ತುಮಕೂರು: ತಾಲ್ಲೂಕಿನ ಬೆಳ್ಳಾವಿ ಹೋಬಳಿ ವ್ಯಾಪ್ತಿಯ ಸೋರೆಕುಂಟೆ, ಪಿ.ಗೊಲ್ಲಹಳ್ಳಿ, ಪುರದಕುಂಟೆ, ಗೌಡನಹಳ್ಳಿ, ಲಿಂಗನಹಳ್ಳಿ, ಗಿರಿಯನಹಳ್ಳಿ ಸೇರಿದಂತೆ 6 ಗ್ರಾಮಗಳ ಸುಮಾರು 1,722 ಎಕರೆ ವಿಸ್ತೀರ್ಣದಲ್ಲಿ ಚೆನ್ನೈ- ಬೆಂಗಳೂರು ಕೈಗಾರಿಕಾ ಕಾರಿಡಾರ್ ಯೋಜನೆ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಯೋಜನೆ ಅಭಿವೃದ್ಧಿಗಾಗಿ ಭೂಮಿ ನೀಡಿರುವ ರೈತರ ಅಹವಾಲು ಅರ್ಜಿಗಳನ್ನು ಸ್ವೀಕರಿಸಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ವಿಶೇಷ ಭೂಸ್ವಾಧೀನ ಅಧಿಕಾರಿ ಸೋಮಪ್ಪ ಕಡಕೋಳ ಅವರ ನೇತೃತ್ವದಲ್ಲಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್ ಸ್ಥಾಪಿಸಲಾಗಿತ್ತು.
ಯಲ್ಲದಡ್ಲು ಗ್ರಾಮದ 1, ಸೋರೆಕುಂಟೆ- 5, ಪುರದಕುಂಟೆ- 1, ಗೌಡನಹಳ್ಳಿ- 4 ರೈತರು ಸೇರಿ ಒಟ್ಟು 11 ರೈತರು ಖುದ್ದಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಲಿಖಿತ ಅರ್ಜಿ ಮೂಲಕ ಅಹವಾಲು ಸಲ್ಲಿಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸ್ಥಳಕ್ಕೆ ಭೇಟಿ ನೀಡಿ ರೈತರಿಂದ ಸಲ್ಲಿಕೆಯಾಗುತ್ತಿರುವ ಅಹವಾಲು ಪರಿಶೀಲಿಸಿ ಆದಷ್ಟು ಬೇಗ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.
ತುಮಕೂರು ತಾಲ್ಲೂಕು ವ್ಯಾಪ್ತಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ಚೆನ್ನೈ- ಬೆಂಗಳೂರು ಕೈಗಾರಿಕಾ ಕಾರಿಡಾರ್ ಯೋಜನೆ ಪರಿವೀಕ್ಷಿಸಲು ಜಿಲ್ಲಾಧಿಕಾರಿ ಸೋರೆಕುಂಟೆ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸದರಿ ಯೋಜನೆ ಅಭಿವೃದ್ಧಿಗಾಗಿ ಭೂಮಿ ನೀಡಿದ ಸ್ಥಳೀಯ ರೈತರು ಇದುವರೆಗೂ ಪರಿಹಾರ ದೊರೆತಿಲ್ಲ, ಶೀಘ್ರ ಭೂ ಪರಿಹಾರ ಒದಗಿಸಿಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು, ಯಾವುದೇ ರೈತರು ಭೂ ಪರಿಹಾರದಿಂದ ವಂಚಿತರಾಗಬಾರದೆಂಬ ದೃಷ್ಟಿಯಿಂದ ಲಿಖಿತ ಅಹವಾಲನ್ನು ಖುದ್ದಾಗಿ ಭೇಟಿ ಮಾಡಿ ತಮಗೆ ಸಲ್ಲಿಸಬೇಕೆಂದು ರೈತರಿಗೆ ತಿಳಿಸಿದರು.
Comments are closed.