ತುಮಕೂರು: ಆಧುನಿಕತೆ ಬೆಳೆದಂತೆ ಮನುಷ್ಯನಲ್ಲಿ ಮಾನವೀಯತೆಯ ಗುಣ ಕಡಿಮೆಯಾಗುತ್ತಿವೆ, ಮಕ್ಕಳಲ್ಲಿ ಸಂಸ್ಕಾರ ಮೂಡಿಸುವ ಬದಲು ಯಂತ್ರಗಳಂತೆ ಬೆಳೆಸಲಾಗುತ್ತಿದೆ, ಮನುಷ್ಯರಲ್ಲಿ ಮತ್ತು ಮಕ್ಕಳಲ್ಲಿ ಸದ್ಬುದ್ಧಿ ಬೆಳೆಯದ ಇಂದಿನ ಪರಿಸ್ಥಿತಿಯಲ್ಲಿ ಮುಂದಿನ ಪೀಳಿಗೆಯನ್ನು ನಾವು ಹೇಗೆ ನಿರೀಕ್ಷಿಸಬಹುದು ಎಂಬುದನ್ನು ಅವಲೋಕಿಸಿ ಎಂದು ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜೀ ಮಹಾರಾಜ್ ತಿಳಿಸಿದರು.
ತುಮಕೂರಿನ ಟೂಡಾ ಕಚೇರಿ ಎದುರು ಇರುವ ಶ್ರೀಶಿರಡಿ ಸಾಯಿ ಬಾಬಾ ಮಂದಿರದಲ್ಲಿ 13ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಭಜನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಮನುಷ್ಯನಲ್ಲಿ ಮಾನವೀಯ ಗುಣಗಳು ಮನೆಯಿಂದಲೇ ಆರಂಭವಾಗಬೇಕು, ಆದರೆ ಅದು ಆಗುತ್ತಿಲ್ಲ, ಸಂಸ್ಕಾರ – ಸಂಸ್ಕೃತಿ ಕ್ಷೀಣಿಸುತ್ತಿವೆ, ಮಕ್ಕಳಿಗೆ ಮನೆಯೇ ಪಾಠಶಾಲೆ, ಆದರೆ ಮನೆಯಲ್ಲಿ ಮಕ್ಕಳಿಗೆ ಏನು ಹೇಳಿ ಕೊಡುತ್ತಿದ್ದೇವೆ ಎಂಬುದರ ಆತ್ಮಾವಲೋಕನ ಆಗಬೇಕು ಎಂದರು.
ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮತ್ತು ತರಬೇತಿ ಸಿಗುತ್ತಿಲ್ಲ, ಇದು ಮನೆಯಲ್ಲಿನ ಪರಿಸ್ಥಿತಿಯಾದರೆ, ಶಾಲಾ ಕಾಲೇಜುಗಳಲ್ಲಿ ಮಕ್ಕಳನ್ನು ತಯಾರು ಮಾಡುವ ವಿಧಾನವೇ ಬದಲಾಗುತ್ತಿದೆ, ಅಂಕಗಳನ್ನು ಗಳಿಸುವ ಯಂತ್ರಗಳನ್ನಾಗಿ ಮಕ್ಕಳನ್ನು ರೂಪಿಸಲಾಗುತ್ತಿದೆ, ಹೆಚ್ಚು ಅಂಕ ಗಳಿಸಿದವರು ಮಾತ್ರವೇ ಉತ್ತಮ ವಿದ್ಯಾರ್ಥಿಗಳು, ಉಳಿದವರು ಅನರ್ಹರು ಎನ್ನುವ ವಾತಾವರಣ ನಿರ್ಮಾಣವಾಗಿದೆ, ಎಲ್ಲಿಯೂ ಮಾನವೀಯತೆ, ಮನುಷ್ಯತ್ವ, ಅಂತಃಕರಣದ ತಿಳುವಳಿಕೆಯಾಗಲಿ, ವಿದ್ಯಾಭ್ಯಾಸವಾಗಲಿ ಸಿಗುತ್ತಿಲ್ಲ, ಇದರಿಂದಾಗಿ ವಿದ್ಯಾರ್ಥಿ ಸಮೂಹ ಇಂದು ಬೇರೊಂದು ಲೋಕಕ್ಕೆ ಹೋಗುವಂತಹ ಅಪಾಯಕಾರಿ ವಾತಾವರಣ ನಿರ್ಮಾಣವಾಗಿದೆ ಎಂದರು.
ಮಕ್ಕಳ ಬಗ್ಗೆ ಪೋಷಕರು ವಿಪರೀತ ಕನಸು ಇಟ್ಟುಕೊಂಡಿದ್ದಾರೆ, ಡಾಕ್ಟರ್ ಆಗಬೇಕು, ಇಂಜಿನಿಯರ್ ಹೀಗೆ ಉನ್ನತ ಹುದ್ದೆಗಳ ಕನಸು ಕಾಣುತ್ತಾರೆ, ಮನೆಯಲ್ಲಾಗಲಿ, ಶಾಲೆಗಳಲ್ಲಾಗಲಿ ಇದೇ ಧೋರಣೆ ಇದೆ, ಯಾರಿಗೂ ಸಹ ಮನುಷ್ಯರಾಗಲು, ಮನುಷ್ಯತ್ವ ರೂಪಿಸಲು ಮನಸ್ಸಿಲ್ಲ, ಈ ಧೋರಣೆ ಬದಲಾಗಬೇಕು, ಇದಕ್ಕಾಗಿ ನಾವು ಬುದ್ಧನ ಇತಿಹಾಸ ತಿಳಿಯಬೇಕು, ಇಂದು ಬುದ್ಧ ಜಯಂತಿ, ಬುದ್ಧ ಈ ಸಮಾಜದಲ್ಲಿ ಕ್ರೂರ ಮನುಷ್ಯರನ್ನು ಮಾನವೀಯ ಮನುಷ್ಯರನ್ನಾಗಿ ಹೇಗೆ ಪರಿವರ್ತಿಸಿದ ಎಂಬುದನ್ನು ತಿಳಿಯಬೇಕು, ಮಕ್ಕಳಿಗೂ ತಿಳಿಸಬೇಕು, ಆಗ ಮಾತ್ರ ನಾವು ಉತ್ತಮ ಸಮಾಜ ಮತ್ತು ಉತ್ತಮ ಪ್ರಜೆಗಳನ್ನು ನೋಡಲು ಸಾಧ್ಯವಾಗುತ್ತದೆ ಎಂದರು.
ಸಾಯಿಬಾಬಾ ಮಂದಿರದ ವಿಶೇಷ ಪೂಜಾ ಕಾರ್ಯಕ್ರಮಗಳು ಹಾಗೂ ಭಜನಾ ಕಾರ್ಯಕ್ರಮದ ವೇಳೆ ಪತ್ರಕರ್ತ ಎಸ್.ನಾಗಣ್ಣ, ಸಾಯಿಬಾಬಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ನಟರಾಜ ಶೆಟ್ಟಿ, ಉಪಾಧ್ಯಕ್ಷ ಎಂ.ಬಸವಯ್ಯ, ಶ್ರೀನಿವಾಸ್, ಶಂಕರ್, ಸುಜಯ್ ಬಾಬು, ವಾಸುದೇವ್, ಆರ್.ಎಲ್.ರಮೇಶ್ ಬಾಬು ಇದ್ದರು.
Comments are closed.