ವಿವಿಧ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ

35

Get real time updates directly on you device, subscribe now.


ತುಮಕೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಇಲಾಖೆಗಳ ಕಾರ್ಯವೈಖರಿಯನ್ನು ಪರಿಶೀಲನೆ ಮಾಡಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ತುಮಕೂರು ತಾಲ್ಲೂಕಿನ ವಿವಿಧ ಭಾಗಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.
ಮರುಳೂರು ಕೆರೆ ವೀಕ್ಷಣೆ ಮಾಡಿದ ಅವರು ಕೆರೆಯಲ್ಲಿ ಹೂಳು ತುಂಬಿಕೊಂಡಿರುವುದರಿಂದ ಮಳೆ ನೀರು ಸಂಗ್ರಹಣೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿಲ್ಲ, ಹೆಚ್ಚು ಮಳೆ ನೀರು ಸಂಗ್ರಹಣೆಯಾದರೆ ಸುತ್ತ ಮುತ್ತಲಿನ ಪ್ರದೇಶದ ರೈತರಿಗೆ ಅನುಕೂಲವಾಗುತ್ತದೆ, ಆದ್ದರಿಂದ ಕೆರೆಯಲ್ಲಿರುವ ಹೂಳು ತೆಗೆಯಲು ಸೂಚನೆ ನೀಡಿದರು.

ಗೂಳೂರು ಗ್ರಾಮಕ್ಕೆ ಭೇಟಿ
ಗೂಳೂರು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದ ಅವರು ರೈತರಿಗೆ ನೀಡುತ್ತಿರುವ ಬಿತ್ತನೆ ಬೀಜ ಹಾಗೂ ರಸೊಬ್ಬರಗಳ ಬಗ್ಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್ ಅವರಿಂದ ಮಾಹಿತಿ ಪಡೆದರು, ಮಳೆಯಿಂದಾಗಿ ಮನೆ ಬಿದ್ದಿದ್ದ ಲಕ್ಷ್ಮಣ್ ಕುಮಾರ್ ಎಂಬ ರೈತನನ್ನು ಮಾತನಾಡಿಸಿದ ಅವರು ಪರಿಹಾರ ಹಣ ಬಂದಿರುವ ಬಗ್ಗೆ ಮಾಹಿತಿ ಪಡೆದು ರೈತನ ಕುಟುಂಬ ಮತ್ತು ಬೆಳೆಯುವ ಬೆಳೆಗಳ ಬಗ್ಗೆ ವಿಚಾರಿಸಿದರು, ಸರ್ಕಾರ ರೈತರಿಗೆ ನೀಡುತ್ತಿರುವ ಬಿತ್ತನೆ ಬೀಜ ಮತ್ತು ರಸ ಗೊಬ್ಬರಗಳ ಸದುಪಯೋಗದ ಬಗ್ಗೆ ಅಭಿಪ್ರಾಯ ತಿಳಿದುಕೊಂಡರು, ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಹಾಗೂ ಟಾರ್ಪಲ್ ಅನ್ನು ರೈತರಿಗೆ ವಿತರಿಸಿದರು.

ಗೂಳೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಹೆಣ್ಣು ಮಕ್ಕಳ ಶೌಚಾಲಯದಲ್ಲಿನ ಸ್ವಚ್ಛತೆ, ಶಾಲೆಯ ಅಡುಗೆ ಕೊಠಡಿಯ ಸ್ವಚ್ಛತೆ ಗಮನಿಸಿದ ಅವರು ಮಕ್ಕಳಿಗೆ ಕೊಡುವ ಹಾಲಿನ ಪೌಡರ್ ಪ್ಯಾಕೆಟ್ ಪರಿಶೀಲಿಸಿ ಮಕ್ಕಳಿಗೆ ಹಾಲು ಕೊಡುವ ಮುನ್ನ ಪ್ಯಾಕೆಟ್ ಗಳನ್ನು ಪರೀಕ್ಷಿಸುವಂತೆ ಸೂಚಿಸಿದರಲ್ಲದೆ, ಮಳೆಗಾಲ ಪ್ರಾರಂಭಗೊಂಡಿದ್ದು ಹುಲ್ಲು ಬೆಳೆಯುವುದರಿಂದ ಸೊಳ್ಳೆ, ಹಾವು ಮತ್ತಿತರ ಕ್ರಿಮಿ ಕೀಟ ಸೇರಿಕೊಂಡು ಮಕ್ಕಳಿಗೆ ತೊಂದರೆಯಾಗುವುದರಿಂದ ಶಾಲಾ ಆವರಣ ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಸೂರ್ಯಕಲಾ ಅವರಿಗೆ ಸೂಚನೆ ನೀಡಿದರು.
ಗೂಳೂರು ನ್ಯಾಯ ಬೆಲೆ ಅಂಗಡಿಗೆ ತೆರಳಿ ಪರಿಶೀಲಿಸಿದ ಅವರು ಪಡಿತರ ದಾಸ್ತಾನು ಮಾಡುವ ಜಾಗವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಸೂಚಿಸಿದರಲ್ಲದೆ ಸಾರ್ವಜನಿಕರಿಗೆ ಉತ್ತಮ ಪಡಿತರ ವಿತರಣೆ ಮಾಡಬೇಕು ತಿಳಿಸಿದರು.

ಕೊಳವೆ ಬಾವಿ ವೀಕ್ಷಣೆ
ತಿಮ್ಮೇಗೌಡನ ಪಾಳ್ಯ ಗ್ರಾಮದ ಕೆರೆಯ ಆವರಣದಲ್ಲಿರುವ ಹಳೆಯ ಕೊಳವೆ ಬಾವಿಯಿಂದ ರಾಜ್ಯ ವಿಪತ್ತು ನಿರ್ವಹಣೆ ನಿಧಿಯಿಂದ ಪೈಪ್ ಲೈನ್ ಅಳವಡಿಸಿ ಜೆಜೆಎಂ ಯೋಜನೆಯಡಿ ಗ್ರಾಮಕ್ಕೆ ವಾಟರ್ ಟ್ಯಾಂಕ್ ಮೂಲಕ ನೀರು ಪೂರೈಕೆ ಮಾಡಲಾಗುವುದು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ರವೀಶ್ ಅವರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ ಅವರು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಿತಿಗತಿ ವೀಕ್ಷಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು, ಸ್ಥಳೀಯ ಜನರಿಗೆ ನೀರು ಸರಬರಾಜಾಗುತ್ತಿರುವ ಬಗ್ಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಬೇಕು ಎಂದರು.
ಹೆಬ್ಬೂರು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ

ಹೆಬ್ಬೂರು ಹೋಬಳಿಯಲ್ಲಿ 15 ಸಾವಿರ ರೈತರಿದ್ದು, ಪ್ರತಿಯೊಬ್ಬ ರೈತರಿಗೂ ಸರ್ಕಾರ ನೀಡುತ್ತಿರುವ ಸೌಲಭ್ಯ ಸಿಗಬೇಕು, ಕೃಷಿ ಅಧಿಕಾರಿಗಳು ಬೆಳೆ ವಿಮಾ ಯೋಜನೆಯ ಪ್ರಯೋಜನಗಳ ಬಗ್ಗೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆವಿಮಾ ಯೋಜನೆಗೆ ನೋಂದಾಯಿಸಿಕೊಳ್ಳುವಂತೆ ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಪ್ರಚಾರ ಕೈಗೊಳ್ಳಬೇಕೆಂದು ತಿಳಿಸಿದರಲ್ಲದೆ, ರೈತರಿಗೆ ಬಿತ್ತನೆ ಬೀಜ ಕೊರತೆಯಾಗದಂತೆ ಎಚ್ಚರ ವಹಿಸಬೇಕು, ಬಿತ್ತನೆ ಬೀಜ ಖಾಲಿಯಾದಂತೆ ಹಂತ- ಹಂತವಾಗಿ ಸರಬರಾಜು ಸಂಸ್ಥೆಗಳಿಂದ ತರಿಸಿ ದಾಸ್ತಾನು ಮಾಡಬೇಕೆಂದು ಕೃಷಿ ಜಂಟಿ ನಿರ್ದೇಶಕ ರಮೇಶ್ ಅವರಿಗೆ ತಿಳಿಸಿದರು, ನಂತರ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಹಾಗೂ ಟಾರ್ಪಲ್ ಅನ್ನು ರೈತರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಸಿದ್ದೇಶ್ ಸೇರಿದಂತೆ ಮತ್ತಿತರೆ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!