ಸರ್ಕಾರಿ ಪದವಿ ಪೂರ್ವ ಕಾಲೇಜು ಶಿಥಿಲ

ಆತಂಕದಲ್ಲಿ ವಿದ್ಯಾರ್ಥಿಗಳು- ಕಣ್ಮುಚ್ಚಿ ಕುಳಿತ ಇಲಾಖೆ

32

Get real time updates directly on you device, subscribe now.


ಮಧುಗಿರಿ: ಸುಮಾರು 27 ವರ್ಷಗಳ ಹಿಂದೆ ನಿರ್ಮಿಸಿದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡದ ಕೊಠಡಿಗಳ ಮೇಲ್ಛಾವಣಿ ಮತ್ತು ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡು ಶಿಥಿಲಗೊಂಡಿದೆ.
ನಿರ್ವಹಣೆಯ ಕೊರತೆಯಿಂದಾಗಿ ಮೇಲ್ಛಾವಣಿಯ ಗಾರೆ ಉದುರುತ್ತಿದ್ದು, ಭಯದ ವಾತಾವರಣದಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾಲ ಕಳೆಯುವಂತಾಗಿದೆ.
1997 ರಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್ ಅವರಿಂದ ಉದ್ಘಾಟನೆಗೊಂಡ ಈ ಕಾಲೇಜಿನಲ್ಲಿ ಗ್ರಾಮೀಣ ಪ್ರದೇಶದ ಬಡ ಕುಟುಂಬದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಾಲೇಜಿನ ಗೋಡೆಗಳು ಬಣ್ಣ ಕಾಣದೇ ಹಳೆಯ ಗೋದಾಮಿನ ರೀತಿಯಂತೆ ಭಾಸವಾಗುತ್ತದೆ, ಕಳೆದ ಆರು ವರ್ಷಗಳ ಹಿಂದೆ 10 ಲಕ್ಷ ವೆಚ್ಚದಲ್ಲಿ ಕಾಲೇಜಿನ ಕಿಟಕಿಗಳಿಗೆ ಕಬ್ಬಿಣದ ರೆಕ್ಕೆಗಳು ಮತ್ತು ಕೊಠಡಿಗಳಿಗೆ ಬಣ್ಣ ಬಳಿಯಲಾಗಿತ್ತಾದರೂ ಕೇವಲ ಎರಡೇ ವರ್ಷಕ್ಕೆ ಬಂದ ಮಳೆಯು ಕಾಲೇಜಿನ ಗೋಡೆಗಳ ಬಣ್ಣವನ್ನೆಲ್ಲ ತೊಳೆದು ಹಾಕಿದ್ದು, ಕಾಮಗಾರಿಯ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ.

ಈ ಕಾಲೇಜಿನಲ್ಲಿ ಒಟ್ಟು ಕಲಾ, ವಿಜ್ಞಾನ ಮತ್ತು ವಾಜಿಜ್ಯ ವಿಭಾಗ ಸೇರಿದಂತೆ ಮೂರು ವಿಭಾಗಗಳಿದ್ದು, ಪ್ರಥಮ ವರ್ಷದಲ್ಲಿ 262, ದ್ವಿತೀಯ ವರ್ಷದಲ್ಲಿ 205 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ, ಪ್ರಥಮ ವರ್ಷದ ವಿಜ್ಞಾನ ವಿಭಾಗದಲ್ಲಿ 66, ದ್ವಿತೀಯ ವರ್ಷದಲ್ಲಿ 61, ವಾಣಿಜ್ಯ ವಿಭಾಗದಲ್ಲಿ ಪ್ರಥಮ ವರ್ಷದಲ್ಲಿ 88, ದ್ವಿತೀಯ ವರ್ಷದಲ್ಲಿ 71 ವಿದ್ಯಾರ್ಥಿಗಳು, ಕಲಾ ವಿಭಾಗದ ಪ್ರಥಮ ವರ್ಷದಲ್ಲಿ 118, ದ್ವಿತೀಯ ವರ್ಷದಲ್ಲಿ 63 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 472 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಈ ಕಾಲೇಜಿನಲ್ಲಿ ಒಟ್ಟು 14 ಕೊಠಡಿಗಳಿದ್ದು, ಇದರಲ್ಲಿ 3 ಲ್ಯಾಬ್ ಕೊಠಡಿಗಳಿವೆ, ಕಾಲೇಜಿನ ಬಹುತೇಕ ಕೊಠಡಿಗಳ ಮೇಲ್ಛಾವಣಿ ಶಿಥಿಲಗೊಂಡಿದ್ದು, ಮಳೆ ಬಂದ ಸಂದರ್ಭದಲ್ಲಿ ಮಳೆಯ ನೀರು ಮೇಲ್ಛಾವಣೆಯಿಂದ ಜಿನುಗುತ್ತಿರುತ್ತದೆ, ಕಾಲೇಜಿನ ಗೋಡೆಗಳ ಮೇಲೆಲ್ಲ ಮಳೆಯ ನೀರು ಜಿನುಗಿ ಗೋಡೆಗಳು ದಿನೇ ದಿನೇ ಶಿಥಿಲಗೊಳ್ಳುತ್ತಿದ್ದು, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಭಯದ ವಾತಾವರಣದಲ್ಲಿ ಪಾಠ ಪ್ರವಚನಗಳನ್ನು ಕೇಳಬೇಕಾದ ಪರಿಸ್ಥಿತಿ ಇದೆ.

ಲೈಬ್ರರಿಗೆ ಕೊಠಡಿ ಇಲ್ಲ: ಕಾಲೇಜಿನಲ್ಲಿ ಲೈಬ್ರರಿ ಪ್ರತ್ಯೇಕ ಕೊಠಡಿ, ಸೈಕಲ್ ಸ್ಟ್ಯಾಂಡ್ ವ್ಯವಸ್ಥೆ ಬೇಕಿದೆ, ಮಳೆ ಬಂದರೆ ಪ್ರಾರ್ಥನೆ ಮಾಡಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇದ್ದು, ಬೆಳಗಿನ ಪ್ರಾರ್ಥನೆ ಮಾಡಲು ಪ್ರತ್ಯೇಕ ಗ್ಯಾಲರಿ ವ್ಯವಸ್ಥೆ ಮಾಡಬೇಕಿದೆ, ಇನ್ನು ಕಾಲೇಜಿನ ಶೌಚಾಲಯ ಬಹಳಷ್ಟು ಹದಗೆಟ್ಟಿದ್ದು, ಇದರಿಂದ ವಿದ್ಯಾರ್ಥಿಗಳು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದು, ಶೌಚಾಲಯಗಳ ದುರಸ್ಥಿ ಕಾರ್ಯವೂ ಆಗಬೇಕಿದೆ.
ಕಾಲೇಜಿನ ಹೊರ ಭಾಗದಲ್ಲಿ ಮೇಲ್ಛಾವಣಿಯಿಂದ ಮಳೆಯ ನೀರು ಹೋಗಲು ಸಿಮೆಂಟ್ ಪೈಪ್ ಗಳನ್ನು ಅಳವಡಿಸಿದ್ದು, ಬಹುತೇಕ ಪೈಪ್ ಗಳು ಅರ್ಧಕ್ಕೆ ತುಂಡಾಗಿರುವುದರಿಂದ ಮಳೆಯ ನೀರು ಕಾಲೇಜಿನ ಗೋಡೆಗಳ ಮೇಲೆ ಹರಿದು ಗೋಡೆಗಳೆಲ್ಲ ಒದ್ದೆಯಾಗುತ್ತಿದ್ದು, ಕಾಲೇಜಿನ ಕೊಠಡಿಗಳು ಶಿಥಿಲಗೊಳ್ಳಲು ಪ್ರಮುಖ ಕಾರಣವಾಗಿದೆ.

ಉಪನ್ಯಾಸಕರ ಕೊಠಡಿಗಳಲ್ಲಿ ಕಾಣಿಸಿಕೊಂಡ ದೊಡ್ಡ ದೊಡ್ಡ ಬಿರುಕು ದಿನದಿಂದ ದಿನಕ್ಕೆ ಅಗಲವಾಗುತ್ತಿದ್ದು, ಮೇಲ್ಛಾವಣಿಯಲ್ಲಿ ಕಬ್ಬಿಣದ ಸರಳುಗಳು ಹೊರಬಂದು ಮೇಲ್ಛಾವಣೆಯಿಂದ ಮಣ್ಣು ಉದುರುತ್ತಿದ್ದು, ಶಿಥಲಗೊಂಡ ಕಟ್ಟಡದ ಶಾಶ್ವತ ದುರಸ್ತಿಗೆ ಇಲಾಖೆ ಮುಂದಾಗಬೇಕು ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಆಗ್ರಹಿಸಿದ್ದಾರೆ.

ಕಾಲೇಜಿನಲ್ಲಿ ಮಳೆ ಬಂದರೆ ಮೇಲ್ಚಾವಣಿಯಿಂದ ಮಳೆಯ ನೀರು ಜಿನುಗುತ್ತಿದ್ದು, ಕಾಲೇಜಿನ ಕೊಠಡಿಗಳ ದುರಸ್ತಿ ಬಗ್ಗೆ ಇಲಾಖೆಗೆ ವರದಿ ನೀಡಿದ್ದು ಅನುದಾನ ಬಿಡುಗಡೆಗೊಂಡ ತಕ್ಷಣ ಕೊಠಡಿಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
-ಎಂ.ಜಿ.ಅಶ್ವತ್ಥ ನಾರಾಯಣ, ಪ್ರಾಚಾರ್ಯರು, ಸರ್ಕಾರಿ ಪದವಿ ಪೂರ್ವ ಕಾಲೇಜು.

Get real time updates directly on you device, subscribe now.

Comments are closed.

error: Content is protected !!