ತುಮಕೂರು: ಮಳೆಯಿಂದ ಆದ ಗೃಹ ಹಾನಿ ಹಾಗೂ ಜಾನುವಾರು ಸಾವು ಪ್ರಕರಣದಲ್ಲಿ ಸಂಬಂಧಿಸಿದ ಮಾಲೀಕರಿಗೆ ಶೀಘ್ರವಾಗಿ ಪರಿಹಾರ ಮೊತ್ತ ಪಾವತಿಯಾಗುವಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ವೀಡಿಯೋ ಕಾನ್ಪೆರೆನ್ಸ್ ಸಭಾಂಗಣದಲ್ಲಿ ನಡೆದ ಮುಂಗಾರು ಹಾಗೂ ಬರ ನಿರ್ವಹಣೆಗೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಒಂದು ವಾರದಿಂದ ಜಿಲ್ಲಾದ್ಯಂತ ಆಗಿರುವ ಮುಂಗಾರು ಮಳೆಯ ಪ್ರಮಾಣ, ಮಳೆಯಿಂದ ಆದ ಗೃಹ ಹಾನಿ, ಜಾನುವಾರುಗಳ ಸಾವು, ಕುಡಿಯುವ ನೀರು ನಿರ್ವಹಣೆ, ಬರ ನಿರ್ವಹಣೆ ಹಾಗೂ ಕಳೆದ ವಾರ ಮುಖ್ಯಮಂತ್ರಿಗಳು ನೀಡಲಾದ ಸೂಚನೆಗಳನ್ವಯ ಜಿಲ್ಲೆಯಾದ್ಯಂತ ಕೈಗೊಂಡ ಕ್ರಮಗಳು ಸೇರಿದಂತೆ ಮೊದಲಾದ ವಿಷಯದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ಚಿಕ್ಕನಾಯಕನ ಹಳ್ಳಿ ತಹಶೀಲ್ದಾರ್ ಮಾತನಾಡಿ, ಕಳೆದ ಶನಿವಾರ ಸುರಿದ ಮಳೆಗೆ ತಾಲ್ಲೂಕಿನಾದ್ಯಂತ 4 ಮನೆ ಹಾನಿಗೊಳಗಾಗಿದ್ದು, ಪರಿಹಾರ ಪಾವತಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.
ಶಿರಾ ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ನಾಗರಾಜ್ ಮಾತನಾಡಿ, ತಾಲ್ಲೂಕಿನಲ್ಲಿ ವಾಡಿಕೆಯಂತೆ 70 ಮಿ.ಮೀ. ಮಳೆಯಾಗಬೇಕಿದ್ದು, ಪ್ರಸ್ತುತದ ವರೆಗೂ 120 ಮಿ.ಮೀ. ಮಳೆಯಾದ ಕಾರಣ ಕೃಷಿ ಚಟುವಟಿಕೆ ಚುರುಕುಗೊಂಡಿವೆ ಎಂದರು.
ಚಿಕ್ಕನಾಯಕನ ಹಳ್ಳಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಾತನಾಡಿ, ತಾಲ್ಲೂಕಿನ 5 ರೈತ ಸಂಪರ್ಕ ಕೇಂದ್ರಗಳಿಗೆ ಖುದ್ದು ಭೇಟಿ ನೀಡಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸುಸೂತ್ರವಾಗಿ ವಿತರಣೆಯಾಗುತ್ತಿರುವ ಬಗ್ಗೆ ಪರಿಶೀಲಿಸಲಾಗಿದೆ, ತಾಲ್ಲೂಕಿನಲ್ಲಿ ಅಲಸಂದೆ, ಶೇಂಗಾ ಬಿತ್ತನೆ ಕಾರ್ಯ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್.ಎನ್. ಮಾತನಾಡಿ, ಜಿಲ್ಲೆಯಾದ್ಯಂತ ಸಮರ್ಪಕವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆ ನಡೆಯುತ್ತಿದೆ, ರಾಗಿ ಬಿತ್ತನೆ ಜೂನ್ 2ನೇ ವಾರದಿಂದ ನಡೆಯಲಿದೆ ಎಂದರು.
ಕೃಷಿ ಅಧಿಕಾರಿಗಳು ನಿಯಮಿತವಾಗಿ ವಿತರಣಾ ಕೆಂದ್ರಗಳಿಗೆ ಭೇಟಿ ನೀಡಬೇಕು, ಜಿಲ್ಲೆಯ ಎಲ್ಲಾ ಎಪಿಎಂಸಿಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಿವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಮಾತನಾಡಿ, ಖಾಸಗಿ ಕೊಳವೆ ಬಾವಿಗಳಿಂದ ಕುಡಿಯುವ ನೀರು ಪೂರೈಕೆ ಹಾಗೂ ಜಾನುವಾರುಗಳಿಗೆ ಮೇವು ಪೂರೈಕೆ ಸಂಬಂಧಿಸಿದಂತೆ ಯಾವುದೇ ಬಿಲ್ಲುಗಳನ್ನು ಬಾಕಿಯಿಟ್ಟುಕೊಳ್ಳದೆ ತ್ವರಿತ ಪಾವತಿಗೆ ಕ್ರಮ ಕ್ಯೆಗೊಳ್ಳುವಂತೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಶಾರದಮ್ಮ, ಪಿಆರ್ ಇಡಿ ಕಾರ್ಯಪಾಲಕ ಅಭಿಯಂತರ ತಿಮ್ಮರಾಯಪ್ಪ, ಜಿಲ್ಲೆಯ ಎಲ್ಲಾ ಉಪ ವಿಭಾಗಧಿಕಾರಿಗಳು, ತಹಶೀಲ್ದಾರರು ಹಾಜರಿದ್ದರು.
Comments are closed.