ತುಮಕೂರು: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ನಗರದ ಶಿರಾ ಗೇಟ್ ಬಳಿಯಿರುವ ಉತ್ತರ ಬಡಾವಣೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ 1 ರಿಂದ 8ನೇ ತರಗತಿ ಮಕ್ಕಳಿಗೆ ಸಾಂಕೇತಿಕವಾಗಿ ಪಠ್ಯಪುಸ್ತಕ, ಸಮವಸ್ತ್ರ ಹಾಗೂ ಎಲ್ ಕೆಜಿ, ಯುಕೆಜಿ ಮಕ್ಕಳಿಗೆ ಲೇಖನ ಸಾಮಗ್ರಿ ವಿತರಣೆ ಮಾಡಿದರು.
ಶಾಲಾ ಪ್ರಾರಂಭದ ಮೊದಲ ದಿನವಾದ್ದರಿಂದ ಮಧ್ಯಾಹ್ನದ ಬಿಸಿಯೂಟದಲ್ಲಿ ಮಕ್ಕಳಿಗೆ ಸಿಹಿ ನೀಡಬೇಕು, ಮಕ್ಕಳಿಗೆ ನೀಡುವ ಊಟ ಗುಣಮಟ್ಟ ಹಾಗೂ ಪೌಷ್ಟಿಕತೆಯಿಂದ ಕೂಡಿರಬೇಕು, ಅಡುಗೆ ಕೋಣೆಯಲ್ಲಿ ಸ್ವಚ್ಛತೆ ಕಾಪಾಡಬೇಕು, ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಪಠ್ಯಪುಸ್ತಕ ಹಾಗೂ ಸಮವಸ್ತ್ರವನ್ನು ಈ ದಿನವೇ ವಿತರಿಸಬೇಕು ಎಂದು ಶಾಲಾ ಮುಖ್ಯೋಪಾಧ್ಯಾಯ ಡಿ.ಎಸ್.ಶಿವಸ್ವಾಮಿ ಅವರಿಗೆ ನಿರ್ದೇಶನ ನೀಡಿದರು.
ನಂತರ ಇಲಾಖೆಯಿಂದ ಸರಬರಾಜಾದ ಪಠ್ಯಪುಸ್ತಕ ದಾಸ್ತಾನು, ಸಮವಸ್ತ್ರ ಸರಬರಾಜು, ಅಡುಗೆ ಕೋಣೆ, ಶಾಲಾ ಕೊಠಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಂಗಧಾಮಯ್ಯ, ಡಯಟ್ ಪ್ರಿನ್ಸಿಪಾಲ್ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಸೂರ್ಯಕಲಾ, ಡಿವೈಪಿಸಿ ರಂಗಧಾಮಪ್ಪ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಎಸ್ ಡಿಎಂಸಿ ಅಧ್ಯಕ್ಷ ಓಬಯ್ಯ, ಶಿಕ್ಷಣಾಧಿಕಾರಿ (ಅಕ್ಷರ ದಾಸೋಹ) ಸುಧಾಕರ್, ಮತ್ತಿತರರು ಹಾಜರಿದ್ದರು. ವಿದ್ಯಾರ್ಥಿಗಳು ಸಹ ಖುಷಿ ಖುಷಿಯಾಗಿ ಮೊದಲ ದಿನ ಶಾಲೆಗೆ ಆಗಮಿಸಿದ್ದರು.
ಊರುಕೆರೆ ಶಾಲೆಗೆ ಭೇಟಿ
ನಗರದ ಹೊರ ವಲಯದಲ್ಲಿರುವ ಊರುಕೆರೆ ಸರ್ಕಾರಿ ಪದವಿ ಪೂರ್ವ (ಪ್ರೌಢಶಾಲಾ ವಿಭಾಗ) ಕಾಲೇಜಿಗೆ ಭೇಟಿ ನೀಡಿ ಶಾಲಾ ಮಕ್ಕಳಿಗೆ ನೀಡಲಾಗುತ್ತಿದ್ದ ಮಧ್ಯಾಹ್ನದ ಬಿಸಿಯೂಟ ಪರಿಶೀಲಿಸಿದರು, ಮೊದಲ ದಿನದ ಊಟದಲ್ಲಿ ಸಿಹಿಯೂಟ ಪಾಯಸ ಬಡಿಸಿದ್ದನ್ನು ಗಮನಿಸಿದ ಅವರು ವಾರದಲ್ಲಿ 2 ದಿನ ಮೊಟ್ಟೆ, 3 ದಿನ ರಾಗಿ ಮಾಲ್ಟ್ ನೀಡಬೇಕು, ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ಅಥವಾ ಚಿಕ್ಕಿ ನೀಡಬೇಕೆಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಗಿರಿಜಮ್ಮ ಅವರಿಗೆ ಸೂಚನೆ ನೀಡಿದರು.
ಮಕ್ಕಳ ಊಟಕ್ಕೂ ಮೊದಲು ಕೈ ತೊಳೆಯಲು ಸಾನೂನಿನ ವ್ಯವಸ್ಥೆ ಮಾಡಬೇಕು, ಅಡುಗೆ ಮಾಡುವವರು ಹಾಗೂ ಊಟ ಬಡಿಸುವವರು ತಮ್ಮ ತಲೆಗೆ ಗವಸು ಧರಿಸಬೇಕು, ಮಕ್ಕಳ ಊಟದ ತಟ್ಟೆಯನ್ನು ಸ್ವಚ್ಛವಾಗಿ ತೊಳೆಯಬೇಕೆಂದು ಅಡುಗೆ ಸಿಬ್ಬಂದಿಗೆ ನಿರ್ದೇಶನ ನೀಡಿದರು.
ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದ ಅವರು ಶಿಕ್ಷಕರು ಬೋಧಿಸಿದ ಪಠ್ಯವನ್ನು ಆಸಕ್ತಿಯಿಂದ ಕಲಿತು ಉನ್ನತ ಮಟ್ಟ ತಲುಪಬೇಕೆಂದು ಕಿವಿಮಾತು ಹೇಳಿದರು.
ಶಾಲೆಯ ಉಪ ಪ್ರಾಚಾರ್ಯ ಪಿ.ಮಂಜುನಾಥ್ ಮಾತನಾಡಿ, ಶಾಲೆಯಲ್ಲಿ 8 ರಿಂದ 10ನೇ ತರಗತಿಗಳಿದ್ದು, 160 ವಿದ್ಯಾರ್ಥಿಗಳಿದ್ದಾರೆ, ಮೊದಲ ದಿನ 60 ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದು, 20 ವಿದ್ಯಾರ್ಥಿಗಳು ಹೊಸದಾಗಿ ದಾಖಲಾಗಿದ್ದಾರೆ, ಶಾಲೆ ಬಿಟ್ಟ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಶಾಲಾ ದಾಖಲಾತಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಜರಿದ್ದರು.
Comments are closed.