ಸರ್ಕಾರಿ ಶಾಲೆಗಳ ಅವನತಿಗೆ ಸರ್ಕಾರ ಕಾರಣ

43

Get real time updates directly on you device, subscribe now.


ಮಧುಗಿರಿ: ಈ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಎಲ್ ಕೆ ಜಿ ಆರಂಭಿಸುತ್ತೇವೆ ಎಂದು ಕಾಂಗ್ರೆಸ್ ನವರು ಹೊರಟಿದ್ದು, ಸರ್ಕಾರಿ ಶಾಲೆಗಳಲ್ಲಿ 60 ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆಯಿದ್ದು, 50 ಸಾವಿರಕ್ಕೂ ಹೆಚ್ಚು ಕೊಠಡಿಗಳ ಸಮಸ್ಯೆ ಇದೆ, ಸರ್ಕಾರಿ ಶಾಲೆಗಳ ಅವನತಿಗೆ ಕಾರಣವಾಗುತ್ತಿರುವ ಈ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಎಂಎಲ್ಸಿ ಚಿದಾನಂದ ಎಂ ಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ವೈ.ಎ. ನಾರಾಯಣ ಸ್ವಾಮಿ ಪರ ಮತ ಯಾಚಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಬರೀ ಗ್ಯಾರಂಟಿ ಯೋಜನೆಗಳ ಜಪ ಮಾಡುತ್ತಿದ್ದಾರೆ, ಈ ಶೈಕ್ಷಣಿಕ ವರ್ಷದಲ್ಲಿ ಈಗಾಗಲೇ ಶಾಲೆಗಳು ಆರಂಭ ವಾಗುತ್ತಿದ್ದು, ಇಲ್ಲಿಯ ವರೆಗೂ ಒಬ್ಬೇ ಒಬ್ಬ ಶಿಕ್ಷಕರನ್ನೂ ನೇಮಿಸಿಲ್ಲ, ಈ ಸರ್ಕಾರದಲ್ಲಿ ಅಮ್ಮಂದಿರು ಬಸ್ ಗಳಲ್ಲಿ ಹೋಗುತ್ತಿದ್ದರೆ, ಸರ್ಕಾರಿ ಶಾಲೆಯ ಮಕ್ಕಳು ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾರೆ, ಕನ್ನಡ ಓದಲು ಬಾರದವರನ್ನು ಶಿಕ್ಷಣ ಮಂತ್ರಿಗಳನ್ನಾಗಿ ಮಾಡಿದ್ದಾರೆ, ಇವರು ಶಿಕ್ಷಣ ಸಚಿವರಾಗಿ ಮುಂದುವರಿಯಲು ಅರ್ಹರಲ್ಲ.

ಮಕ್ಕಳಿಗೆ ವಿದ್ಯಾರ್ಥಿ ವೇತನ ನಿಂತು ಹೋಗಿದೆ, ಶಾಲೆಗಳಿಗೆ ಮೂಲಭೂತ ಸೌಕರ್ಯ ನೀಡದೆ ಶಾಲೆಗಳನ್ನು ಅಭಿವೃದ್ಧಿ ಮಾಡದೆ ಅನುದಾನಿತ ಮತ್ತು ಸರ್ಕಾರಿ ಶಾಲೆಗಳನ್ನು ಸರ್ವನಾಶ ಮಾಡುತ್ತಿದ್ದಾರೆ, 5,8,9 ನೇ ತರಗತಿ ಮಕ್ಕಳಿಗೆ ಮೂರು ಪರೀಕ್ಷೆ ಮಾಡಿ ಶಿಕ್ಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿದ್ದಾರೆ, ಸಿಇಟಿ ಯಲ್ಲಿ ಸುಮಾರು 50 ಪ್ರಶ್ನೆಗಳನ್ನು ಔಟ್ ಆಫ್ ಸಿಲಬಸ್ ನಲ್ಲಿ ನೀಡುವ ಮೂಲಕ ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟವಾಡಿದರು.
7ನೇ ವೇತನ ಆಯೋಗ ಜಾರಿ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಜಾರಿಗೊಳಿಸಲಿಲ್ಲ, ಕೇಂದ್ರದ ಹಣ ಸಂಪೂರ್ಣವಾಗಿ ಬಂದಿದ್ದರೂ ರೈತರ ಖಾತೆಗೆ ಹಣ ಬಂದಿಲ್ಲ ಎಂದರು.
ಎನ್ ಪಿ ಎಸ್ ನ್ನು ತೆಗೆದು ಹಾಕಿ ಓಪಿಎಸ್ ಮಾಡುತ್ತೇವೆ ಎಂದು ಹೇಳಿದ್ದರೂ ಇದುವರೆಗೂ ಮಾಡಿಲ್ಲ, ಆಯೋಗ ರಚಿಸಿದ್ದು ಬಿಟ್ಟರೆ ಒಂದೇ ಒಂದು ಮೀಟಿಂಗ್ ಮಾಡಿಲ್ಲ, ಈ ಸರ್ಕಾರ ಶಿಕ್ಷಕ ಮತ್ತು ಶಿಕ್ಷಣ ದ್ರೋಹಿ ಸರ್ಕಾರ ಎಂದು ಲೇವಡಿ ಮಾಡಿದರು.

ಸರ್ಕಾರ ಜಾರಿಗೊಳಿಸಿರುವ ಶಾಲಾ ಅವಧಿಯಿಂದಾಗಿ ಶಿಕ್ಷಕರಿಗೆ, ಮಕ್ಕಳಿಗೆ ಮತ್ತು ಪೋಷಕರಿಗೂ ತೊಂದರೆಯಾಗುತ್ತಿದ್ದು, ಈ ಶೈಕ್ಷಣಿಕ ವರ್ಷದಿಂದ ಹಳೆಯ ಪದ್ಧತಿಯ ಶಾಲಾ ಅವಧಿ ಜಾರಿಯ ಬಗ್ಗೆ ಸರ್ಕಾರ ಇದರ ಕಡೆ ಗಮನ ಹರಿಸಬೇಕು ಎಂದರು.
ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ವೈ.ಎ.ನಾರಾಯಣ ಸ್ವಾಮಿ ಸ್ಪರ್ಧೆ ಮಾಡಿದ್ದು, ಅವರಿಗೆ ಯಾವುದೇ ವಿರೋಧಿ ಅಲೆ ಇಲ್ಲ, ಅವರು ಶಿಕ್ಷಕರ ಸಮಸ್ಯೆಗಳಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ, 32 ತಾಲೂಕಿನಲ್ಲೂ ಶಿಕ್ಷಕರು ಸಂಪೂರ್ಣವಾಗಿ ನಮಗೆ ಬೆಂಬಲ ನೀಡುತ್ತಿದ್ದಾರೆ, ನಾರಾಯಣ ಸ್ವಾಮಿ ಯವರು ಶಿಕ್ಷಕರ ಪರ ನಿರಂತರ ಹೋರಾಟ ಮಾಡಿದ್ದು, ಕೊರೊನಾ ಸಂದರ್ಭದಲ್ಲಿ ಅಂದಿನ ಸಿಎಂ ಯಡಿಯೂರಪ್ಪ ನವರ ಮನವೊಲಿಸಿ 500 ಕೋಟಿ ಹಣ ಬಿಡುಗಡೆಗೊಳಿಸಿ ಪ್ರತಿಯೊಬ್ಬ ಶಿಕ್ಷಕರ ಖಾತೆಗೆ ತಲಾ 5 ಸಾವಿರ ಜಮೆ ಮಾಡಿಸುವ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದ್ದರು, ಹಾಗಾಗಿ ಶೇ.100 ರಷ್ಟು ಅವರ ಗೆಲುವು ಖಚಿತ ಎಂದರು.

ಭಾಜಪ ಜಿಲ್ಲಾಧ್ಯಕ್ಷ ಭೀಮನಕುಂಟೆ ಹನುಮಂತೇಗೌಡ, ಪ್ರಧಾನ ಕಾರ್ಯದರ್ಶಿ ಲತಾ ಪ್ರದೀಪ್, ಮಂಡಲ ಅಧ್ಯಕ್ಷ ನಾಗೇಂದ್ರ, ಹಿರಿಯ ಶಿಕ್ಷಕರುಗಳಾದ ಧನಂಜಯ ಪಾಟೀಲ್, ಲೋಕೇಶ್ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!