ಸಂತ್ರಸ್ಥ ಮಹಿಳೆಯರ ನ್ಯಾಯಕ್ಕಾಗಿ ಹೋರಾಟ

ಮೇ 30ಕ್ಕೆ ಪ್ರಜ್ವಲ್ ಬಂಧನಕ್ಕೆ ಆಗ್ರಹಿಸಿ ಹಾಸನ ಚಲೋ

38

Get real time updates directly on you device, subscribe now.


ತುಮಕೂರು: ಹಾಸನದ ಪೆನ್ಡ್ರೈವ್ ಲೈಂಗಿಕ ಹತ್ಯಾಕಾಂಡದ ಪ್ರಮುಖ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬಂಧನಕ್ಕೆ ಒತ್ತಾಯಿಸಿ ಹಾಗೂ ಸಂತ್ರಸ್ಥ ಮಹಿಳೆಯರಿಗೆ ನೈತಿಕ ಸ್ಥೈಯ ತುಂಬುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯಿಂದ ಮೇ 30ರ ಗುರುವಾರ ಹಾಸನ ಚಲೋ ಆಂದೋಲನ ಹಮ್ಮಿ ಕೊಂಡಿದ್ದು, ಸಂತ್ರಸ್ಥ ಮಹಿಳೆಯರ ಘನತೆ ಗೌರವ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಸ್ವಯಂ ಪ್ರೇರಿತರಾಗಿ ಭಾಗವಹಿಸುವಂತೆ ಒಕ್ಕೂಟದ ಇಂದಿರಮ್ಮ ಮನವಿ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಘಟನೆ ನಡೆದು ಒಂದು ತಿಂಗಳು ಕಳೆದರೂ ಆರೋಪಿ ಬಂಧಿಸಿಲ್ಲ, ಪೆನ್ ಡ್ರೈವ್ ನ್ನು ಹಾದಿ ಬೀದಿಯಲ್ಲಿ ಹಂಚಿದವರನ್ನು ಬಂಧಿಸಿಲ್ಲ, ಜಾತಿಯ ಕಾರಣಕ್ಕೆ ಸಂತ್ರಸ್ಥ ಮಹಿಳೆಯರು ಕೌಟುಂಬಿಕ ಮರ್ಯಾದೆ ಮತ್ತಿತರರ ಕಾರಣಗಳಿಂದ ಎಸ್ ಐ ಟಿ ಮುಂದೆ ದೂರು ನೀಡಲು ಮುಂದೆ ಬರುತ್ತಿಲ್ಲ, ಈಗ ದೂರು ನೀಡಿದವರಿಗೂ ನೈತಿಕ ಸ್ಥೈರ್ಯ ತುಂಬುವ ಕೆಲಸವನ್ನು ಸರಕಾರ ಮಾಡಿಲ್ಲ, ಕಾನೂನು ಸುವ್ಯವಸ್ಥೆಯ ಜೊತೆಗೆ ಹೆಣ್ಣು ಮಕ್ಕಳ ಘನತೆ, ಗೌರವ ಕಾಪಾಡುವಲ್ಲಿಯೂ ಸರಕಾರ ವಿಫಲವಾಗಿದೆ, ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಕೂಡಲೇ ಸಂತ್ರಸ್ಥರ ಮಹಿಳೆಯರನ್ನು ಭೇಟಿಯಾಗಿ ಅವರಿಗೆ ಧೈರ್ಯ ತುಂಬವ ಕೆಲಸ ಮಾಡಬೇಕಿತ್ತು, ಆದರೆ ಇದುವರೆಗು ಅದು ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಚುನಾವಣೆಯಲ್ಲಿ ಲೈಂಗಿಕ ಹತ್ಯಾಕಾಂಡದ ಆರೋಪಿ ಸಂಸದನೊಂದಿಗೆ ಮೈತ್ರಿ ಮಾಡಿಕೊಂಡ ಸರಕಾರಕ್ಕೆ ಮೂರು ತಿಂಗಳ ಮುಂಚಿತವಾಗಿಯೇ ಇಂತಹದೊಂದು ಮಹಾ ದುರಂತ ನಡೆದಿರುವುದರ ಅರಿವಿಗೆ ಬಂದಿದ್ದರೂ ರಾಜಕೀಯ ಲಾಭಕ್ಕೋಸ್ಕರ ಆತನಿಗೆ ಮತ್ತೆ ಟಿಕೆಟ್ ನೀಡಿ ಇಡೀ ಸಂಸತ್ತಿನ ಮಾನ, ಮಾರ್ಯದೆಯನ್ನೇ ಹಾರಾಜು ಹಾಕಿದೆ, ಅಲ್ಲದೆ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ತಲೆ ತಪ್ಪಿಸಿಕೊಂಡು ತಿಂಗಳಾಗುತ್ತಾ ಬಂದರೂ ಆತನ ಪಾಸ್ ಪೋರ್ಟ್, ಮೀಸಾ ರದ್ದು ಮಾಡದೆ ರೆಡ್ ಕಾರ್ನರ್ ನೊಟೀಸ್ ಹೊರಡಿಸದೆ, ದಿನ ಕಳೆಯುತ್ತಿರುವುದರ ಹಿಂದಿನ ಹುನ್ನಾರ, ಆರೋಪಿಯನ್ನು ರಕ್ಷಿಸುವುದೇ ಆಗಿದೆ, ಇದರ ವಿರುದ್ಧ ಜನಾಂದೋಲನ ರೂಪಿಸಿ, ಆರೋಪಿಯನ್ನು ಬಂಧಿಸುವಂತೆ ಸರಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಮೇ 30 ರಂದು ಇಡೀ ರಾಜ್ಯದ ಮೂಲೆ ಮೂಲೆಯಿಂದ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಹೆಸರಿನಲ್ಲಿ ಜನವಾದಿ ಮಹಿಳಾ ಸಂಘಟನೆಗೆ ಸೇರಿದಂತೆ ಮಹಿಳೆಯರ ಪರವಾಗಿ ಕೆಲಸ ಮಾಡುತ್ತಿರುವ ಎಲ್ಲಾ ಸಂಘಟನೆಗಳು ಹೋರಾಟಕ್ಕೆ ಮುಂದಾಗಿವೆ ಎಂದರು.

ಪ್ರಜ್ವಲ್ ರೇವಣ್ಣ ಎಂಬ ಸಂಸದನಿಂದ ಮಹಿಳಾ ಅಧಿಕಾರಿಗಳು, ವಿವಿಧ ಸ್ಕೀಂಗಳಲ್ಲಿ ಕೆಲಸ ಮಾಡುವ ಕಾರ್ಯಕರ್ತೆಯರು ಸೇರಿದಂತೆ ಹಲವರು ಸಂತ್ರಸ್ಥರಿದ್ದಾರೆ, ಸಂಸದನ ಕಚೇರಿಯನ್ನೇ ತನ್ನ ಆಟೋಟೋಪಗಳಿಗೆ ಬಳಸಿಕೊಂಡು ಸಂಸದ ಎಂಬ ಪದದ ಘನತೆಗೆ ಧಕ್ಕೆ ತಂದಿರುವ ವ್ಯಕ್ತಿಗಳನ್ನು ಬಂಧಿಸಿ ಆತನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು, ಮೇ 30 ರಂದು 10 ಸಾವಿರಕ್ಕೂ ಹೆಚ್ಚು ಜನ ಸಮಾವೇಶಗೊಂಡು ಹಾಸನದ ಹೇಮಾವತಿ ಪ್ರತಿಮೆಯಿಂದ ಹೊಸ ಬಸ್ ನಿಲ್ದಾಣದ ವರೆಗೆ ಬೃಹತ್ ಪ್ರತಿಭಟನೆ ಮತ್ತು ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದು ಇಂದಿರಮ್ಮ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚಿಂತಕ ಕೆ.ದೊರೆರಾಜು, ಸಂಯುಕ್ತ ಹೋರಾಟ- ಕರ್ನಾಟಕದ ಸಿ.ಯತಿರಾಜು, ನಿವೃತ್ತ ನೌಕರರ ಸಂಘದ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಮಹಿಳಾ ಹೋರಾಟಗಾರ್ತಿ ಬಿ.ಸಿ.ಶೈಲಾನಾಗರಾಜು, ಆರ್.ರಾಮಕೃಷ್ಣಪ್ಪ, ಪಿ.ಎನ್.ರಾಮಯ್ಯ, ಸೈಯದ್ ಮುಜೀಬ್, ಎಐಎಂಎಸ್ ಎಸ್ ನ ಕಲ್ಯಾಣಿ, ಮಂಜುಳ ಗೋನಾವರ್, ಎನ್.ಕೆ.ಸುಬ್ರಮಣ್ಯ, ಎ.ಲೋಕೇಶ್, ಡೊಂಬತ್ತನಹಳ್ಳಿ ನಾಗರಾಜು, ರಾಣಿ ಚಂದ್ರಶೇಖರ್, ಟಿ.ಆರ್.ಕಲ್ಪನ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!