ಸರ್ಕಾರಿ ಶಾಲೆಗಳ ಸ್ಥಿತಿ ಅಧೋಗತಿ..

ಸ್ಕೂಲ್ ಗಳ ಅಭಿವೃದ್ಧಿಗೆ ಸರ್ಕಾರ ಮೀನಾಮೇಷ

35

Get real time updates directly on you device, subscribe now.


-ಮೂರ್ತಿ ಸೋಂಪುರ

ಕೊರಟಗೆರೆ: ಸರಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರು ಇದ್ದಾರೆ, ಬಡ ಕುಟುಂಬದ ಮಕ್ಕಳು ಸರ್ಕಾರಿ ಶಾಲೆಗೆ ಬರ್ತಾರೇ, ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣವು ಮಕ್ಕಳಿಗೆ ಸಿಗ್ತಿದೆ, ಬಡಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಕೋಟ್ಯಾಂತರ ರೂ. ಖರ್ಚು ಮಾಡ್ತೀದೆ, ಆದರೆ ಸರಕಾರಿ ಶಾಲೆಗಳ ಕಟ್ಟಡಗಳ ಅಭಿವೃದ್ಧಿ ಮತ್ತು ಸೌಲಭ್ಯ ಕೊರತೆ ದಾಖಲಾತಿ ಮೇಲೆ ಪರಿಣಾಮ ಬೀರಿದೆ, ಶಿಕ್ಷಣ ಇಲಾಖೆ ಮಕ್ಕಳಿಗೆ ಆಶ್ವಾಸನೆ ಮತ್ತು ಸಮಾದಾನ ಮಾಡುವುದನ್ನು ಬಿಟ್ಟು ಅನುದಾನ ತರುವತ್ತಾ ಗಮನ ಹರಿಸಬೇಕಾಗಿದೆ.
ಕೊರಟಗೆರೆ ತಾಲೂಕಿನಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ- 260 ಮತ್ತು ಸರಕಾರಿ ಪ್ರೌಢಶಾಲೆ- 19, ಅನುದಾನಿತ ಪ್ರಾಥಮಿಕ ಶಾಲೆ- 03, ಅನುದಾನಿತ ಪ್ರೌಢಶಾಲೆ- 14 ಸೇರಿ ಒಟ್ಟು 296 ಶಾಲೆಗಳಲ್ಲಿ 2023- 24ನೇ ವರ್ಷದ ಅಂಕಿ ಅಂಶದ ಪ್ರಕಾರ 20,700 ವಿದ್ಯಾರ್ಥಿಗಳ ದಾಖಲಾತಿ ಇದೆ, ಸರಕಾರಿ ಶಾಲೆಗಳಿಗೆ ಮೂಲ ಸೌಲಭ್ಯ ಮತ್ತು ಅಭಿವೃದ್ಧಿ ಇಲ್ಲದೇ ಮಕ್ಕಳ ದಾಖಲಾತಿ ಶೂನ್ಯವಾಗಿ ಶಿಕ್ಷಣ ಇಲಾಖೆ 13 ಶಾಲೆಗಳಿಗೆ ತಾತ್ಕಾಲಿಕವಾಗಿ ಬೀಗ ಹಾಕಿದೆ.

284 ಕೊಠಡಿಗಳ ಅಭಿವೃದ್ಧಿ ಅಗತ್ಯ
ಶಿಕ್ಷಣ ಇಲಾಖೆಯ ಅಂಕಿ ಅಂಶದ ಪ್ರಕಾರ 279 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಒಟ್ಟು 858 ಕೊಠಡಿಗಳಿವೆ, ಅದರಲ್ಲಿ 564 ಕೊಠಡಿ ಉತ್ತಮ ಸ್ಥಿತಿಯಲ್ಲಿವೆ, ಇನ್ನುಳಿದ 143 ಕೊಠಡಿ ಅರ್ಧ ಶಿಥಿಲವಾದ್ರೆ 151 ಕೊಠಡಿಗಳ ಮೇಲ್ಛಾವಣಿ, ಕಿಟಕಿ, ಬಾಗಿಲು, ಕಿಟಕಿ, ನೆಲ ಮತ್ತು ಗೋಡೆ ಕುಸಿಯುವ ಹಂತದಲ್ಲಿದೆ, ಮುಂಗಾರು ಪ್ರಾರಂಭವಾದ್ರೆ ಸಾಕು ಶಾಲೆಯಲ್ಲಿ ಆಟದ ಜೊತೆ ಪಾಠವು ಮಕ್ಕಳ ಪಾಲಿಗೆ ಮರೀಚಿಕೆಯಾಗಿ ಶಾಲೆಗೆ ರಜೆ ನೀಡಬೇಕಾದ ದುಸ್ಥಿತಿಯಿದೆ.

ಮೈದಾನ ಇಲ್ಲದೆ ಆಟವು ಇಲ್ಲ
279 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 140 ಕ್ಕೂ ಅಧಿಕ ಶಾಲೆಗಳಿಗೆ ಆಟದ ಮೈದಾನದ ಜೊತೆ ದೈಹಿಕ ಶಿಕ್ಷಕರು ಇಲ್ಲದೆ ಕ್ರೀಡೆಗಳಿಗೆ ಉತ್ತೇಜನವೇ ಇಲ್ಲದಾಗಿದೆ, 85 ಶಾಲೆಯ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಮರೀಚಿಕೆ, ಸರಕಾರಿ ಶಾಲೆಯ 35 ಶೌಚಾಲಯ ಮತ್ತು 55 ಅಡುಗೆ ಕೋಣೆಗಳಿಗೆ ನೀರಿನ ಸಂಪರ್ಕವೇ ಇಲ್ಲದಿರುವ ದುಸ್ಥಿತಿ, 75 ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ಇಲ್ಲದೆ ಜಾನುವಾರು ಮತ್ತು ನಾಯಿಗಳ ಹಾವಳಿ ಹೆಚ್ಚಾಗಿದೆ.

ಶಾಲೆಗಳ ಅಭಿವೃದ್ಧಿಗೆ ನರೇಗಾ ಆಸರೆ
ಕೊರಟಗೆರೆಯ 206 ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕಾಂಪೌಂಡ್, ಶೌಚಾಲಯ, ಆಟದ ಮೈದಾನ, ಅಡುಗೆ ಕೊಣೆ ಮತ್ತು ಗಾರ್ಡನ್ ಅಭಿವೃದ್ಧಿಗೆ ತುಮಕೂರು ಜಿಪಂ ನಿಂದ 2024ರ ಜನವರಿಯಲ್ಲಿ ಸುಮಾರು 12 ಕೋಟಿ ವೆಚ್ಚದ ಅನುಮೋದನೆ ದೊರೆತ್ತಿದೆ, ಅದರಲ್ಲಿ ಈಗಾಗಲೇ 27 ಶಾಲೆಗಳಲ್ಲಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿವೆ, ಇನ್ನುಳಿದ 89 ಸರಕಾರಿ ಶಾಲೆಗಳ ಕಾಮಗಾರಿ ಪ್ರಗತಿಯಲ್ಲಿವೆ, ಒಟ್ಟಾರೆ 206 ಶಾಲೆಗಳ ಕಾಮಗಾರಿ 2024 ರ ಡಿಸೆಂಬರ್ ಮಾಹೆಯೊಳಗೆ ಪೂರ್ಣಗೊಳ್ಳಲಿದ್ದು ಶಾಲೆಗಳ ಅಭಿವೃದ್ಧಿಗೆ ನರೇಗಾ ಆಸರೆಯಾಗಿದೆ.


ಶೂನ್ಯ ದಾಖಲಾತಿ 13 ಶಾಲೆಗೆ ಬೀಗ
ತೋವಿನಕೆರೆ, ಮಣುವಿನಕುರಿಕೆ, ಅರಸಾಪುರ, ಸೋಂಪುರ, ಕೋಳಾಲ, ವೀರನಗರ, ಅಳಾಲಸಂದ್ರ, ವೆಂಕಟಾಪುರ, ಹಂಚಿಮಾರನಹಳ್ಳಿ, ಚಿಕ್ಕಾವಳ್ಳಿ, ಹನುಮಂತಪುರ, ಜಿ.ನಾಗೇನಹಳ್ಳಿ, ಸೋಂಪುರ, ಜನತಾ ಕಾಲೋನಿ ಸೇರಿ ಒಟ್ಟು 13 ಸರಕಾರಿ ಉರ್ದು ಮತ್ತು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಬೀಗ ಬಿದ್ದಿದೆ, 13 ಸರ್ಕಾರಿ ಶಾಲೆಗಳಿಗೆ 2021 ರಿಂದ 2023 ರ ವರೆಗೆ ಸತತ 3 ವರ್ಷವು ಶೂನ್ಯ ದಾಖಲಾತಿ ಆಗಿರುವ ಪರಿಣಾಮ ಶಿಕ್ಷಣ ಇಲಾಖೆಯಿಂದ ತಾತ್ಕಾಲಿಕಾಗಿ ಮುಚ್ಚಲಾಗಿದೆ.

100 ಶಿಕ್ಷಕರ ಹುದ್ದೆ ಖಾಲಿ
ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ 2024- 25ನೇ ಸಾಲಿನ ಅಂಕಿ ಅಂಶದ ಪ್ರಕಾರ ಒಟ್ಟು 266 ಸರಕಾರಿ ಶಾಲೆಗಳಲ್ಲಿ ಮುಖ್ಯ ಶಿಕ್ಷಕ ಸೇರಿ ಒಟ್ಟು 879 ಹುದ್ದೆಗಳಿವೆ, ಅದರಲ್ಲಿ ಬರೋಬ್ಬರಿ 100 ಹುದ್ದೆ ಖಾಲಿಯಿದೆ, ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳ ಪಾಠಗಳಿಗೆ ಸಮಸ್ಯೆಯಾಗಿ ಫಲಿತಾಂಶಕ್ಕೂ ಅಡಚಣೆ ಎದುರಾಗಿದೆ, 279 ಸರಕಾರಿ ಶಾಲೆಗಳಲ್ಲಿ 270 ಶಾಲೆಗಳ ಜಮೀನಿನ ಆಸ್ತಿ ನೋಂದಣಿ ಆಗಿದೆ, ಇನ್ನುಳಿದ 9 ಶಾಲೆಗಳ ಜಮೀನಿನ ಖಾತೆಯಿದ್ದು ಇ-ಖಾತೆ ಇನ್ನೂ ಬಾಕಿಯಿದೆ.

ಸರಕಾರಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದೇನೆ, ಅಪಾಯದ ಹಂತದಲ್ಲಿರುವ ಹಳೆಯ ಕೊಠಡಿಗಳ ದುರಸ್ಥಿಗೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ, ಶೂನ್ಯ ದಾಖಲಾತಿ ಇರುವ ಶಾಲೆಗಳ ಮುಚ್ಚಿಸಲಾಗಿದೆ, ಶಾಲೆಗಳ ನೂತನ ಕೊಠಡಿ ಮತ್ತು ಕಾಂಪೌಂಡ್ಗಳ ಅಭಿವೃದ್ಧಿಗೆ ಅನುದಾನಕ್ಕೆ ಜಿಪಂಗೆ ಪತ್ರ ಬರೆಯಲಾಗಿದೆ.
-ಮಂಜುನಾಥ, ಡಿಡಿಪಿಐ, ಮಧುಗಿರಿ.

Get real time updates directly on you device, subscribe now.

Comments are closed.

error: Content is protected !!