ತುಮಕೂರು: ವಿಶ್ವ ಹಾಲು ದಿನಾಚರಣೆ ಅಂಗವಾಗಿ ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ ವತಿಯಿಂದ ನಗರದ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ನಂದಿನಿ ಹಾಲು, ಕುಕ್ಕೀಸ್ ಬಿಸ್ಕೆಟ್ ಹಾಗೂ ಹಣ್ಣು ವಿತರಿಸಲಾಯಿತು.
ನಗರದ ಜಿಲ್ಲಾಸ್ಪತ್ರೆಗೆ ಆಗಮಿಸಿದ ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ ಆಡಳಿತಾಧಿಕಾರಿ ಡಾ.ಉಮೇಶ್.ಜಿ, ವ್ಯವಸ್ಥಾಕ ನಿರ್ದೇಶಕ ಶ್ರೀನಿವಾಸನ್.ಜಿ, ಪ್ರಧಾನ ವ್ಯವಸ್ಥಾಪಕ ತಿಮ್ಮನಾಯಕ್, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ವಿದ್ಯಾನಂದ್, ಗಿರೀಶ್ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಸ್ಗರ್ ಬೇಗ್.ಸಿ.ಐ. ಅವರು ಜಿಲ್ಲಾಸ್ಪತ್ರೆಯ ಪ್ರತಿ ವಾರ್ಡ್ಗಳಿಗೆ ತೆರಳಿ ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ನಂದಿನಿ ಹಾಲು, ಬಿಸ್ಕೆಟ್ ಹಾಗೂ ಹಣ್ಣು ಹಂಪಲು ವಿತರಿಸಿದರು.
ನಂತರ ಮಾತನಾಡಿದ ತುಮುಲ್ ಆಡಳಿತಾಧಿಕಾರಿ ಡಾ.ಉಮೇಶ್.ಜಿ., ಇಂದು ಜಾಗತಿಕವಾಗಿ ಹಾಲಿನ ಮಹತ್ವ ತಿಳಿಸುವ ಉದ್ದೇಶದಿಂದ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಾಲು ವಿತರಣೆ ಮಾಡಲಾಗುತ್ತಿದ್ದು, ಜಾಗತಿಕ ಹಾಲಿನ ಮಹತ್ವ ತಿಳಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.
2001 ರಿಂದ ಎಫ್ ಎ ಓ ಅವರು ಈ ಕಾರ್ಯಕ್ರಮ ಜಾರಿಗೆ ತಂದಿದ್ದು, ಹಾಲಿನ ಉದ್ಯಮ ಮತ್ತು ವ್ಯವಸ್ಥೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯ ಮಾಡಲಾಗುತ್ತಿದೆ, ಜತೆಗೆ ಜನರಲ್ಲಿ ಹಾಲಿನ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಇದರ ಧ್ಯೇಯವಾಗಿದೆ ಎಂದು ಹೇಳಿದರು.
ತುಮಕೂರು ಹಾಲು ಒಕ್ಕೂಟದ ವತಿಯಿಂದ ಪ್ರತಿನಿತ್ಯ 9,01,300 ಲೀಟರ್ ಹಾಲು ಶೇಖಣೆಯಾಗುತ್ತಿದೆ, ಜಿಲ್ಲೆಯಲ್ಲಿ 1345 ಸಹಕಾರ ಸಂಘಗಳು ಅಸ್ತಿತ್ವದಲ್ಲಿವೆ ಎಂದು ಮಾಹಿತಿ ನೀಡಿ ಸರ್ಕಾರ ಜಾರಿಗೊಳಿಸಿರುವ ಯಶಸ್ವಿನಿ ಆರೋಗ್ಯ ಯೋಜನೆಯ ಸದುಪಯೋಗವನ್ನು ಹಾಲು ಉತ್ಪಾದಕರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ತುಮುಲ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್.ಜಿ. ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ವಿಶ್ವ ಹಾಲು ದಿನಾಚರಣೆ ಅಂಗವಾಗಿ ಒಕ್ಕೂಟದ ವತಿಯಿಂದ ಉಚಿತವಾಗಿ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಾಲು, ಬಿಸ್ಕೆಟ್ ವಿತರಣೆ ಮಾಡಲಾಗಿದೆ ಎಂದರು.
ಪೌಷ್ಠಿಕಾಂಶದ ಕೊರತೆ ಎದುರಿಸುತ್ತಿರುವ ರೋಗಿಗಳಿಗೆ ಹಾಲು ವಿತರಣೆಯಿಂದ ಅನುಕೂಲವಾಗುತ್ತದೆ, ಹಾಗಾಗಿ ವಿಶ್ವಹಾಲು ದಿನಾಚರಣೆಯಂದು ರೋಗಿಗಳಿಗೆ ಹಾಲು ವಿತರಣೆಯನ್ನು ಒಕ್ಕೂಟದ ವತಿಯಿಂದ ಮಾಡಲಾಗುತ್ತಿದೆ ಎಂದರು.
ತುಮುಲ್ ನಿಂದ 6.50 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ, ನಮ್ಮ ಒಕ್ಕೂಟದ ಹಾಲು ಶಾಲಾ ಮಕ್ಕಳಿಗೆ ನೀಡುವ ಕ್ಷೀರಭಾಗ್ಯ ಯೋಜನೆಗೂ ಬಳಕೆಯಾಗುತ್ತಿದೆ, ಸರ್ಕಾರದ ಹಾಲು ಉತ್ಪಾದಕರಿಗೆ 5 ರೂ. ಪ್ರೋತ್ಸಾಹ ಧನ ನೀಡುತ್ತಿರುವುದಿಂದ ತುಮುಲ್ ಗೆ ಹಾಲು ಯಥೇಚ್ಛವಾಗಿ ಬರುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತುಮುಲ್ ಉಪ ವ್ಯವಸ್ಥಾಪಕರಾದ ಚಂದ್ರಶೇಖರ್ ಕೇದನುರಿ, ಮಂಜುನಾಥ್ ನಾಯಕ್, ಟಿ.ಕೆ.ರವಿಕಿರಣ್ ಸೇರಿದಂತೆ ಹಾಲು ಒಕ್ಕೂಟದ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.
Comments are closed.