ಡಿ.ಟಿ.ಶ್ರೀನಿವಾಸ್ ಗೆ ಶೋಷಿತ ಸಮುದಾಯಗಳ ಬೆಂಬಲ

22

Get real time updates directly on you device, subscribe now.


ತುಮಕೂರು: ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರನ್ನು ಶೋಷಿತ, ಹಿಂದುಳಿದ, ದಲಿತ ಹಾಗೂ ಸಾಮಾಜಿಕ ನ್ಯಾಯದ ಪರವಾಗಿರುವ ಎಲ್ಲಾ ಶಿಕ್ಷಕರು ಬೆಂಬಲಿಸುವಂತೆ ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅನಂತನಾಯ್ಕ್ ಮನವಿ ಮಾಡಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಹಾಗೂ ತುಮಕೂರು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ದವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿಕ್ಷಕರಾಗಿ, ಅಧಿಕಾರಿಯಾಗಿ, ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸದಸ್ಯರಾಗಿ ಡಿ.ಟಿ.ಶ್ರೀನಿವಾಸ್ ಅಪಾರ ಅನುಭವ ಗಳಿಸಿದ್ದು, ಅವರನ್ನು ಗೆಲ್ಲಿಸುವ ಮೂಲಕ ವಿಧಾನ ಪರಿಷತ್ತಿನಲ್ಲಿ ಶಿಕ್ಷಕರ ಪರವಾಗಿ ಧ್ವನಿ ಎತ್ತಲು ಅವಕಾಶ ಕಲ್ಪಿಸಬೇಕೆಂದರು.

ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ದಲಿತರು, ಶೋಷಿತರು, ಹಿಂದುಳಿದ ವರ್ಗಗಳ ಉನ್ನತ ಶಿಕ್ಷಣಕ್ಕೆ ಸಂಚಕಾರ ಉಂಟು ಮಾಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ- 2020ನ್ನು ಒಪ್ಪಿಕೊಳ್ಳದೆ, ಎಲ್ಲಾ ವರ್ಗದ ಮಕ್ಕಳ ಸಮಗ್ರ ಶೈಕ್ಷಣಿಕ ಬೆಳವಣಿಗಾಗಿ ರಾಜ್ಯ ಶಿಕ್ಷಣ ನೀತಿ ಜಾರಿಗೆ ತಂದಿದೆ, ಇದರ ಭಾಗವಾಗಿಯೇ ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ, ಅಲ್ಲದೆ ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳದ ಜೊತೆಗೆ, ಮಹಿಳೆಯರಿಗೆ ಹೆರಿಗೆ ರಜೆ, ಎಲ್ಲರಿಗೂ ವಾರದ ರಜೆಗಳನ್ನು ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ, ಅಲ್ಲದೆ ಹಳೆಯ ಪಿಂಚಿಣಿ ವ್ಯವಸ್ಥೆ ಜಾರಿಗೆ ತರಲು ಎಲ್ಲಾ ರೀತಿಯ ಕ್ರಮ ಸರಕಾರ ಕೈಗೊಂಡಿದೆ, ಈ ಕಾರ್ಯಗಳು ಮತ್ತಷ್ಟು ವೇಗ ಪಡೆದುಕೊಳ್ಳಬೇಕೆಂದರೆ ಡಿ.ಟಿ.ಶ್ರೀನಿವಾಸರಂತಹ ಅನುಭವಿ ರಾಜಕಾರಣಿಗಳು ವಿಧಾನಪರಿಷತ್ ಪ್ರವೇಶಿಸಬೇಕು, ಹಾಗಾಗಿ ಶಿಕ್ಷಕರು ಈ ಬಾರಿ ಡಿ.ಟಿ.ಶ್ರೀನಿವಾಸ್ ಅವರನ್ನು ಬೆಂಬಲಿಸಬೇಕೆಂಬುದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಮನವಿಯಾಗಿದೆ ಎಂದು ಆನಂತನಾಯ್ಕ್ ತಿಳಿಸಿದರು.

ದಲಿತ ಮುಖಂಡ ಕೊಟ್ಟ ಶಂಕರ್ ಮಾತನಾಡಿ, ಸರಕಾರ ಅತಿಥಿ ಉಪನ್ಯಾಸಕರಿಗೆ ಇದ್ದ ಕೆಲ ಸಮಸ್ಯೆಗಳನ್ನು ಪರಿಹರಿಸಿದೆ.ಆದರೆ ಸೇವಾ ಭದ್ರತೆಯಂತಹ ಪ್ರಮುಖ ಸಮಸ್ಯೆ ಹಾಗೆಯೇ ಇದೆ.ಹಂತಹಂತವಾಗಿ ಬಗೆಹರಿಸುವ ಪ್ರಯತ್ನ ಸರಕಾರದಿಂದ ನಡೆದಿದೆ, ಪ್ರಸ್ತುತ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಡಿ.ಟಿ.ಶ್ರೀನಿವಾಸ್ ಮತ್ತು ವೈ.ಎ.ನಾರಾಯಣ ಸ್ವಾಮಿ ನಡುವೆ ಎಂಬಂತಾಗಿದೆ, ಕಳೆದ ಮೂರು ಚುನಾವಣೆಗಳಿಂದ ಈ ಕ್ಷೇತ್ರ ಪ್ರತಿನಿಧಿಸಿರುವ ವೈ.ಎ.ನಾರಾಯಣ ಸ್ವಾಮಿ ಅವರು, ತಮ್ಮ ಅವಧಿಯ ಆರು ವರ್ಷಗಳಲ್ಲಿ ಐದುವರೆ ವರ್ಷ ಇತ್ತ ತಿರುಗಿಯೂ ನೋಡುವುದಿಲ್ಲ, ಇನ್ನಾರು ತಿಂಗಳು ಇದೆ ಎನ್ನುವಾಗ ಬಂದು ವಿವಿಧ ಆಮಿಷಗಳ ಮೂಲಕ ಮತದಾರರನ್ನು ಓಲೈಸುತ್ತಾರೆ, ಆದರೆ ಡಿ.ಟಿ.ಶ್ರೀನಿವಾಸ್ ಎಲ್ಲಾ ವಿಷಯಗಳಲ್ಲಿಯೂ ಅನುಭವಿಗಳಿದ್ದು, ಅವರನ್ನು ಮೇಲ್ಮೆನೆಗೆ ಕಳುಹಿಸಬೇಕೆಂಬುದು ನಮ್ಮೆಲ್ಲರ ಬಯಕೆಯಾಗಿದೆ ಎಂದರು.

ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ.ರಾಮಚಂದ್ರಪ್ಪ ಮಾತನಾಡಿ, ವಿಧಾನ ಪರಿಷತ್ತಿಗೆ ಆಡಳಿತ ಪಕ್ಷದ ಅಭ್ಯರ್ಥಿಗಳು ಹೋದಾಗ ಸರಕಾರದ ಮೇಲೆ ಹೆಚ್ಚು ಒತ್ತಡ ಹಾಕಲು ಅನುಕೂಲವಾಗುತ್ತದೆ, ಹಾಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಡಿ.ಟಿ.ಶ್ರೀನಿವಾಸ್ ಅವರನ್ನು ಗೆಲ್ಲಿಸುವುದರಿಂದ ಶಿಕ್ಷಕರು ತಾವು ಅನುಭವಿಸುತ್ತಿರುವ ಸಮಸ್ಯೆಗಳಿಂದ ಹೊರಬರಲು ಸಹಾಯವಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಾಣಗೆರೆ ವೆಂಕಟರಾಮು, ರಾಮೃಕೃಷ್ಣ, ಯಲ್ಲಪ್ಪ, ಆದರ್ಶ, ಕೆಂಪರಾಜು ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!