ಕುಣಿಗಲ್: ತಾಲೂಕಿನ ಪಾಲಿನ ಹೇಮಾವತಿ ನೀರು ಪಡೆಯಲು ಲಿಂಕ್ ಕೆನಾಲ್ ಕಾಮಗಾರಿ ಅತ್ಯಗತ್ಯವಾಗಿದೆ, ಕಾಮಗಾರಿ ಅನುಷ್ಠಾನ ದಿಂದ ಮಾತ್ರ ತಾಲೂಕಿಗೆ ನಿಗದಿತ ಪ್ರಮಾಣದ ಹೇಮಾವತಿ ನೀರು ಹರಿಸಲು ಸಾಧ್ಯ ಎಂದು ಬೆಟ್ಟಹಳ್ಳಿ ಮಠಾಧೀಶ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸೋಮವಾರ ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಲಿಂಕ್ ಕೆನಾಲ್ ಕಾಮಗಾರಿ ಅನುಷ್ಠಾನ ಆಗ್ರಹ ಹಿನ್ನೆಲೆಯಲ್ಲಿ ನಡೆದ ಸಭೆಯ ಸಾನಿಧ್ಯ ವಹಿಸಿ ಮಾತನಾಡಿ, ತಾಲೂಕಿನ ಜನರು ಉದಾರಿಗಳು, ಕಾವೇರಿ ಜಲಾನಯನ ಪ್ರದೇಶದ ನೀರನ್ನು ಕೃಷ್ಣ ಜಲಾನಯನ ಪ್ರದೇಶಕ್ಕೆ ಹರಿಸಿದಾಗ ಯಾವುದೇ ತಕರಾರು ಮಾಡಲಿಲ್ಲ, ಹೇಮಾವತಿ ಯೋಜನೆ ಅನುಷ್ಠಾನಗೊಂಡು ಹಲವು ದಶಕಗಳೆ ಕಳೆದರೂ ಇನ್ನು ತಾಲೂಕಿಗೆ ನಿಗದಿಪಡಿಸಲಾಗಿರುವ ಮೂರು ಟಿಎಂಸಿ ನೀರು ಹರಿದಿಲ್ಲ, ಇದು ತಾಲೂಕಿನ ನೀರಾವರಿ ವ್ಯವಸ್ಥೆ ಮೇಲೆ ಪರೋಕ್ಷ ಪರಿಣಾಮ ಬೀರಿದ್ದು, ತಾಲೂಕಿನೆಲ್ಲೆಡೆ ಅಂತರ್ಜಲ ಮಟ್ಟ ಕುಸಿದಿರುವ ಸಮಯದಲ್ಲಿ ಹೇಮಾವತಿ ನೀರು ಹರಿಸುವುದೆ ಪರಿಹಾರ, ಈಗಿನ ವ್ಯವಸ್ಥೆಯಲ್ಲಿ ನಾಲೆಗೆ ನೀರು ಹರಿಸಿ ನಿಯಮದ ಪ್ರಕಾರ ಕೊನೆ ಭಾಗದಿಂದ ಹರಿಸಬೇಕೆಂದರೂ ನಿಯಮದ ಪಾಲನೆ ಆಗುತ್ತಿಲ್ಲ, ಅಲ್ಲದೆ ಇಡೀ ಜಿಲ್ಲೆ ಸುತ್ತುಹಾಕಿಕೊಂಡು ಹೇಮೆ ನೀರು ತಾಲೂಕು ತಲುಪುವಷ್ಟರಲ್ಲಿ ನಿಗದಿತ ಪ್ರಮಾಣದ ಶೇ.15 ರಷ್ಟು ನೀರು ಬರುವುದಿಲ್ಲ, ತಾಲೂಕಿನ ಪ್ರಮಾಣದ ನೀರು ಪಡೆಯಲು ಜಿಲ್ಲೆ ಪೂರ್ತಾ ಸುತ್ತಿ ಹಾಕಿಕೊಂಡು ಬರುವ ಬದಲು ನೇರ ಮಾರ್ಗವಾದ ಲಿಂಕ್ ಕೆನಾಲ್ ಮೂಲಕ ನೀರು ಹರಿಸಿದಲ್ಲಿ ತಾಲೂಕಿಗೆ ಸಮರ್ಪಕ ಪ್ರಮಾಣದ ನೀರು ಹರಿಸಲು ಸಾಧ್ಯ, ಈ ನಿಟ್ಟಿನಲ್ಲಿ ತಾಲೂಕಿನ ಜನರು ಲಿಂಕ್ ಕೆನಾಲ್ ಮೂಲಕ ನೀರು ಹರಿಸಲು ಒಗ್ಗೂಡಿ ಪಕ್ಷಾತೀತವಾಗಿ, ಧರ್ಮಾತೀತವಾಗಿ ಹೋರಾಟ ಮಾಡಬೇಕು, ತಾಲೂಕಿನ ಪ್ರಮಾಣದ ನೀರು ಯಾವುದೇ ಕಾರಣಕ್ಕೂ ಬೇರೆಡೆ ಹರಿಸಲು, ಬೇರೆ ತಾಲೂಕಿಗೆ ಹರಿಸಲು ನಮ್ಮ ವಿರೋಧ ಇದೆ, ಜಿಲ್ಲೆಯ ಜನಪ್ರತಿನಿಧಿಗಳು ತಾಲೂಕಿನ ಜನತೆಗೆ ನ್ಯಾಯ ಒದಗಿಸಲು ಮುಕ್ತ ಮನಸು ಮಾಡಬೇಕು, ತಾಲೂಕಿನ ಪ್ರಮಾಣದ ನೀರು ಬೇರೆ ತಾಲೂಕಿಗೆ ಹರಿಸುವ ಪ್ರಶ್ನೆಯೆ ಇಲ್ಲ, ತಾಲೂಕಿಗೆ ಹೇಮಾವತಿ ನೀರು ಹರಿಸುವ ಬಗ್ಗೆ ಅಳತೆ ಮಾಡಲು ಲಿಂಕ್ ಕೆನಾಲ್ ಜಾಗದಲ್ಲಿ ಬೇಕಾದಲ್ಲಿ ಅಳತೆ ಯಂತ್ರ ಸ್ಥಾಪಿಸಲು, ತಾಲೂಕಿನ ಜನರು ಮುಗ್ಧರು, ಉದಾರಿಗಳು ಎಂದು ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡುವುದು ಬೇಡ, ಮಲತಾಯಿ ಧೋರಣೆ ತಳೆಯುವುದು ಬೇಡ, ರಾಜ್ಯ ಸರ್ಕಾರದ ತೀರ್ಮಾನದಂತೆ ನಮ್ಮ ಪಾಲಿನ ನೀರು ನೇರವಾಗಿ ಹರಿಸಲು ಸಹಕಾರಿಯಾಗಿರುವ ಲಿಂಕ್ ಕೆನಾಲ್ ಕಾಮಗಾರಿ ಅನುಷ್ಠಾನಕ್ಕೆ ಸಹಕಾರ ನೀಡಬೇಕು, ಯಾವುದೆ ಒತ್ತಡಕ್ಕೆ ಮಣಿದು ಕಾಮಗಾರಿಗೆ ಅಡಚಣೆ ಮಾಡಬಾರದು ಎಂದರು.
ಲಿಂಕ್ ಕೆನಾಲ್ ಕಾಮಗಾರಿಯ ಮಹತ್ವ ಮತ್ತು ಕಾಮಗಾರಿಯಿಂದ ತಾಲೂಕಿನ ನೀರಾವರಿಗೆ ಆಗುವ ಅನುಕೂಲ, ಲಾಭಗಳ ಬಗ್ಗೆ ತಾಲೂಕಿನ ವಿವಿಧ ಪಕ್ಷಗಳ ಮುಖಂಡರು ಜನತೆಗೆ ಮನವರಿಕೆ ಮಾಡಿ ಕೊಡಬೇಕು, ಸಮರ್ಪಕ ಕಾಮಗಾರಿ ಅನುಷ್ಠಾನಕ್ಕಾಗಿ ಹೋರಾಟ ಅನಿವಾರ್ಯವಾಗಿದ್ದು ಹೋರಾಟಕ್ಕೆ ಯಾವುದೇ ರೀತಿಯ ಭೇದ ಭಾವ ಇಲ್ಲದೆ ತಾಲೂಕಿನ ಜನರು ಮುಂದಾದಲ್ಲಿ ನಮ್ಮ ಪಾಲಿನ ಹೇಮಾವತಿ ನೀರು ಪೂರ್ಣ ಪ್ರಮಾಣವಾಗಿ ಸಿಗಲಿದೆ ಎಂದರು.
ಕೆಪಿಸಿಸಿ ಸದಸ್ಯ ಬೇಗೂರು ನಾರಾಯಣ, ಕಾಂಗ್ರೆಸ್ ಮುಖಂಡರಾದ ಹೊನ್ನೆಗೌಡ, ಗಂಗಶಾನಯ್ಯ, ಮಡಿಕೆಹಳ್ಳಿ ಶಿವಣ್ಣ, ಪಾಪಣ್ಣ, ವಿಶ್ವನಾಥ, ರಾಜಣ್ಣ, ಜಹೀರ್, ಕೋಘಟ್ಟ ರಾಜಣ್ಣ, ಹರೀಶ್, ಗಾಯಿತ್ರಿರಾಜು ಇತರರು ಇದ್ದರು.
Comments are closed.