ಅದ್ದೂರಿಯಾಗಿ ಮಕ್ಕಳ ಸ್ವಾಗತಕ್ಕೆ ಸಿದ್ಧತೆ

ಮೇ 31ರಿಂದ ಶಾಲೆಗಳು ಪ್ರಾರಂಭ- ಸ್ಕೂಲ್ ಗಳಿಗೆ ಸಿಂಗಾರ

36

Get real time updates directly on you device, subscribe now.


ತುಮಕೂರು: ಮಕ್ಕಳ ಬೇಸಿಗೆ ರಜೆ ಮುಗಿದು ಮೇ 31 ರಂದು ಶಾಲೆಗಳು ಪ್ರಾರಂಭವಾಗುತ್ತಿದ್ದು, ಹಬ್ಬದ ರೀತಿಯಲ್ಲಿ ಶಾಲೆಯನ್ನು ಅಲಂಕರಿಸಿ ಮಕ್ಕಳನ್ನು ಪ್ರೀತಿಯಿಂದ ಸ್ವಾಗತಿಸಲು ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳನ್ನು ಸಿಂಗಾರ ಗೊಳಿಸಲಾಗುತ್ತಿದೆ ಎಂದು ತುಮಕೂರು ಶೈಕ್ಷಣಿಕ ಜಿಲ್ಲೆಯ ಉಪ ನಿದೇಶಕ ಸಿ.ರಂಗಧಾಮಯ್ಯ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪ ರ್ದೇಶಕ ಎಂ.ಆರ್.ಮಂಜುನಾಥ್ ಅವರು ಜಂಟಿಯಾಗಿ ತಿಳಿಸಿದ್ದಾರೆ.
ಮಕ್ಕಳಿಗೆ ಶಾಲಾ ಪ್ರಾರಂಭದ ಮೊದಲ ದಿನ ಮಧ್ಯಾಹ್ನದ ಬಿಸಿಯೂಟದಲ್ಲಿ ವಿಶೇಷವಾಗಿ ಸಿಹಿಯೂಟ ನೀಡಲು ಹಾಗೂ ಪಠ್ಯ ಪುಸ್ತಕ, ಸಮವಸ್ತ್ರ ವಿತರಿಸಲು ಪೂರಕವಾದ ಸಿದ್ಧತೆ ಮಾಡಿಕೊಳ್ಳಲಾಗಿದೆ, ಶಾಲಾ ಕೊಠಡಿಗಳು, ಆಟದ ಮೈದಾನ ಮತ್ತು ಕುಡಿಯುವ ನೀರು, ಶೌಚಾಲಯ ಹಾಗೂ ಬಿಸಿಯೂಟ ತಯಾರಿಸುವ ಪಾತ್ರೆ ಪರಿಕರಗಳ ಸ್ವಚ್ಛತೆಗೆ ಆದ್ಯತೆ ನೀಡುವುದರ ಮೂಲಕ ಮೇ 31ರಂದು ಶಾಲಾ ಪ್ರಾರಂಭೋತ್ಸವ ಆಚರಿಸಲಾಗುವುದು.

ಜಿಲ್ಲೆಯಲ್ಲಿ 2024- 25ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಮೇ 29 ರಂದು ಪ್ರಾರಂಭವಾಗುತ್ತಿದ್ದು, ಮೇ 29 ಮತ್ತು 30 ರಂದು ಶಾಲೆಯ ಸ್ವಚ್ಛತೆ, ಪರಿಸರ ಸ್ವಚ್ಛತೆ ಮತ್ತಿತರ ಪೂರ್ವ ಸಿದ್ಧತಾ ಕಾರ್ಯ ಕೈಗೊಳ್ಳಲು ಎಲ್ಲಾ ಶಾಲಾ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದ್ದು, ಮೇ 31 ರಂದು ಪೋಷಕರು, ಎಸ್ಡಿಎಂಸಿ ಪದಾಧಿಕಾರಿಗಳು ಹಾಗೂ ಸ್ಥಳೀಯರ ಸಹಯೋಗದೊಂದಿಗೆ ಶಾಲಾ ಪ್ರಾರಂಭೋತ್ಸವ ಆಚರಿಸಲಾಗುವುದು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಜಿ.ಪ್ರಭು ಅವರು ಶಾಲಾ ಪ್ರಾರಂಭೋತ್ಸವಕ್ಕೆ ಸಂಬಂಧಿಸಿದಂತೆ ನೀಡಿರುವ ಮಾರ್ಗದರ್ಶನದಂತೆ ಶಾಲೆಗೆ ಸೇರಲು ಅರ್ಹರಿರುವ ಎಲ್ಲಾ ಮಕ್ಕಳನ್ನು ಸಮೀಪದ ಶಾಲೆಗೆ ಕಡ್ಡಾಯವಾಗಿ ದಾಖಲು ಮಾಡಲು ಶಿಕ್ಷಣ ಇಲಾಖೆಯಿಂದ ಪೋಷಕರಲ್ಲಿ ವಿನಂತಿ ಮಾಡಲಾಗಿದೆ, ಬರುವ ಮೇ 31 ರಿಂದ ಒಂದು ವಾರದವರೆಗೆ ದಾಖಲಾತಿ ಅಂದೋಲನ ನಡೆಸಿ ಎಲ್ಲಾ ಮಕ್ಕಳು ಶಾಲೆಗೆ ಹಾಜರಾಗುವಂತೆ ಕ್ರಮ ಕೈಗೊಳ್ಳಲಾಗುವುದು, ಈ ಆಂದೋಲನದಲ್ಲಿ ಯಾವುದೇ ಅರ್ಹ ಮಗು ಶಾಲೆಯಿಂದ ಹೊರಗೆ ಉಳಿಯಬಾರದೆಂಬ ಆಶಯದಿಂದ ಭಿತ್ತಿ ಪತ್ರ ಹಾಗೂ ಬ್ಯಾನರ್ ಗಳ ಮೂಲಕ ಜಾಥಾ, ಮನೆ- ಮನೆ ಭೇಟಿ ನೀಡಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆ ತರಲಾಗುವುದು, ಪ್ರಸ್ತುತ ಮಳೆಗಾಲ ಆಗಿರುವುದರಿಂದ ಯಾವುದಾದರೂ ಶಾಲಾ ಕೊಠಡಿ ದುಸ್ಥಿತಿಯಲ್ಲಿದ್ದಲ್ಲಿ ಅವುಗಳನ್ನು ಬಳಸದಂತೆ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ.

ಶಾಲೆಯ ಪ್ರಾರಂಭದ ದಿನಗಳಲ್ಲಿ ಸೇತುಬಂಧ ಕಾರ್ಯಕ್ರಮದ ಮೂಲಕ ಹಿಂದಿನ ತರಗತಿಯಲ್ಲಿ ಕಲಿತಿರುವ ಅಂಶಗಳು ಮತ್ತು ಪ್ರಸ್ತುತ ತರಗತಿಯಲ್ಲಿ ಕಲಿಯುವ ಅಂಶಗಳ ಸಹ ಸಂಬಂಧದೊಂದಿಗೆ ಪ್ರಸಕ್ತ ಸಾಲಿನ ಬೋಧನಾ ಕಲಿಕಾ ಪ್ರಕ್ರಿಯೆ ಪ್ರಾರಂಭಿಸಲಾಗುವುದು.
ಬರುವ ಜೂನ್ 14 ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ- 2 ನಡೆಯಲಿದ್ದು, ಪರೀಕ್ಷೆ- 1 ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮತ್ತು ಇನ್ನೂ ಹೆಚ್ಚಿನ ಅಂಕ ಗಳಿಸ ಬಯಸುವ ವಿದ್ಯಾರ್ಥಿಗಳಿಗಾಗಿ ಮೇ 29 ರಿಂದ ಜೂನ್ 13ರ ವರೆಗೆ ಆಯಾ ಶಾಲೆಗಳಲ್ಲಿ ವಿಶೇಷ ಪರಿಹಾರ ಬೋಧನಾ ತರಗತಿ ನಡೆಸಲಾಗುವುದು, ಬೇರೆ ಶಾಲೆಗಳಲ್ಲಿ ಓದಿದ್ದರೂ ಪ್ರಸ್ತುತ ವಾಸವಿರುವ ಸ್ಥಳಕ್ಕೆ ಸಮೀಪವಿರುವ ಪ್ರೌಢಶಾಲೆಯಲ್ಲಿ ಹಾಜರಾಗಿ ಪರಿಹಾರ ಬೋಧನೆ ಸೌಲಭ್ಯ ಪಡೆಯಬಹುದಾಗಿದೆ, ಪೋಷಕರು ಮತ್ತು ವಿದ್ಯಾರ್ಥಿಗಳು ಈ ಸೌಲಭ್ಯ ಉಪಯೋಗಿಸಿ ಕೊಳ್ಳಬೇಕೆಂದು ಕೋರಿದ್ದಾರೆ.

Get real time updates directly on you device, subscribe now.

Comments are closed.

error: Content is protected !!