ಕುಣಿಗಲ್: 2019- 20ನೇ ಸಾಲಿನಲ್ಲಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಯಲ್ಲಿ ಗುತ್ತಿಗೆ ಕಾಮಗಾರಿ ನಡೆಸಿದ್ದ ಗುತ್ತಿಗೆದಾರರಿಗೆ ಜಿ ಎಸ್ ಟಿ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ನೋಟೀಸ್ ಜಾರಿಯಾಗುತ್ತಿದ್ದು ಗುತ್ತಿಗೆದಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದ್ದರೆ, ತೆರಿಗೆ ವಂಚನೆ ಬಗ್ಗೆ ಇಲಾಖಾಧಿಕಾರಿಗಳು ಕಟ್ಟುನಿಟ್ಟಿನ ವಸೂಲಿಗೆ ಮುಂದಾಗಿದ್ದು ಸದ್ದುಗದ್ದಲವಿಲ್ಲದೆ ನಡೆಯುತ್ತಿರುವ ವಸೂಲಾತಿ ತಾಲೂಕಿನಾದ್ಯಂತ ಗುತ್ತುಗೆದಾರರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಮಗಾರಿ ನಿರ್ವಹಣೆಗೆ ಸಂಬಂಧಿಸಿದಂತೆ ಆಯಾ ಗ್ರಾಪಂ ಮುಖಂಡರೇ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸಿದ್ದು ನಿಯಮಾನುಸಾರ ಟಿನ್ ನಂಬರ್ ಹೊಂದಿದ್ದರು ಮೊದಲೆ ಆಯಾ ಗ್ರಾಪಂ ಪ್ರಭಾವಿ ಮುಖಂಡರಾಗಿದ್ದ ಗುತ್ತಿಗೆದಾರ ಮುಖಂಡರು ಕೆಲ ಪಿಡಿಒಗಳೊಂದಿಗೆ ಶಾಮೀಲಾಗಿ ಜಿ ಎಸ್ ಟಿ ಕಟಾವು ಮಾಡಿಕೊಂಡು, ಬಿಲ್ ನಲ್ಲಿ ಪಾವತಿ ಮಾಡಿಲ್ಲ ಎಂದು ಹೇಳಲಾಗುತ್ತಿದ್ದರೆ, ಕೆಲ ಪ್ರಕರಣಗಳಲ್ಲಿ ಶೇಕಡವಾರು ಕಡಿಮೆ ತೆರಿಗೆ ಪಾವತಿ ಮಾಡಿದ್ದಾರೆ ಎನ್ನಲಾಗಿದೆ, ಬಹುತೇಕ ಗುತ್ತಿಗೆದಾರರು ಮೂವತ್ತರಿಂದ ಅರವತ್ತು, ಎಪ್ಪತ್ತು ಲಕ್ಷ ರೂ. ವರೆಗೂ ಕಾಮಗಾರಿ ನಿರ್ವಹಣೆ ಮಾಡಿದ್ದಾರೆ ಎನ್ನಲಾಗಿದೆ, ಈ ಮಧ್ಯೆ ಗುತ್ತಿಗೆದಾರರು ಔಟ್ ಪುಟ್ ಬಿಲ್ ನೀಡಿದ್ದು ಬಹುತೇಕರು ಜಿ ಎಸ್ ಟಿ ದಾಖಲಾತಿ ಸಲ್ಲಿಸದೆ ಅಕೌಂಟ್ ಮುಕ್ತಾಯ ಪ್ರಕ್ರಿಯೆ ನಡೆಸಿದ್ದಾರೆ ಎಂಬ ದೂರು ಕೇಳಿ ಬರುತ್ತಿವೆ, ತೆರಿಗೆ ಇಲಾಖೆಯವರು ಕಳೆದ ಆರು ತಿಂಗಳ ಹಿಂದೆ ಗ್ರಾಮ ಪಂಚಾಯಿತಿ ಗಳಿಗೆ ಪತ್ರ ಬರೆದು ಕಳೆದ ವರ್ಷಗಳಲ್ಲಿ ಕಾಮಗಾರಿ ನಿರ್ವಹಣೆ ಮಾಡಿದ ಗುತ್ತಿಗೆದಾರರ ದಾಖಲೆ ಗಳನ್ನು ಸಂಗ್ರಹಿಸಿದ್ದು ಈ ಪೈಕಿ 2019- 20ನೇ ಸಾಲಿನಲ್ಲಿ ಕಾಮಗಾರಿ ನಿರ್ವಹಣೆ ಮಾಡಿದ ಗುತ್ತಿಗೆದಾರರಿಗೆ ಇನ್ ಪುಟ್ ಬಿಲ್ ನ ದಾಖಲೆ ಕೊಡುವಂತೆ, ಲೆಕ್ಕಪತ್ರ ಸಮರ್ಪಕವಾಗಿ ಸಲ್ಲಿಸುವಂತೆ ತೆರಿಗೆ ಇಲಾಖಾಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದು, ಸುಮಾರು ಐದು ವರ್ಷಗಳ ಹಿಂದೆ ಮಾಡಿದ ತೆರಿಗೆ ವಿವರಗಳು ಇಲ್ಲದೆ ಕೆಲವರು ಸಲ್ಲಿಸಲು ಪರದಾಡುತ್ತಿದ್ದರೆ ಮತ್ತೆ ಕೆಲವರು ಸಮಸ್ಯೆಯಿಂದ ಪಾರಾಗಲು ಆಡಿಟರ್ ಗಳ ಮೊರೆ ಹೋಗುತ್ತಿದ್ದಾರೆ, ಸಮರ್ಪಕ ದಾಖಲೆ ಸಲ್ಲಿಸಿ ಬಾಕಿ ಉಳಿಸಿಕೊಂಡಿರುವ ತೆರಿಗೆ ಪಾವತಿ ಮಾಡದೆ ಇದ್ದಲ್ಲಿ ಮೊದಲ ಹಂತದಲ್ಲಿ ಇಲಾಖೆ ಬ್ಯಾಂಕ್ ಖಾತೆ ಜಪ್ತಿ ಮಾಡಿ ಮುಂದಿನ ಹಂತದಲ್ಲಿ ತೆರಿಗೆ ವಸೂಲಿಗೆ ಎಲ್ಲಾ ರೀತಿಯ ಕಠಿಣ ಕ್ರಮ ಜರುಗಿಸುತ್ತದೆ ಎಂದು ತೆರಿಗೆ ತಜ್ಞರು ಹೇಳುತ್ತಿದ್ದಾರೆ, 2019- 20ರ ತೆರಿಗೆ ವಸೂಲಾತಿ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ನಡೆಮಾವಿನಪುರ ಹಾಗೂ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರೆ ವಸೂಲಾತಿ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸಲಾಗಿದೆ ಎನ್ನಲಾಗಿದ್ದು ಎರಡೂ ಪಂಚಾಯಿತಿಯಿಂದ ಸುಮಾರು ಎರಡುವರೆ ಕೋಟಿ ಮೊತ್ತದ ಕಾಮಗಾರಿಗೆ ತೆರಿಗೆ ಪಾವತಿ ಪರಿಶೀಲಿಸಲಾಗುತ್ತಿದೆ ಎನ್ನಲಾಗಿದೆ.
ಇದು ಒಂದು ರೀತಿಯ ಸಮಸ್ಯೆ ಗುತ್ತಿಗೆದಾರರಿಗೆ ಕಾಡುತ್ತಿದ್ದರೆ ಮತ್ತೊಂದು ರೀತಿಯ ಸಮಸ್ಯೆ ಗುತ್ತಿಗೆದಾರರ ಜೀವ ಹಿಂಡುವಂತೆ ಮಾಡಿದೆ, ತಾಲೂಕಿನ ವಿವಿಧ ಆಡಿಟರ್ ಕಚೇರಿಯಲ್ಲಿ ಕೆಲಸ ಮಾಡಿದ್ದ ವ್ಯಕ್ತಿಯೊಬ್ಬ ತಾನೇ ಬಹುತೇಕ ಗುತ್ತಿಗೆದಾರರಿಗೆ ಜಿ ಎಸ್ ಟಿ ಮಾಡಿ ಕೊಡುವುದಾಗಿ ಜಿ ಎಸ್ ಟಿ ನಂಬರ್ ಮಾಡಿಸಿ ಕೊಟ್ಟು, ಕುಣಿಗಲ್ ತಾಲೂಕಿನ ವಿವಿಧೆಡೆ ಕಚೇರಿ ಆರಂಭಿಸಿ ಕುಣಿಗಲ್, ಮಾಗಡಿ ತಾಲೂಕಿನ ವಿವಿಧ ಗ್ರಾಪಂಗಳಿಗೆ ಬಿಲ್ ನೀಡಿದ್ದು, ಲೆಕ್ಕಪತ್ರ ಸಮರ್ಪಕವಾಗಿ ಸಲ್ಲಿಸದ ಕಾರಣ ಇದೀಗ ಇದರ ಮೊತ್ತ ನೂರಾರು ಕೋಟಿ ರೂ.ಗೂ ಮೀರಿದ್ದು ಅಧಿಕಾರಿಗಳು ಕಚೇರಿ ಪತ್ತೆಗೆ ಹುಡುಕಾಡಿ ಕಚೇರಿ ವಿವರ ಸಿಗದೆ ಈತ ಸಲ್ಲಿಸಿರುವ ಬಿಲ್ ಗಳ ಆಧಾರದ ಮೇಲೆ ಬಹುತೇಕ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಿ ತೆರಿಗೆ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಕೆಲ ಸ್ಟೇಷನರಿ, ಜೆರಾಕ್ಸ್ ಅಂಗಡಿ ಮಾಲೀಕರು ಸಹ ತಮ್ಮ ಜಿ ಎಸ್ ಟಿ ನಂಬರ್ ನಲ್ಲಿ ಗ್ರಾಪಂಗಳಿಗೆ ಮೆಟಿರಿಯಲ್ ಸಪ್ಲೈ ಬಿಲ್ ನೀಡಿ ಇನ್ ಪುಟ್ ಬಿಲ್ ಸಲ್ಲಿಸದ ಕಾರಣ ಅಂತಹ ಅಂಗಡಿಯವರು ಸಹ ತೆರಿಗೆ ಅಧಿಕಾರಿಗಳಿಗೆ ಸಬೂಬು ಹೇಳುತ್ತಾ ಕಾಲಹರಣ ಮಾಡುತ್ತಿದ್ದು, ಇಲಾಖಾಧಿಕಾರಿಗಳು ಇವರ ಮೇಲೂ ಕುಣಿಕೆ ಬಿಗಿಗೊಳಿಸಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ತೆರಿಗೆ ಇಲಾಖೆ ಕ್ರಮದಿಂದಾಗಿ ಬಹುತೇಕ ಗುತ್ತಿಗೆದಾರರು ಬಾಕಿ ತೆರಿಗೆ ಪಾವತಿ ಮಾಡುವ ಅನಿವಾರ್ಯತೆ ಆಗಿದ್ದು ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾದ ತೆರಿಗೆ ಹಣ ಜಮಾವಣೆ ಮಾಡಲು ಇಲಾಖಾಧಿಕಾರಿಗಳು ಯಾವ ಕ್ರಮಕ್ಕೆ ಮುಂದಾಗುತ್ತಾರೋ ಎಂದು ಕಾದು ನೋಡಬೇಕಿದೆ, ಇತ್ತೀಚಿನ ವರ್ಷಗಳಲ್ಲಿ ಗ್ರಾಮ ಪಂಚಾಯಿತಿಗೆ ಜಿ ಎಸ್ ಟಿ ನಂಬರ್ ಸೃಜನೆಯಾಗಿರುವುದರಿಂದ ಸರ್ಕಾರಕ್ಕೆ ಪಾವತಿ ಆಗಬೇಕಿರುವ ತೆರಿಗೆ ವಂಚನೆ ಆಗುತ್ತಿಲ್ಲ, ಆದರೆ ಹಿಂದೆ ಕೆಲ ಪಿಡಿಒಗಳ ಕುಕೃತ್ಯಕ್ಕೆ ಸಾಕಷ್ಟು ಮಂದಿ ಗುತ್ತಿಗೆದಾರರು ಪರದಾಡುವಂತಾಗಿದೆ ಎಂದು ನೊಂದ ಗುತ್ತಿಗೆದಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.
Comments are closed.