ಗುಬ್ಬಿ: ತಾಲ್ಲೂಕಿನಲ್ಲಿ ಮುಂಗಾರು ಕೃಷಿ ಪ್ರಾರಂಭವಾಗುತ್ತಿರುವುದರಿಂದ ರೈತರಿಗೆ ಯಾವುದೇ ತೊಂದರೆಯಾಗದಂತೆ ರಸಗೊಬ್ಬರ, ಬೀಜ ಒದಗಿಸಲು ಕ್ರಮ ಕೈಗೊಳ್ಳಲು ಹಾಗೂ ನರೇಗಾ ಕಾಮಗಾರಿ ವ್ಯವಸ್ಥಿತ ಅನುಷ್ಠಾನಕ್ಕಾಗಿ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ತಿಳಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಜಿ.ಪ್ರಭು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಸಬಾ ಹೋಬಳಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದ ಸಿಇಓ ಜಿ.ಪ್ರಭು ಅವರು ದಾಸ್ತಾನಿನ ವಿವರಣೆ ಪಡೆದುಕೊಂಡು ರೈತರಿಗೆ ಯಾವುದೇ ತೊಂದರೆ ಆಗದಂತೆ ಬೀಜ ಹಾಗೂ ರಸಗೊಬ್ಬರ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಖಾಸಗಿಯವರು ಹೆಚ್ಚಿನ ದರಕ್ಕೆ ಬೀಜ ಹಾಗೂ ರಸಗೊಬ್ಬರ ಮಾರಾಟ ಮಾಡುತ್ತಿದ್ದರೆ ಅವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ತಾಲ್ಲೂಕು ಮಟ್ಟದ ಅಧಿಕಾರಿಗಳು ನಿರಂತರ ರೈತರ ಸಂಪರ್ಕದಲ್ಲಿದ್ದು ಅಗತ್ಯವಿರುವ ಬೀಜ, ರಸಗೊಬ್ಬರ ಹಾಗೂ ಬರ ಪರಿಹಾರ ಅನುದಾನ ಒದಗಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.
ರೈತರು ರೈತ ಸಂಪರ್ಕ ಕೇಂದ್ರ ಹಾಗೂ ಪ್ರಾಥಮಿಕ ಕೃಷಿ ಸಹಕಾರ ಕೇಂದ್ರಗಳಲ್ಲಿಯೇ ರಸಗೊಬ್ಬರ ಹಾಗೂ ಬೀಜ ಖರೀದಿಸಬೇಕು, ರೈತರಿಗೆ ಯಾವುದೇ ಸಮಸ್ಯೆಯಾದಲ್ಲಿ ಅಧಿಕಾರಿಗಳ ಗಮನಕ್ಕೆ ತಂದಲ್ಲಿ ಸೂಕ್ತಕ್ರಮ ಕೈಗೊಳ್ಳಲಾಗುವುದು,
ಅಧಿಕಾರಿಗಳು ರೈತರಿಗೆ ಉತ್ತೇಜನ ನೀಡುತ್ತಾ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳಬೇಕಿದೆ ಎಂದು ತಿಳಿಸಿದ ಅವರು ನರೇಗಾ ಕಾಮಗಾರಿ ನಡೆಯುತ್ತಿರುವಂತಹ ಸ್ಥಳಕ್ಕೂ ಭೇಟಿ ನೀಡಿದ ಅವರು ಗುಬ್ಬಿ ತಾಲೂಕಿನ ಕೊಂಡ್ಲಿ ಅಮ್ಮನಘಟ್ಟ ಸೇರಿದಂತೆ ಹಲವು ಭಾಗದ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತಾಲೂಕು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜಗನ್ನಾಥ ಗೌಡ, ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ಇಂದ್ರೇಶ್, ಕೃಷಿ ಅಧಿಕಾರಿಗಳಾದ ಕಲ್ಲೇಶ್, ಪ್ರಕಾಶ್ ಹಾಗೂ ಕೃಷಿ ಇಲಾಖೆ ಸಿಬ್ಬಂದಿ ಹಾಜರಿದ್ದರು.
Comments are closed.