ತುಮಕೂರು: ಜಿಲ್ಲೆಗೆ ಹಂಚಿಕೆಯಾಗಿರುವ ನೀರನ್ನು ಎಕ್ಸ್ ಪ್ರೆಸ್ ಕೆನಾಲ್ ಮೂಲಕ ರಾಮನಗರ ಜಿಲ್ಲೆಯ ಮಾಗಡಿ ಮತ್ತಿತರ ಕಡೆಗೆ ತೆಗೆದುಕೊಂಡು ಹೋಗುವ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು ಹಾಗೂ ಸರಕಾರ ಮಧ್ಯ ಪ್ರವೇಶಿಸಿ ಎರಡು ಜಿಲ್ಲೆಯ ಜನರ ನಡುವೆ ಉಂಟಾಗಿರುವ ಗೊಂದಲ ಬಗೆಹರಿಸಬೇಕು ಎಂದು ಒತ್ತಾಯಿಸಿ ಮೇ 30 ರಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮನೆ ಮುಂದೆ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಮಕೂರು ಜಿಲ್ಲೆಯ ಕುಣಿಗಲ್ ಗೆ ಹಂಚಿಕೆಯಾಗಿರುವ ನೀರು ತೆಗೆದುಕೊಂಡು ಹೋಗಲು ಈಗಾಗಲೇ ತಯಾರಾಗಿದ್ದ ನಾಲೆಯ ಆಧುನೀಕರಣ ಕಾಮಗಾರಿಯೂ ಪೂರ್ಣಗೊಂಡಿದೆ, ಅಲ್ಲದೆ ಎತ್ತಿನ ಹೊಳೆ ಯೋಜನೆಯಿಂದ ಕೊರಟಗೆರೆ ತಾಲೂಕು ಎಲೆರಾಂಪುರದಿಂದ 1.8 ಟಿಎಂಸಿ ನೀರು ತೆಗೆದುಕೊಂಡು ಹೋಗಲು ಪಂಪ್ ಹೌಸ್ ಸಹ ನಿರ್ಮಾಣ ಗೊಂಡಿದೆ, ಹೀಗಿದ್ದು ಸಾವಿರಾರು ಕೋಟಿ ರೂ. ದುಂದು ವೆಚ್ಚ ಮಾಡಿ ಪೈಪ್ ಲೈನ್ ಮೂಲಕ ನೀರು ತೆಗೆದು ಕೊಂಡು ಹೋಗುವ ಅಗತ್ಯವಿದೆ ಎಂದು ಪ್ರಶ್ನಿಸಿದರು.
ಕಳೆದ ಒಂದು ತಿಂಗಳಿನಿಂದ ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ವಿರುದ್ಧ ಹಂತ ಹಂತದ ಪ್ರತಿಭಟನೆ ನಡೆಯುತ್ತಲೇ ಇದೆ, ಹೆಬ್ಬೂರು, ಸಿ.ಎಸ್.ಪುರ ಭಾಗದಲ್ಲಿ ತೆಗೆದಿದ್ದ ನಾಲೆಯನ್ನು ಹೋರಾಟಗಾರರು ಮುಚ್ಚಿ ಪೈಪ್ ತುಂಬಿಕೊಂಡು ಬಂದ ಲಾರಿಗಳನ್ನು ವಾಪಸ್ ಕಳುಹಿಸಲಾಗಿದೆ, ಆದರೆ ರೈತರ ಪ್ರತಿಭಟನೆಗೆ ಮಣಿದು ಪೈಪ್ ಇಳಿಸದೆ ಹೋದ ಲಾರಿಗಳು ಕುಣಿಗಲ್ ಶಾಸಕರಾದ ಡಾ.ಹೆಚ್.ಡಿ.ರಂಗನಾಥ್ ಅವರ ಜಮೀನಿನಲ್ಲಿ ಪೈಪ್ ಗಳನ್ನು ದಾಸ್ತಾನು ಮಾಡಿವೆ, ತುಮಕೂರು ಜಿಲ್ಲೆಗೆ ಅನ್ಯಾಯ ಮಾಡಿ ರಾಮನಗರ ಜಿಲ್ಲೆಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ರದ್ದು ಪಡಿಸುವ ವರೆಗೂ ನಮ್ಮ ಹೋರಾಟ ನಿಲ್ಲದು ಎಂದರು.
ಮುಖಂಡ ದಿಲೀಪ್ ಮಾತನಾಡಿ, ಜಿಲ್ಲೆಗೆ ಹೇಮಾವತಿ ನಾಲೆಯಿಂದ 24.05 ಟಿಎಂಸಿ ನೀರು ನಿಗದಿ ಮಾಡಿದ್ದರೂ ಇದುವರೆಗೂ ಅದು ಸಂಪೂರ್ಣವಾಗಿ ಹರಿದಿಲ್ಲ, ಕುಡಿಯುವ ನೀರು ಮತ್ತು ನೀರಾವರಿ ನೀಡಲು ನಡೆದಿದ್ದ ವಿಸ್ತರಣಾ ನಾಲೆಗಳಲ್ಲಿ ಒಂದು ದಿನವೂ ನೀರು ಹರಿದಿಲ್ಲ, ಹೀಗಿರುವಾಗ ಏಕಾಏಕಿ ನಾಲೆಯಿಂದ 15 ಅಡಿ ಆಳದಲ್ಲಿ ಪೈಪ್ ಲೈನ್ ಮೂಲಕ ನೀರು ಡ್ರಾ ಮಾಡಿದರೆ ಮುಂದಿನ ಊರುಗಳಿಗೆ ನೀರು ಹರಿಯುವ ವೇಗ ಮತ್ತು ಪ್ರಮಾಣ ಕುಗ್ಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪಂಚಾಕ್ಷರಯ್ಯ, ಬೆಟ್ಟಸ್ವಾಮಿ, ತಿಪಟೂರಿನ ಎಂ.ಪಿ.ಪ್ರಸನ್ನಕುಮಾರ್, ಭೂ ರಾಮಣ್ಣ, ಸೌಮ್ಯ, ಪ್ರಭಾಕರ್ ಮತ್ತಿತರರು ಇದ್ದರು.
Comments are closed.