ತುಮಕೂರು: ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ಸರ್ಕಾರ ಸ್ಥಗಿತಗೊಳಿಸದಿದ್ದರೆ ಮುಂದಿನ ವಿಧಾನಸಭೆ ಅಧಿವೇಶನ ಸಮಯದಲ್ಲಿ ವಿಧಾನಸೌದ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ಹೋರಾಟ ಸಮಿತಿ ನೇತೃತ್ವ ವಹಿಸಿರುವ ಮಾಜಿ ಸಚಿವ ಸೊಗಡು ಶಿವಣ್ಣ ಎಚ್ಚರಿಕೆ ನೀಡಿದ್ದಾರೆ.
ತುಮಕೂರಿನ ಶ್ರೀಮುರುಘ ರಾಜೇಂದ್ರ ಸಭಾ ಭವನದಲ್ಲಿ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿಯ ಪ್ರಮುಖರು ಸಭೆ ಸೇರಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸದ ಸಂದರ್ಭದಲ್ಲಿ ಈ ನಿರ್ಣಯದ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಕಳೆದ ಮೇ 30 ರಂದು ನಡೆದ ಗೃಹ ಸಚಿವ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮನೆ ಮುಂಭಾಗದ ಧರಣಿಗೆ ಆಗಮಿಸಿ ಬಂಧನಕ್ಕೆ ಒಳಗಾದವರು ಮತ್ತು ಸಹಕರಿಸಿದ ಎಲ್ಲರಿಗೂ ಮಾಜಿ ಸಚಿವ ಸೊಗಡು ಶಿವಣ್ಣ ಧನ್ಯವಾದ ಅರ್ಪಿಸಿದರು.
ತುಮಕೂರು ಶಾಸಕ ಬಿ.ಸುರೇಶ್ ಗೌಡ ಮಾತನಾಡಿ, ಮುಂದಿನ ದಿನಗಳಲ್ಲಿ ಹೇಮಾವತಿ ಲಿಂಕ್ ಕೆನಾಲ್ ವಿರುದ್ಧ ಹಂತ ಹಂತವಾಗಿ ಹೋರಾಟಕ್ಕೆ ಜಿಲ್ಲೆಯ ರೈತರು, ವಿವಿಧ ಸಂಘ ಸಂಸ್ಥೆ, ಸಂಘಟನೆಗಳನ್ನು ವಿಶ್ವಾಸಕ್ಕೆ ಪಡೆದು, ಲಿಂಕ್ ಕೆನಾಲ್ ಹಾದು ಹೋಗುವ ಎಲ್ಲಾ ಗ್ರಾಮ, ಪ್ರದೇಶದಲ್ಲಿನ ಜನರಿಗೆ ಅರಿವು ಮೂಡಿಸಿ, ತಾತ್ವಿಕ ಅಂತ್ಯಕ್ಕೆ ಹೋರಾಟ ಮಾಡೋಣ ಎಂದು ಕರೆ ನೀಡಿದರು.
ರಾಜ್ಯ ಸರ್ಕಾರ ತುಮಕೂರು ಜಿಲ್ಲೆಯ ಹೋರಾಟ ಹತ್ತಿಕ್ಕಲು ಭಾರಿ ಯೋಜನೆ ಮಾಡಿರುವ ಹಾಗೆ ಕಾಣುತ್ತಿದೆ, ಮೊನ್ನೆ ನಡೆದ ಹೋರಾಟವನ್ನು ಪೊಲೀಸರ ಸರ್ಪಗಾವಲು ಹಾಕಿ, ಜನಪ್ರತಿನಿಧಿಗಳು, ರೈತರು, ನಾಗರಿಕರು, ವಿವಿಧ ಪಕ್ಷಗಳ ಪ್ರಮುಖರು, ಸಂಘಟನೆಗಳವರನ್ನು ಬಂಧಿಸುವ ಕಾರ್ಯ ಮಾಡಿ ತುಮಕೂರು ಜಿಲ್ಲೆಗೆ ಅವಮಾನಿಸಿದ್ದಾರೆ ಮತ್ತು ಕಾಂಗ್ರೆಸ್ ಪದಾಧಿಕಾರಿಗಳು ಪ್ರತಿಭಟನೆ ಮಾಡಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಕಾಂಗ್ರೆಸ್ ಶಾಸಕರು ಜಿಲ್ಲೆಯ ಜನರ ರಕ್ಷಿಸುವಲ್ಲಿ ವಿಫಲವಾದರು ಎಂದರು.
ಗುಬ್ಬಿಯಲ್ಲಿ ಸಮಾವೇಶ: ಸರ್ಕಾರ ನಮ್ಮ ಹೋರಾಟವನ್ನು ಹತ್ತಿಕ್ಕಲು ನಿರ್ಧರಿಸುವ ಹಾಗೆ ಕಾಣುತ್ತಿದ್ದು, ಹಿಟ್ಲರ್ ಆಡಳಿತ ರೀತಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವರ್ತಿಸುತ್ತಿದ್ದು, ಚಾಲನ್ ಕೆಲಸ ಪೂರ್ಣಗೊಳಿಸುವುದು ಡಿಕೆಶಿ ಉದ್ದೇಶ ಎಂದು ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಕಟು ಶಬ್ಧಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಮತ್ತು ವಕೀಲ ಹೆಚ್.ಲಿಂಗಪ್ಪ, ನಿಟ್ಟೂರ್ ಪ್ರಕಾಶ್, ಸಂಪಿಗೆ ಜಗದೀಶ್, ಹೈಕೋರ್ಟ್ ವಕೀಲ ತುರುವೇಕೆರೆ ಜಗದೀಶ್, ಧನಿಯಾಕುಮಾರ್, ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಆರಾಧ್ಯ, ಶಿರಾ ತಾಲ್ಲೂಕು ಅಧ್ಯಕ್ಷ ದ್ಯಾಮೇಗೌಡ, ಸಾಗರನಹಳ್ಳಿ ನಂಜೇಗೌಡ, ಹೊಸಕೋಟೆ ನಟರಾಜು, ಡಿಎಸ್ಎಸ್ ನರಸಿಂಹಯ್ಯ, ಕೊರಟಗೆರೆ ಶಾಶ್ವತ ನೀರಾವರಿ ಸಮಿತಿ ಅಧ್ಯಕ್ಷ ವೆಂಕಟಾಚಲಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಪಂಚಾಕ್ಷರಯ್ಯ, ಕೆ.ಪಿ.ಮಹೇಶ , ಬೆಳಗುಂಬ ಪ್ರಭಾಕರ್, ಸೊಗಡು ಕುಮಾರಸ್ವಾಮಿ, ಎಸ್.ಶಿವಪ್ರಸಾದ್ ಇತರರು ಇದ್ದರು.
Comments are closed.