ರೋಗ ಬರದಂತೆ ತಡೆಯುವುದು ಮುಖ್ಯ: ಡೀಸಿ

ಸ್ವಚ್ಛತೆ ಕಾಪಾಡಿಕೊಂಡು ಉತ್ತಮ ಆರೋಗ್ಯ ಹೊಂದಲು ಕರೆ

38

Get real time updates directly on you device, subscribe now.


ತುಮಕೂರು: ರೋಗ ಬಂದ ಮೇಲೆ ಔಷಧಿ ಪಡೆದು ಗುಣ ಹೊಂದುವುದಕ್ಕಿಂತ, ರೋಗ ಬರದಂತೆ ತಡೆಯುವುದು ನಮ್ಮೆಲ್ಲರ ಗುರಿಯಾಗಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ನಗರದ ಕುರಿಪಾಳ್ಯದಲ್ಲಿ ಜಿಲ್ಲಾಡಳೀತ, ಜಿಲ್ಲಾ ಪಂಚಾಯಿತಿ, ಮಹಾ ನಗರಪಾಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳಾದ ಚಿಕನ್ ಗುನ್ಯಾ ಮತ್ತು ಡೆಂಗ್ಯೂ ಕುರಿತ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ, ಕರಪತ್ರ ಬಿಡುಗಡೆ ಮಾಡಿ ಮಾತನಾಡಿ, ರೋಗ ಬರದಂತೆ ತಡೆಯುವ ನಿಟ್ಟಿನಲ್ಲಿ ನಮ್ಮೆಲ್ಲರ ಪಾತ್ರವಿದೆ, ಈ ಕುರಿತು ಜನರಿಗೆ ಅರಿವು ಮೂಡಿಸುವ ಸಲುವಾಗಿ ಈ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.

ಮನುಷ್ಯನಿಗೆ ಪರಿಸರದಲ್ಲಿನ ಅಶುಚಿತ್ವದಿಂದ ಹೆಚ್ಚು ರೋಗ ಬರುವ ಸಾಧ್ಯತೆ ಇದೆ, ಅದರಲ್ಲಿಯೂ ಮಳೆಗಾಲದಲ್ಲಿ ಚರಂಡಿ, ರಸ್ತೆಯ ಮೇಲೆ ಹಾಗೂ ನೀರು ಸಂಗ್ರಹಗೊಳ್ಳುವ ಪ್ರದೇಶಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಮಲೇರಿಯಾ, ಚಿಕೂನ್ ಗುನ್ಯಾ, ಡೆಂಗ್ಯೂ, ಮೆದುಳು ಜ್ವರದಂತಹ ರೋಗ ತಂದೊಡ್ಡಲಿವೆ, ಹಾಗಾಗಿ ಈ ಸಮಯದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯ ಜೊತೆಗೆ ನಾಗರಿಕರು ಎಚ್ಚೆತ್ತುಕೊಳ್ಳಬೇಕಿದೆ, ಮನೆಯ ಸುತ್ತಮುತ್ತ ಗಲೀಜು ನೀರು ಸಂಗ್ರಹ ಆಗದಂತೆ ಎಚ್ಚರಿಕೆ ವಹಿಸಬೇಕು, ಹಳೆಯ ಟೈರ್ ಗಳಲ್ಲಿ, ಎಳನೀರು ಬುರುಡೆಗಳಲ್ಲಿ ನೀರು ಸಂಗ್ರಹ ಆಗದೆ ಅಗತ್ಯ ಕ್ರಮ ಕೈಗೊಂಡರೆ ರೋಗಗಳಿಂದ ಮುಕ್ತರಾಗಿ ಒಳ್ಳೆಯ ಆರೋಗ್ಯವಂತ ಜೀವನ ನಡೆಸಬಹುದು ಎಂದು ಜಿಲ್ಲಾಧಿಕಾರಿ ನುಡಿದರು.

ಸರಕಾರ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಸಿಇಓ ಗಳ ಜೊತೆಗೆ ಸಭೆ ನಡೆಸಿರೋಗ ಬರದಂತೆ ತಡೆಯಲು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡುವಂತೆ ಸೂಚಿಸಿದೆ, ಅದರಂತೆ ತುಮಕೂರು ನಗರದಲ್ಲಿ ಜಿಲ್ಲಾಡಳಿತ ಮಹಾ ನಗರ ಪಾಲಿಕೆಯೊಂದಿಗೆ ಸೇರಿ ಸಾರ್ವಜನಿಕರಲ್ಲಿ ಅರಿವು ಮೂಡಿಸುಲು ಭಿತ್ತಿಪತ್ರ ಬಿಡುಗಡೆ, ಮನೆ ಮನೆಗೆ ಬಿತ್ತಿ ಪತ್ರ ಅಂಟಿಸುವ ಕೆಲಸ ಆರಂಭಿಸಲಾಗಿದೆ, ಆದೇ ರೀತಿ ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿ ಜೊತೆಗೂಡಿ ಈ ಕೆಲಸವನ್ನು ಒಂದು ವಾರಗಳ ಕಾಲ ಮಾಡಬೇಕಿದೆ, ಯಾರು ಈ ವಿಚಾರದಲ್ಲಿ ನಿರ್ಲಕ್ಷ ಮಾಡಬಾರದು, ಪ್ರತಿವರ್ಷದ ಕಾರ್ಯಕ್ರಮ ಎಂಬ ಧೋರಣೆ ಬಿಟ್ಟು ಒಂದು ಜೀವ ಉಳಿಸುವ ಕೆಲಸ ಮಾಡುತ್ತಿದ್ದೇವೆ ಎಂಬ ಮನೋಭಾವನೆಯಿಂದ ಕೆಲಸ ಮಾಡಿ, ರೋಗಗಳು ಬರದಂತೆ ತಡೆಗಟ್ಟುವ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಲಹೆ ನೀಡಿದರು.

ಮಹಾನಗರಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ ಮಾತನಾಡಿ, ಮಳೆಗಾಲದ ಆರಂಭದಲ್ಲಿ ಗ್ರಾಮೀಣ ಭಾಗಕ್ಕಿಂತ ನಗರ ಪ್ರದೇಶಗಳಲ್ಲಿ ರೋಗ ಹರಡುವ ವೇಗ ಹೆಚ್ಚಿರುತ್ತದೆ, ಈ ಕಾರಣಕ್ಕೆ ನಗರದಲ್ಲಿ ಮಳೆ ನೀರು ಹರಿಯುವ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಲಾಗಿದೆ, ಅಲ್ಲದೆ ಬಾಕ್ಸ್ ಚರಂಡಿಗಳಿಗೆ ಹೆಚ್ಚು ಒತ್ತು ನೀಡಿ, ಕುಡಿಯುವ ನೀರಿಗೆ ಚರಂಡಿ ನೀರು ಸೇರದಂತೆ ಎಚ್ಚರಿಕೆ ವಹಿಸಲಾಗಿದೆ, 1200 ಮನೆಗಳಿರುವ ದಿಬ್ಬೂರಿನ ದೇವರಾಜ ಅರಸು ಬಡಾವಣೆಯಲ್ಲಿ ಪ್ರಾಯೋಗಿಕವಾಗಿ ಎನ್ ಜಿಓ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಹಕಾರದಲ್ಲಿ ಕಸ ವಿಂಗಡನೆ ಜೊತೆಗೆ ಅಡಿಕೆಯಿಂದ ಮಾಡಿದ ಸ್ಲಾಬ್ ಗಳನ್ನು ತೆರೆದ ಚರಂಡಿ ಮುಚ್ಚುವ ಕಾರ್ಯಕ್ರಮ ನಡೆಯತ್ತಿದೆ, ಇದಕ್ಕೆ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿ ಸಹಕಾರ ನೀಡಬೇಕೆಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್, ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಚಂದ್ರಶೇಖರ್, ತಾಲೂಕು ವೈದಾಧಿಕಾರಿ ಲಕ್ಷ್ಮಿಕಾಂತ್, ನಗರ ಪಾಲಿಕೆಯ ಆರೋಗ್ಯಾಧಿಕಾರಿ ವೀರೇಶ್ ಕಲ್ಮಠ್, ಪರಿಸರ ಇಂಜಿನಿಯರ್ ಪೂರ್ಣಿಮ ಸೇರಿದಂತೆ ನಗರಪಾಲಿಕೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!