ತುಮಕೂರು ಜಿಲ್ಲೆ ಪಾಲಿನ ನೀರು ಕೊಡಲ್ಲ

ಲಿಂಕ್ ಕೆನಾಲ್ ಬಗ್ಗೆ ಜನಪ್ರತಿನಿಧಿಗಳ ಮೌನ- ಸಂಘಟನೆಗಳ ಆಕ್ರೋಶ

30

Get real time updates directly on you device, subscribe now.


ತುಮಕೂರು: ಹೇಮಾವತಿ ಲಿಂಕ್ ಕೆನಾಲ್ ಮೂಲಕ ತುಮಕೂರು ಜಿಲ್ಲೆಯ ಪಾಲಿನ ನೀರನ್ನು ಬೇರೊಂದು ಜಿಲ್ಲೆಗೆ ತೆಗದುಕೊಂಡು ಹೋಗುತ್ತಿದ್ದರೂ ಜಿಲ್ಲೆಯ ಜನ ಪ್ರತಿನಿಧಿಗಳು ಮೌನಕ್ಕೆ ಶರಣಾಗಿರುವುದು ದುರಂತವೇ ಸರಿ, ನಿಮ್ಮನ್ನು ಈ ಜಿಲ್ಲೆಯ ಜನ ಎಂದಿಗೂ ಕ್ಷಮಿಸುವುದಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಯುಕ್ತ ಹೋರಾಟ- ಕರ್ನಾಟಕದ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ, ಎಐಕೆಕೆಎಂಎಸ್, ಅಖಿಲ ಭಾರತ ಕಿಸಾನ್ ಸಭಾ, ಮಾಜಿಸೈನಿಕರ ಸಂಘ ಹಾಗೂ ಇನ್ನಿತರ ಸಂಘಟನೆಗಳು ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಕರೆ ನೀಡಿದ್ದ ಹೇಮಾವತಿ ಚೀಪ್ ಇಂಜಿನಿಯರ್ ಕಚೇರಿ ಮುತ್ತಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಕಳೆದ ಒಂದು ತಿಂಗಳಿನಿಂದ ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದರೂ ಆಡಳಿತ ಪಕ್ಷದ ಮಂತ್ರಿಗಳಾದ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಗುಬ್ಬಿ ಶಾಸಕ ಶ್ರೀನಿವಾಸ್, ಶಿರಾದ ಟಿ.ಬಿ. ಜಯಚಂದ್ರ ಸೇರಿದಂತೆ ಆಡಳಿತ ಪಕ್ಷದವರು ಸರಕಾರದೊಂದಿಗೆ ಮಾತನಾಡಿ ಲಿಂಕ್ ಕೆನಾಲ್ ರದ್ದು ಪಡಿಸಲು ಕ್ರಮ ಕೈಗೊಳ್ಳದೆ ಜಾಣ ಕಿವುಡು, ಕುರುಡುತನ ಪ್ರದರ್ಶಸಿರುತ್ತಿರುವುದು ತರವಲ್ಲ, ಈ ಕೂಡಲೇ ಸರಕಾರ ಮಧ್ಯ ಪ್ರವೇಶಿಸುವಂತೆ ಒತ್ತಡ ತರಬೇಕೆಂದು ಒತ್ತಾಯಿಸಿದರು.

ಹೇಮಾವತಿಯಿಂದ ಮೂಲದಲ್ಲಿ ತುಮಕೂರು ಜಿಲ್ಲೆಗೆ 24.05 ಟಿಎಂಸಿ ನೀರು ಹಂಚಿಕೆಯಾಗಿದ್ದು, ಇದರ ಜೊತೆಗೆ 11-07- 2019ರಲ್ಲಿ ಅಂದಿನ ಸರಕಾರ ನೀರಿನ ಹಂಚಿಕೆಯನ್ನು 25.03 ಟಿಎಂಸಿಗೆ ಹೆಚ್ಚಿಗೆ ಮಾಡಿ, ಶ್ರೀರಂಗ ಏತ ನೀರಾವರಿಯ ಮೂಲಕ ಮಾಗಡಿ ತಾಲೂಕಿನ 66 ಕೆರೆಗಳಿಗೆ ಹೇಮಾವತಿ ನೀರು ಹರಿಸಲು ಯೋಜನೆ ರೂಪಿಸಿದೆ, ಹೇಮಾವತಿ ಯೋಜನೆ ಆರಂಭವಾದ ಇಲ್ಲಿಯವರೆಗೆ ಹಂಚಿಕೆಯಾಗಿರುವ ಅಷ್ಟು ಪ್ರಮಾಣದ ನೀರು ಜಿಲ್ಲೆಗೆ ಹರಿದಿಲ್ಲ, ಈಗಿರುವಾಗ ಹೆಸರಿಗೆ ಮಾತ್ರ ಹೆಚ್ಚುವರಿ ಅಲೋಕೇಷನ್ ಮಾಡಿ ತುಮಕೂರು ನಾಲೆಗಿಂತ 35 ಮೀಟರ್ ಕೆಳಹಂತದಲ್ಲಿರುವ 169ನೇ ಕಿ.ಮೀ. ಗೆ ಪೈಫ್ ಲೈನ್ ಮೂಲಕ ತೆಗೆದುಕೊಂಡು ಹೋಗಲು ಹೊರಟಿರುವುದು ಅವೈಜ್ಞಾನಿಕ, ಮಾಗಡಿಗೆ ನೀರು ತೆಗೆದುಕೊಂಡು ಹೋಗಲು ನಮ್ಮ ಅಭ್ಯಂತರವಿಲ್ಲ, ಆದರೆ ಹಾಲಿ ಇರುವ ನಾಲೆಯ ಮೂಲಕವೇ ನೀರು ತೆಗೆದುಕೊಂಡು ಹೋಗಲಿ, ಯಾವುದೇ ಕಾರಣಕ್ಕೆ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಗೆ ಅವಕಾಶ ನೀಡುವು ದಿಲ್ಲ ಎಂದರು.

ಎಐಕೆಕೆಎಂಎಸ್ ನ ಎಸ್.ಎನ್.ಸ್ವಾಮಿ ಮಾತನಾಡಿ, ನೀರು ರಾಷ್ಟ್ರೀಯ ಸಂಪತ್ತು, ಅದನ್ನು ಎಲ್ಲರಿಗೂ ಸಮನಾಗಿ ಹಂಚಬೇಕಾಗಿರುವುದು ಸರಕಾರದ ಕರ್ತವ್ಯ, ಆದರೆ ಪ್ರಭಾವಿಗಳು ಎಂಬ ಕಾರಣಕ್ಕೆ, ಒಂದು ಜಿಲ್ಲೆಗೆ ಹಂಚಿಕೆಯಾದ ನೀರನ್ನು ಅವೈಜ್ಞಾನಿಕವಾಗಿ ಪೈಪ್ ಲೈನ್ ಮೂಲಕ ತೆಗೆದುಕೊಂಡು ಹೋಗುವುದು ತರವಲ್ಲ, ರಾಮನಗರ ಜಿಲ್ಲೆಯಲ್ಲಿರುವ ರೈತರು ನಮ್ಮವರೇ ಆಗಿದ್ದಾರೆ, ಹಾಗಾಗಿ ಹಾಲಿ ಇರುವ ನಾಲೆಯ ಮೂಲಕ ರಾಮನಗರ ಜಿಲ್ಲೆಗೆ ನೀರು ತೆಗೆದುಕೊಂಡು ಹೋಗಲಿ, ಇಷ್ಟೊಂದು ತರಾತುರಿಯಲ್ಲಿ ನೀರು ತೆಗೆದುಕೊಂಡು ಹೋಗುತ್ತಿರುವುದರ ಹಿಂದೆ ರೈತರ ಹಿತಕ್ಕಿಂತ ಗುತ್ತಿಗೆದಾರರು ಮತ್ತು ನೀರು ಮಾರಾಟಗಾರರ ಲಾಬಿ ಇರುವ ಸಾಧ್ಯತೆ ಇದೆ ಎಂದರು.

ಮಾಜಿ ಸೈನಿಕ ನಂಜುಂಡಯ್ಯ ಮಾತನಾಡಿ, ಹೇಮಾವತಿ ನೀರನ್ನು ಅತಿ ಹೆಚ್ಚು ಬಳಕೆ ಮಾಡುತ್ತಿರುವ ಪ್ರದೇಶಗಳಲ್ಲಿ ತುಮಕೂರು ನಗರ ಸೇರಿದೆ, ಆದರೆ ಹೋರಾಟಕ್ಕೆ ನಗರದ ಜನರು ಬೆಂಬಲ ನೀಡಿಲ್ಲ ಎಂದರೆ ಕುಡಿಯಲು ನೀರನ್ನು ಎಲ್ಲಿಂದ ತರುತ್ತಾರೆ ಎಂಬ ಪ್ರಜ್ಞೆ ಜನರಿಗೆ ಬೇಡವೇ, ಈಗ ಮೈಮರೆತರೆ ಮುಂದೊಂದು ದಿನ ನೀರಿಗಾಗಿ ಹೊಡೆದಾಡಬೇಕಾದಿತ್ತು, ಎಲ್ಲರೂ ಹೋರಾಟದಲ್ಲಿ ಪಾಲ್ಗೊಂಡು ನಮ್ಮ ನೀರನ್ನು ನಮ್ಮಲ್ಲಿಯೇ ಉಳಿಸಿಕೊಳ್ಳೊಣ ಎಂದು ಕರೆ ನೀಡಿದರು.

ಈ ಸಂಬಂಧ ಹೇಮಾವತಿ ನಾಲಾ ವಲಯದ ಮುಖ್ಯ ಇಂಜಿನಿಯರ್ ಫಣಿರಾಜು ಅವರಿಗೆ ಮನವಿ ಸಲ್ಲಿಸಲಾಯಿತು, ಪ್ರಾಂತ ರೈತ ಸಂಘದ ಅಜ್ಜಪ್ಪ, ಬಿ.ಉಮೇಶ್, ಸಿಐಟಿಯುನ ಸೈಯದ್ ಮುಜೀಬ್, ರೈತ ಸಂಘದ ಹನುಮಂತೇಗೌಡ, ಎಐಕೆಎಸ್ ನ ಕಂಬೇಗೌಡ, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಿ.ಶಂಕರಪ್ಪ, ವೆಂಕಟೇಗೌಡ, ಚಿಕ್ಕಬೋರೆಗೌಡ, ಕೆಂಪಣ್ಣ, ಸಿಪಿಐಎಂನ ಎನ್.ಕೆ.ಸುಬ್ರಮಣ್ಯ, ರೈತ ಸಂಘದ ಶಬ್ಬೀರ್, ಸಿ.ಜಿ.ಲೋಕೇಶ್, ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಬಿ.ಲಿಂಗಣ್ಣ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!