ತುಮಕೂರು: ತುಮಕೂರು ಮೂಲ ನಾಲೆಗೆ ಧಕ್ಕೆ ತರುವ ಮಾಗಡಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ತಕ್ಷಣವೇ ನಿಲ್ಲಿಸಬೇಕು, ಮಾಗಡಿಗೆ ಹಂಚಿಕೆಯಾಗಿರುವ ನೀರನ್ನು ಮೂಲ ನಾಲೆಯ ಮೂಲಕವೇ ತೆಗೆದುಕೊಂಡು ಹೋಗಬೇಕು, ಸರಕಾರ ಎಲ್ಲಾ ಸಂಘಟನೆಗಳೊಂದಿಗೆ ಚರ್ಚಿಸಿ, ಗೊಂದಲಗಳಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಸಂಯುಕ್ತ ಕರ್ನಾಟಕ ವತಿಯಿಂದ ಮೇ 29ರ ಬುಧವಾರ ಬೆಳಗ್ಗೆ 11 ಗಂಟೆಗೆ ಹೇಮಾವತಿ ಮುಖ್ಯ ಇಂಜಿನಿಯರ್ ಕಚೇರಿ ಮುತ್ತಿಗೆ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಮಕೂರು ಜಿಲ್ಲೆಯು ಬರಗಾಲದ ಪರಿಸ್ಥಿತಿಯಲ್ಲಿ ಒದ್ದಾಡುತ್ತಿರುವಾಗ, ರೈತರ ಬೆಳೆಗಳು ಒಣಗುತ್ತಿರುವಾಗ ತುಮಕೂರು ಶಾಖಾ ನಾಲೆಯಿಂದ ನೇರವಾಗಿ ಮಾಗಡಿಗೆ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಏಕಾಏಕಿ ಆರಂಭಿಸಿ ಜಿಲ್ಲೆಯ ಜನರಲ್ಲಿ ಆತಂಕವನ್ನು ಸರಕಾರ ಸೃಷ್ಟಿ ಮಾಡಿದೆ, ಜಿಲ್ಲೆಯ ಎಲ್ಲಾ ತಾಲೂಕುಗಳ ರೈತರು ಮತ್ತು ನಾಗರಿಕರು ಕುಡಿಯುವ ನೀರಿಗೆ, ನೀರಾವರಿಗೆ ಹೇಮಾವತಿ ನೀರಿನ ಮೇಲೆ ಅವಲಂಬಿತರಾಗಿದ್ದಾರೆ, ಹೇಮಾವತಿ ನೀರನ್ನು ನೆಚ್ಚಿಕೊಂಡೇ ಕೃಷಿ ಮತ್ತು ಬದುಕನ್ನು ರೂಪಿಸಿಕೊಂಡಿದ್ದಾರೆ, ಆದ್ದರಿಂದ ನೀರಿನ ಹಂಚಿಕೆಯ ವ್ಯತ್ಯಯವು ತೀವ್ರವಾದ ಕೃಷಿ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ ಎಂಬ ಆತಂಕ ವ್ಯಕ್ತಪಡಿಸಿದರು.
ಎಐಕೆಕೆಎಂಎಸ್ ನ ಎಸ್.ಎನ್.ಸ್ವಾಮಿ ಮಾತನಾಡಿ, ನೀರಿನ ಹಂಚಿಕೆ ಬಹಳ ಸೂಕ್ಷ್ಮ ವಿಷಯ, ಜನರ ಬದುಕೇ ಪಣವಾಗಿರುತ್ತದೆ, ಅಂತಹ ವಿಷಯದಲ್ಲಿ ಸರಕಾರ ಕೇವಲ ಆಡಳಿತಾತ್ಮಕ ನಿರ್ಧಾರ ತೆಗೆದುಕೊಂಡು ಜಿಲ್ಲೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ ಎಂದರು.
ಅಖಿಲ ಭಾರತ ಕಿಸಾನ್ ಸಭಾದ ಕಂಬೇಗೌಡ ಮಾತನಾಡಿ, ಎಕ್ಸ್ ಪ್ರೆಸ್ ಕೆನಾಲ್ ನಿಂದ ಜಿಲ್ಲೆಗೆ ತೀವ್ರ ತೊಂದರೆ ಯಾಗಲಿದೆ, ಆದ್ದರಿಂದ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ನೀರು ಹಂಚಿಕೆಯಾಗಿರುವ ಭಾಗಗಳಿಗೆ ಮೂಲ ನಾಲೆಯ ಮುಖಾಂತರವೇ ನೀರು ಹರಿಸುವ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಬಿ.ಉಮೇಶ್, ಸಿಪಿಐಎಂನ ಎನ್.ಕೆ.ಸುಬ್ರಮಣ್ಯ, ಕರ್ನಾಟಕ ರಾಜ್ಯ ರೈತ ಸಂಘದ ಕೊರಟಗೆರೆ ತಾಲೂಕು ಕಾರ್ಯದರ್ಶಿ ಶಬ್ಬೀರ್ ಪಾಷ ಇತರರು ಇದ್ದರು.
Comments are closed.