ಶಿಕ್ಷಣ ಇಲಾಖೆಯ ಸುತ್ತೋಲೆಗೆ ಸೆಡ್ಡು

ಬೇಸಿಗೆ ರಜೆಗೂ ಮುನ್ನವೇ ಶಾಲೆ ಆರಂಭ- ಖಾಸಗಿ ಶಾಲೆಗಳ ದರ್ಬಾರ್

32

Get real time updates directly on you device, subscribe now.


-ಆನಂದ್ ಸಿಂಗ್.ಟಿ.ಹೆಚ್.

ಕುಣಿಗಲ್: ತಾಲೂಕಿನಲ್ಲಿ ಪ್ರೌಢ, ಪ್ರಾಥಮಿಕ ಶೈಕ್ಷಣಿಕ ಪ್ರಸಕ್ತ ವರ್ಷದ (2024-25) ಪ್ರವೇಶಕ್ಕೆ ಇನ್ನು ಬೇಸಿಗೆ ರಜೆ ಮುಗಿಯದೆ ಇದ್ದರೂ ಬಹುತೇಕ ಖಾಸಗಿ ಶಾಲೆಗಳು ಈಗಾಗಲೆ ದಾಖಲಾತಿ ಪ್ರಕ್ರಿಯೆ ಆರಂಭಕ್ಕೆ ಸಿದ್ಧತೆ ನಡೆಸಿದ್ದರೆ, ಕೆಲ ಖಾಸಗಿ ಶಾಲೆಗಳು ಶಾಲೆ ಆರಂಭಿಸಿ ಶಿಕ್ಷಣ ಇಲಾಖೆಯ ಸುತ್ತೋಲೆಗೆ ಸೆಡ್ಡುಹೊಡೆದಿದ್ದು ಶಿಕ್ಷಣ ಇಲಾಖಾಧಿಕಾರಿಗಳ ಕಾರ್ಯವೈಖರಿ ಪ್ರಶ್ನಿಸುವಂತಾಗಿದೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೇ 29 ರ ನಂತರ ಪ್ರಾಥಮಿಕ, ಪ್ರೌಢ ಶಾಲೆಗಳ ಆರಂಭಕ್ಕೆ ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು, ಯಾವುದೇ ಕಾರಣಕ್ಕೂ ಮಕ್ಕಳ ಬೇಸಿಗೆ ರಜೆ ಕಡಿತ ಮಾಡದಂತೆ ಆದೇಶ ನೀಡಿತ್ತು, ಇದನ್ನು ಮೀರಿ ಬೆಂಗಳೂರಿನ ಕೆಲ ಖಾಸಗಿ ಶಾಲೆ ಆರಂಭಗೊಂಡಿದ್ದು ಮಕ್ಕಳ ಹಕ್ಕುಗಳ ಆಯೋಗ ದಾಳಿ ಮಾಡಿ ಸರ್ಕಾರದ ನಿರ್ದೇಶನ ಪಾಲನೆ ಮಾಡುವಂತೆ ಸೂಚನೆ ನೀಡಿದೆ, ಆದರೆ ತಾಲೂಕಿನಲ್ಲಿ ಬಹುತೇಕ ಖಾಸಗಿ ಶಾಲೆಗಳು ಈಗಾಗಲೆ ದಾಖಲಾತಿ ಪ್ರಕ್ರಿಯೆ ಬಹುತೇಕ ಪೂರ್ಣ ಗೊಳಿಸುವುದರ ಜೊತೆಯಲ್ಲಿ ಶಾಲೆ ಆರಂಭ ಮಾಡಿವೆ ಎನ್ನಲಾಗುತ್ತಿದೆ, ಈ ಮಧ್ಯೆ ಶಾಲಾ ಶಿಕ್ಷಣ ಆಯುಕ್ತರು ಮೇ 20, 2024 ರಂದು ಸುತ್ತೋಲೆ ಹೊರಡಿಸಿದ್ದು ಖಾಸಗಿ ಅನುದಾನ ರಹಿತ ಶಾಲೆಗಳು ಶುಲ್ಕ ವಿವರ ಪ್ರಕಟಿಸುವಂತೆ ಸೂಚನೆ ನೀಡಿದ್ದಾರೆ, ಸುತ್ತೋಲೆಯಲ್ಲಿ ಶಿಕ್ಷಣ ಹಕ್ಕು ಕಾಯಿದೆ 2009 ಹಾಗೂ ಕರ್ನಾಟಕ ಕಡ್ಡಾಯ ಮತ್ತು ಉಚಿತ ಪ್ರಾಥಮಿಕ ಶಿಕ್ಷಣ ಹಕ್ಕು ನಿಯಮಗಳು 2012ರ ನಿಯಮ ಉಲ್ಲೇಖಿಸಿ ಸುತ್ತೋಲೆ ಹೊರಡಿಸಿದ್ದು ಶಿಕ್ಷಣ ಹಕ್ಕು ಕಾಯಿದೆ 2009ರ ನಿಯಮ 13ರ ಪ್ರಕಾರ ಮಕಕ್ಳನ್ನು ಶಾಲೆಗೆ ದಾಖಲಿಸುವ ವೇಳೆ ಯಾವುದೇ ವಂತಿಗೆ ಹಾಗೂ ಮಕ್ಕಳ ಸ್ಕ್ರೀನಿಂಗ್ ಮಾಡುವಂತಿಲ್ಲ, ನಿಯಮ 13(1) ಶಾಲೆಯ ಯಾವುದೇ ವ್ಯಕ್ತಿ, ಮಕ್ಕಳಿಂದ, ಮಕ್ಕಳ ಪೋಷಕರು, ಪಾಲಕರಿಂದ ವಂತಿಗೆ ಪಡೆಯುವಂತಿಲ್ಲ ಮತ್ತು ಇವರನ್ನು ಯಾವುದೇ ಪರೀಕ್ಷೆಗೆ ಒಳಪಡಿಸುವಂತಿಲ್ಲ, 13(2)ರ (ಎ) ಪ್ರಕಾರ ನಿಯಮ 13(1) ನ್ನು ಉಲ್ಲಸುವ ಶಾಲೆಯಿಂದ ಪಡೆದ ವಂತಿಗೆಯ ಹತ್ತು ಪಟ್ಟು ದಂಡ ವಿಧಿಸಬಹುದಾಗಿದ್ದು, 13(1) (ಬಿ) ಪ್ರಕಾರ ಮಕ್ಕಳು, ಪೋಷಕರು ಹಾಗೂ ಪಾಲಕರಿಂದ ಯಾವುದೇ ಪರೀಕ್ಷೆ ಮಾಡಿದ್ದಲ್ಲಿ ಮೊದಲಿಗೆ 25 ಸಾವಿರ ದಂಡ, ಎರಡನೆ ಬಾರಿಗೆ ಐವತ್ತು ಸಾವಿರ ದಂಡ ವಿಧಿಸಬಹುದು ಎಂದು ತಿಳಿಸಲಾಗಿದೆ.

ಎಲ್ಲಾ ಖಾಸಗಿ ಶಾಲೆಗಳು ತಾವು ಪಡೆಯುವ ಶುಲ್ಕದ ವಿವರನ್ನು ತಮ್ಮ ಶಾಲಾ ಜಾಲತಾಣದಲ್ಲಿ, ಶಾಲಾ ಸೂಚನಾ ಫಲಕದಲ್ಲಿ ಸಾರ್ವಜನಿಕರಿಗೆ, ಪೋಷಕರ ಗಮನಕ್ಕೆ ಬರುವಂತೆ ಪ್ರಕಟಿಸುವಂತೆ ಸೂಚನೆ ನೀಡಲಾಗಿದ್ದು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ತಿಳಿಸಲಾಗಿದೆ, ಆದರೆ ಪ್ರಸಕ್ತ ಸಾಲಿನ ಶೈಕ್ಷಣಿಕ ಶಾಲಾ ಪ್ರವೇಶ ಪ್ರಕ್ರಿಯೆ ಬಹುತೇಕ ಖಾಸಗಿ ಶಾಲೆಗಳು ಪೂರ್ಣಗೊಳಿಸಿವೆ ಎನ್ನಲಾಗಿದೆ, ಅಲ್ಲದೆ ದಾಖಲಾತಿ ವೇಳೆ ಮಕ್ಕಳಿಗೆ ಪರೀಕ್ಷೆ ನಡೆಸಿ ದಾಖಲು ಮಾಡಿಕೊಳ್ಳುವುದರಿಂದ ಓದುವ ಮಕ್ಕಳನ್ನು ಸೇರಿಸಿಕೊಂಡು ಮತ್ತಷ್ಟು ಓದಿಸಿ ಶೇ. ನೂರಕ್ಕೆ ನೂರು ಫಲಿತಾಂಶ ಜಾಹಿರಾತಿಗೆ ಈಗಿನಿಂದಲೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮಧ್ಯಮ ಮತ್ತು ಕನಿಷ್ಟ ಬುದ್ಧಿಮತ್ತೆಯ ಮಕ್ಕಳು ಸರ್ಕಾರಿ ಶಾಲೆಗೆ ಸೇರುವಂತ ಅನಿವಾರ್ಯ ವಾತಾವರಣ ಉಂಟು ಮಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ.
ಸರ್ಕಾರ ಕುಣಿಗಲ್ ತಾಲೂಕು ಒಂದರಲ್ಲೆ ಪ್ರಾಥಮಿಕ, ಪ್ರೌಢ ಶಿಕ್ಷಣಕ್ಕಾಗಿ ಬಿಸಿಯೂಟ ಸೇರಿದಂತೆ ವಾರ್ಷಿಕ 1200 ರಿಂದ 1300 ಕೋಟಿ ವ್ಯಯ ಮಾಡುತ್ತಿದ್ದು, ಖಾಸಗಿ ಶಾಲೆಗಳ ದಾಖಲಾತಿಗೆ ಪರೀಕ್ಷೆ ವ್ಯವಸ್ಥೆಯ ಮೂಲಕ ಸರ್ಕಾರಿ ಶಾಲೆಯ ಮೇಲೆ ಪರೋಕ್ಷ ಒತ್ತಡ ಉಂಟಾಗುವ ಸ್ಥಿತಿ ನಿರ್ಮಾಣವಾಗುತ್ತಿದ್ದು ಶಿಕ್ಷಣ ಇಲಾಖಾಧಿಕಾರಿಗಳು ಇಂತಹ ನಿಯಮ ಬಾಹಿರ ವ್ಯವಸ್ಥೆಗೆ ಕಡಿವಾಣ ಹಾಕಬೇಕೆನ್ನುವುದು ಪೋಷಕರ ಅಭಿಪ್ರಾಯವಾಗಿದೆ.

ಯಾವುದೇ ಖಾಸಗಿ ಶಾಲೆಗಳು ತಮ್ಮ ಶಾಲಾ ನೋಟಿಸ್ ಬೋರ್ಡ್ನಲ್ಲಿ ಪ್ರವೇಶ ಶುಲ್ಕದ ಘೋಷಣೆ ಮಾಡಿಲ್ಲ, ಸಾರ್ವಜನಿಕರಿಗೂ, ಪೋಷಕರಿಗೆ ಮಾಹಿತಿ ಗೊತ್ತಿಲ್ಲ, ಅಲ್ಲದೆ ಸಿಬಿಎಸ್, ಐಸಿಎಸ್ ಇ ಸಿಲೆಬಸ್ ನ ಶಾಲೆಗಳಲ್ಲಿ ರಾಜ್ಯ ಪಠ್ಯ ಕ್ರಮ ಭೋದನೆ ಮಾಡುವಂತಿಲ್ಲ, ಆದರೂ ಈ ನಿಟ್ಟಿನಲ್ಲಿ ಕ್ರಮ ಇಲ್ಲ ಎಂದು ಯುವ ಮುಖಂಡ ವಿನೋದ್ ಆರೋಪಿಸುತ್ತಾರೆ.
ಕೆಲ ಖಾಸಗಿ ಶಾಲೆಗಳಲ್ಲಿ ಮಕ್ಕಳ ಪರೀಕ್ಷೆ ನಡೆಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ದಾಖಲು ಮಾಡಿಕೊಳ್ಳುವ ಕೆಟ್ಟ ಸಂಸ್ಕೃತಿಗೆ ಇಳಿದಿದ್ದು ಇದು ನಿಜಕ್ಕೂ ಖಂಡನೀಯ, ಶಿಕ್ಷಣ ಇಲಾಖಾಧಿಕಾರಿಗಳು ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಲು ದಾಖಲಾತಿ ಸಮಯದಲ್ಲಿ ಖಾಸಗಿ ಶಾಲೆಗಳ ಮೇಲೆ ದಾಳಿ ನಡೆಸಿ ಕ್ರಮ ಜರುಗಿಸಬೇಕೆಂದು ಕರವೇ ತಾಲೂಕು ಅಧ್ಯಕ್ಷ ಮಂಜನಾಥ್ ಒತ್ತಾಯಿಸಿದ್ದಾರೆ.

ಖಾಸಗಿ ಶಾಲೆಗಳಲ್ಲಿ ಮಕ್ಕಳ ಪರೀಕ್ಷೆ ನಡೆಸಿ ದಾಖಲು ಮಾಡಿಕೊಳ್ಳುವುದು ನಿಯಮ ಬಾಹಿರ, ಅಂತಹ ಪ್ರಕರಣಗಳಿದ್ದ ಪೋಷಕರು ದೂರು ನೀಡಿದಲ್ಲಿ ಕ್ರಮ ಕೈಗೊಳ್ಳಲಾಗುವುದು, ಸಿಬಿಎಸ್ ಇ, ಐಸಿಎಸ್ ಇ ಸಿಲೆಬಸ್ ಶಾಲೆಗಳು ಸ್ಟೇಟ್ ಸಿಲೆಬಸ್ ಭೋದನೆ ಮಾಡದಂತೆ ನೋಟೀಸ್ ನೀಡಲಾಗಿದೆ
-ಬೋರೇಗೌಡ, ಬಿಇಒ, ಕುಣಿಗಲ್.

Get real time updates directly on you device, subscribe now.

Comments are closed.

error: Content is protected !!