ಜೂ.4ಕ್ಕೆ ಲೋಕ ಮತ ಎಣಿಕೆಗೆ ಸಕಲ ಸಿದ್ಧತೆ: ಡೀಸಿ

49

Get real time updates directly on you device, subscribe now.


ತುಮಕೂರು: ಜಿಲ್ಲೆಯಲ್ಲಿ ಕಳೆದ ಏಪ್ರಿಲ್ 26 ರಂದು ಜರುಗಿದ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಜೂನ್ 4 ರಂದು ಸುಗಮವಾಗಿ ಮತ ಎಣಿಕಾ ಕಾರ್ಯ ನಡೆಸಲು ಎಣಿಕಾ ಕೊಠಡಿ, ಎಣಿಕಾ ಟೇಬಲ್, ಅಗತ್ಯ ಅಧಿಕಾರಿ, ಸಿಬ್ಬಂದಿ ನಿಯೋಜನೆ ಸೇರಿದಂತೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.

ಬೆಳಗ್ಗೆ 8 ರಿಂದ ಎಣಿಕಾ ಕಾರ್ಯ: ತಮ್ಮ ಕಚೇರಿಯಲ್ಲಿ ಶನಿವಾರ ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಗೆ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾಹಿತಿ ಹಂಚಿಕೊಂಡ ಅವರು ಜಿಲ್ಲೆಯ ಲೋಕಸಭಾ ಕ್ಷೇತ್ರಕ್ಕೊಳಪಡುವ ಚಿಕ್ಕನಾಯಕನ ಹಳ್ಳಿ, ತಿಪಟೂರು, ತುರುವೇಕೆರೆ, ಮಧುಗಿರಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು ವಿಶ್ವ ವಿದ್ಯಾಲಯದ ವಿಜ್ಞಾನ ಕಾಲೇಜು ಹಾಗೂ ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಗುಬ್ಬಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕಾ ಕಾರ್ಯವನ್ನು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜೂನ್ 4 ರಂದು ಬೆಳಗ್ಗೆ 8 ಗಂಟೆಯಿಂದ ನಡೆಸಲಾಗುವುದು ಎಂದು ಹೇಳಿದರು.

448 ಅಧಿಕಾರಿ, ಸಿಬ್ಬಂದಿ ನಿಯೋಜನೆ
ಜಿಲ್ಲೆಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ 8 ವಿಧಾನಸಭಾ ಕ್ಷೇತ್ರಗಳು ಒಳಪಡಲಿದ್ದು, ಈ ವ್ಯಾಪ್ತಿಯ ಒಟ್ಟು 1846 ಮತಗಟ್ಟೆಗಳಲ್ಲಿ ನಡೆದ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಮೂಲಕ 12,96,720 ಮತದಾರರು ಮತದಾನ ಮಾಡಿದ್ದಾರೆ, ಅಲ್ಲದೆ ಮನೆಯಿಂದ ಮತದಾನ ಮಾಡಿದ 80 ವರ್ಷ ಮೇಲ್ಪಟ್ಟ 2933 ಮತದಾರರು, ಶೇ.40ಕ್ಕಿಂತ ಹೆಚ್ಚಿನ ಪ್ರಮಾಣದ ಅಂಗವೈಕಲ್ಯ ಹೊಂದಿರುವ 878 ವಿಕಲಚೇತನರು, 545 ಅಗತ್ಯ ಸೇವೆಯಲ್ಲಿರುವ, 3023 ಚುನಾವಣಾ ಕರ್ತವ್ಯ ನಿಯೋಜಿತ ಹಾಗೂ 274 ಸೇವಾ ಮತದಾರರು ಸೇರಿ 7653 ಮತದಾರರು ಅಂಚೆ ಮತದಾನದ ಮೂಲಕ ಮತದಾನ ಮಾಡಿದ್ದಾರೆ, ಸೇವಾ ಮತದಾರರಿಂದ ಮತಪತ್ರ ಸ್ವೀಕರಿಸಲು ಜೂನ್ 4ರ ಬೆಳಗ್ಗೆ 7.59 ನಿಮಿಷದ ವರೆಗೂ ಅವಕಾಶವಿರುತ್ತದೆ ಎಂದು ಮಾಹಿತಿ ನೀಡಿದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್ ನಂತೆ ಒಟ್ಟು 112 ಟೇಬಲ್, ಅಂಚೆ ಮತಪತ್ರ ಹಾಗೂ ಇಟಿಪಿಬಿಎಸ್ ಎಣಿಕೆಗಾಗಿ 19(18+1) ಟೇಬಲ್ ಸೇರಿದಂತೆ ಒಟ್ಟು 131 ಟೇಬಲ್ ಗಳಲ್ಲಿ ಮತ ಎಣಿಕೆ ನಡೆಸಲಾಗುವುದು, ಅಂಚೆ ಮತಪತ್ರಗಳ ಎಣಿಕೆಗಾಗಿ 2 ಕೊಠಡಿಯಲ್ಲಿ 18 ಎಣಿಕಾ ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಟೇಬಲ್ ಗೂ ತಲಾ ಒಬ್ಬರು ಸಹಾಯಕ ಚುನಾವಣಾ ಅಧಿಕಾರಿ ನೇಮಕ ಮಾಡಲಾಗಿದೆ, ಇದಕ್ಕಾಗಿ ಒಟ್ಟು 448 ಎಣಿಕಾ ಮೇಲ್ವಿಚಾರಕರು, ಎಣಿಕಾ ಸಹಾಯಕರು ಹಾಗೂ ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗಿದ್ದು, ಎಣಿಕಾ ಕಾರ್ಯಕ್ಕೆ ನಿಯೋಜಿಸಿದವರಿಗೆ ಈಗಾಗಲೇ 2 ಹಂತದ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

ಮಧುಗಿರಿ, ತುಮಕೂರು ಗ್ರಾಮಾಂತರ ಹಾಗೂ ಕೊರಟಗೆರೆ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು ತಲಾ 2 ಕೊಠಡಿಗಳಲ್ಲಿ ಉಳಿದ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು ತಲಾ 1 ಕೊಠಡಿಯಲ್ಲಿ ಮಾಡಲಾಗುವುದು, ಪ್ರತಿ ಎಣಿಕಾ ಕೊಠಡಿಗೂ ಗೆಟೆಡ್ ಅಧಿಕಾರಿಯನ್ನು ಸಹಾಯಕ ಚುನಾವಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಮಾತನಾಡಿ, ಚುನಾವಣಾ ಆಯೋಗದ ನಿರ್ದೇಶನದಂತೆ ಮತ ಎಣಿಕಾ ಕೇಂದ್ರದ ಸುತ್ತಮುತ್ತ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಎಣಿಕಾ ಕೇಂದ್ರಕ್ಕೆ ರಾಜ್ಯ ಪೊಲೀಸ್, ಕೆ ಎಸ್ ಆರ್ ಪಿ, ಸಿಎಪಿಎಫ್ ಸೇರಿದಂತೆ 3 ಸುತ್ತಿನ ಬಿಗಿ ಭದ್ರತೆ ಒದಗಿಸಲಾಗಿದೆ, ವ್ಯವಸ್ಥಿತವಾಗಿ ಮತ ಎಣಿಕೆ ನಡೆಸುವ ನಿಟ್ಟಿನಲ್ಲಿ ಮತ ಎಣಿಕಾ ಕೇಂದ್ರಕ್ಕೆ ಬಿಗಿ ಭದ್ರತೆ ಒದಗಿಸಲು 300 ಮಂದಿ ಹೆಚ್ಸಿ, ಪಿಸಿ, 48 ಎ ಎಸ್ ಐ, 29 ಪಿ ಎಸ್ ಐ, 15 ಸಿಪಿಐ, 4 ಡಿವೈಎಸ್ ಪಿ, 1 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನೇಮಿಸಲಾಗಿದೆ ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!