಗಂಡು ಮಕ್ಕಳಿಗೆ ಹಂಚಿ ಹೆಣ್ಣು ಮಕ್ಕಳಿಗೆ ಹಣ ನೀಡಿ ಎಲ್ಲರ ಒಪ್ಪಿಗೆ ಪಡೆದು ಗಂಡ ಮಕ್ಕಳ ಹೆಸರಿಗೆ ಖಾತೆ ಪಹಣಿ ಮಾಡಿದ್ದರು, 2023ರ ಸೆಪ್ಟಂಬರ್ 05 ರಂದು ಅಪಘಾತದಲ್ಲಿ ಹನುಮಂತರಾಜು ಮೃತಪಟ್ಟಿದ್ದು, ಲಕ್ಷ್ಮಮ್ಮ ಹಸುಗೂಸಿನೊಂದಿಗೆ ಗಂಡನ ಮನೆಯಲ್ಲಿ ವಾಸವಾಗಿದ್ದಾರೆ.
ಹನುಮಂತರಾಜು ಸಾವಿನ ನಂತರ ವಿಧವೆ ಲಕ್ಷ್ಮಮ್ಮ ಅವರಿಗೆ ಗಂಡನ ಅಣ್ಣಂದಿರು ಮತ್ತು ಅಕ್ಕಂದಿರು ಕಿರುಕುಳ ನೀಡಲು ಆರಂಭಿಸಿದ್ದು, ನಿನ್ನ ಕಾಲ ಗುಣದಿಂದ ನನ್ನ ತಮ್ಮ ಸತ್ತು ಹೋಗಿದ್ದಾನೆ, ನೀನು ಮನೆ ಬಿಟ್ಟು ತೊಲಗು, ಇಲ್ಲವೇ ತಮ್ಮನಿಗೆ ಬಂದಿರುವ ಆಸ್ತಿಯನ್ನು ನಮಗೆ ಬರೆದುಕೊಡು ಎಂದು ಧಮಕಿ ಹಾಕುತ್ತಾ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತಿದ್ದಾರೆ, 23-01-2024 ರಂದು ಏಕಾಎಕಿ ಮನೆಗೆ ನುಗ್ಗಿ ಮನೆಯಲ್ಲಿದ್ದ ಹನುಮಂತರಾಜು ಉಪಯೋಗಿಸುತಿದ್ದ ವಡವೆ, ವಸ್ತ್ರ, ಬೀರು, ದ್ವಿಚಕ್ರ ವಾಹನ ತೆಗೆದುಕೊಂಡು ಹೋಗಿದ್ದು, ಬೆಳ್ಳಾವಿ ಪೊಲೀಸರಿಗೆ ದೂರು ನೀಡಿ ಐದು ತಿಂಗಳು ಕಳೆದರೂ ಇದುವರೆಗೂ ತಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ, ಒಬ್ಬಂಟಿಯಾಗಿರುವ ನಾನು ಮತ್ತು ನನ್ನ ಮಗುವಿಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದು ದೂರಿದರು.
ನನ್ನನ್ನು ಹೇಗಾದರೂ ಮಾಡಿ ಮನೆಯಿಂದ ಹೊರ ಹಾಕಿ ನನ್ನ ಗಂಡನಿಗೆ ಬಂದಿರುವ 22.20 ಗುಂಟೆ ಜಮೀನು ಹಾಗೂ ವಾಸದ ಮನೆ ಲಪಟಾಯಿಸುವ ಉದ್ದೇಶದಿಂದ ನನ್ನ ಗಂಡನ ಸಹೋದರರು ಮತ್ತು ಸಹೋದರಿಯರು ಹಾಗೂ ಅವರ ಮಕ್ಕಳು ನಿರಂತರ ಕಿರುಕುಳ ನೀಡುತಿದ್ದು, ನನಗೆ ಹೆದರಿಸಿ 21-05-2024 ರಂದು ಮನೆಯಲ್ಲಿದ್ದ ಸುಮಾರು 2 ಟ್ರಾಕ್ಟರ್ ಲೋಡ್ ಕೊಬ್ಬರಿಯನ್ನು (ಕೆ.ಎ.06-ಟಿಡಿ 2010) ಟ್ಯಾಕ್ಟರ್ ನಲ್ಲಿ ತುಂಬಿಕೊಂಡು ಹೋಗಿದ್ದಾರೆ, ಈ ಸಂಬಂಧ ಮೇ 21 ರಂದೇ ದೂರು ನೀಡಿದ್ದರೂ ಇದುವರೆಗೂ ಎಫ್ ಐಆರ್ ದಾಖಲಿಸದೆ ಮೀನಾ ಮೇಷ ಎಣಿಸುತ್ತಿದ್ದಾರೆ, ಈ ಸಂಬಂಧ ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನೇ ಭೇಟಿಯಾಗಿ ದೂರು ನೀಡಿದ್ದು, ಎಸ್ಪಿ ಅವರು ದೂರವಾಣಿ ಮೂಲಕ ಎಫ್ ಐಆರ್ ದಾಖಲಿಸುವಂತೆ ಸೂಚನೆ ನೀಡಿದ್ದರೂ ಇದು ವರೆಗೂ ಎಫ್ ಐಆರ್ ದಾಖಲಿಸಿಲ್ಲ, ನನಗೆ ಮತ್ತು ನನ್ನ ಮಗುವಿಗೆ ಜೀವ ಭಯವಿದ್ದು, ಸೂಕ್ತ ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ನನ್ನ ಮನೆಯಿಂದ ತೆಗೆದುಕೊಂಡು ಹೋಗಿರುವ ವಡವೆ, ವಸ್ತ್ರ, ಬೈಕ್ ಹಾಗೂ ಕೊಬ್ಬರಿ ವಾಪಸ್ ಕೊಡಿಸುವಂತೆ ಲಕ್ಷ್ಮಮ್ಮ ಮನವಿ ಮಾಡಿದ್ದಾರೆ.
Comments are closed.