ತುಮಕೂರು: ಕರಾರಸಾ ನಿಗಮವು ವಿದ್ಯಾರ್ಥಿಗಳಿಗೆ ನೀಡುವ ರಿಯಾಯಿತಿ ದರದ ಬಸ್ ಪಾಸ್ ಪಡೆಯಲು ವಿದ್ಯಾರ್ಥಿಗಳು ಪರದಾಡುವಂತಾಗಿದೆ, ಇದೇ ಜೂನ್ 1ರಿಂದ ವಿದ್ಯಾರ್ಥಿ ಬಸ್ ಪಾಸ್ ಗೆ ಅರ್ಜಿ ಸಲ್ಲಿಸುವಂತೆ ಕರಾರಸಾ ನಿಗಮ ಪ್ರಕಟಣೆ ಮೂಲಕ ತಿಳಿಸಿದೆ, ಆದರೆ ಸೇವಾ ಸಿಂಧು ಪೋರ್ಟಲ್ನಲ್ಲಿ ಹತ್ತಾರು ಅಡೆತಡೆ ಎದುರಾಗುತ್ತಿದೆ, ಈ ಅಡೆತಡೆಗಳಿಗೆ ಪರಿಹಾರ ಸಿಗದೆ ವಿದ್ಯಾರ್ಥಿಗಳು ಬಸ್ ಪಾಸ್ ಅರ್ಜಿ ಸಲ್ಲಿಸಲು ಪರದಾಡುವಂತಾಗಿದೆ.
ಪಾಸ್ ವರ್ಡ್ ಕಿರಿಕ್!: ಸೇವಾಸಿಂಧು ಪೋರ್ಟಲ್ ನಲ್ಲಿ ವಿದ್ಯಾರ್ಥಿಗಳು ಲಾಗ್ ಇನ್ ಆಗಲು ಪಾಸ್ ವರ್ಡ್ ಬದಲಾಯಿಸುವಂತೆ ಸೂಚನೆ ಬರುತ್ತಿದೆ, ಕಳೆದ ವರ್ಷ ವಿದ್ಯಾರ್ಥಿಗಳು ಬಸ್ ಪಾಸ್ ಅರ್ಜಿ ಸಲ್ಲಿಸುವಾಗ ನೀಡಿದ್ದ ಪಾಸ್ ವರ್ಡ್ ತೆಗೆದು ಹೊಸ ಪಾಸ್ ಪಾರ್ಡ್ ಹಾಕಬೇಕು, ಇದೊಂದು ಅಸಂಬದ್ಧ ಪ್ರಕ್ರಿಯೆಯಾಗಿದೆ, ಹಿಂದಿನ ವರ್ಷದ ಪಾಸ್ ವರ್ಡ್ ಬಹುತೇಕ ವಿದ್ಯಾರ್ಥಿಗಳಿಗೆ ನೆನಪಿರುವುದಿಲ್ಲ, ಜೊತೆಗೆ ವಿದ್ಯಾರ್ಥಿಗಳು ಸೈಬರ್ ಸೆಂಟರ್ ಹಾಗೂ ಒನ್ ಸೆಂಟರ್ ಗಳಲ್ಲಿ ಅರ್ಜಿ ಸಲ್ಲಿಸಿರುತ್ತಾರೆ, ಆ ಸೈಬರ್ ಹಾಗೂ ಒನ್ ಸೆಂಟರ್ ನವರು ಏನು ಪಾಸ್ ವರ್ಡ್ ಕೊಟ್ಟಿರುತ್ತಾರೆ ಎಂಬುದು ವಿದ್ಯಾರ್ಥಿಗಳಿಗೆ ಗೊತ್ತಿರುವುದಿಲ್ಲ, ಇದರಿಂದಾಗಿ ಅರ್ಜಿ ಸಲ್ಲಿಕೆ ಸಾಧ್ಯವಾಗುತ್ತಿಲ್ಲ, ಕಳೆದ ವರ್ಷ ಈ ಪಾಸ್ ವರ್ಡ್ ಚೇಂಜ್ ಮಾಡುವ ಕಿರಿಕಿರಿ ಇರಲಿಲ್ಲ.
ಸೇವೇಗೆ ಲಭ್ಯವಿಲ್ಲ: ವಿದ್ಯಾರ್ಥಿಗಳು ಹೇಗೋ ಪರದಾಡಿ ಪಾಸ್ ವರ್ಡ್ ಬದಲಾಯಿಸಿದರೂ ಅರ್ಜಿ ಸಲ್ಲಿಕೆ ಸಾಧ್ಯವಾಗುತ್ತಿಲ್ಲ, ಸೇವಾಸಿಂಧು ಪೋರ್ಟಲ್ ಪುಟ ತೆರೆದು ಕೆ ಎಸ್ ಆರ್ ಟಿ ಸಿ ವಿದ್ಯಾರ್ಥಿ ಬಸ್ ಪಾಸ್ ಆಪ್ಷನ್ ಮೇಲೆ ಕ್ಲಿಕ್ ಮಾಡುತ್ತಿದ್ದಂತೆ ಈ ಸೇವೆ ಮುಂದಿನ ಶೈಕ್ಷಣಿಕ ವರ್ಷದ ವರೆಗೆ ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ ಎಂದು ಬರುತ್ತಿದೆ.
ಉದ್ದೇಶ ಪೂರ್ವಕ ಅಡ್ಡಿ: ಮೇಲಿನ ಎರಡೂ ತಾಂತ್ರಿಕ ತೊಂದರೆಯನ್ನು ಸೇವಾಸಿಂಧು ಪೋರ್ಟಲ್ ನಲ್ಲಿ ಉದ್ದೇಶ ಪೂರ್ವಕವಾಗಿ ಸೃಷ್ಟಿ ಮಾಡಲಾಗಿದೆ, ಇದರ ಹಿಂದೆ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಸೇರಿದಂತೆ ಒನ್ ಸೆಂಟರ್ ಗಳಿಗೆ ಅನುಕೂಲ ಮಾಡಿಕೊಡುವ ದುರುದ್ದೇಶ ಅಡಗಿದೆ ಎನ್ನುವುದು ವಿದ್ಯಾರ್ಥಿಗಳ ಆರೋಪ, ಏಕೆಂದರೆ ಮೇಲಿನ ಎರಡೂ ತಾಂತ್ರಿ ತೊಂದರೆಗಳು ಒನ್ ಸೆಂಟರ್ಗಳಲ್ಲಿ ಆಗುತ್ತಿಲ್ಲ, ಅಲ್ಲಿ ಸರಾಗವಾಗಿ ಅರ್ಜಿ ಸಲ್ಲಿಕೆಯಾಗುತ್ತಿದೆ.
ವಿದ್ಯಾರ್ಥಿಗಳಿಗೆ ವಂಚನೆ: ಕಳೆದ ವರ್ಷವೂ ಇದೇ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಸಾರಿಗೆ ನಿಗಮವು ತಪ್ಪು ಯುಆರ್ ಎಲ್ ನೀಡಿ ವಂಚನೆ ಮಾಡಿತ್ತು, ಈ ಬಾರಿ ಪಾಸ್ ವರ್ಡ್ ಕಿರಿಕಿರಿ ಮೂಲಕ ಸಾರಿಗೆ ನಿಗಮ ಹಾಗೂ ಇಡಿಸಿಎಸ್ ನಿರ್ದೇಶನಾಲಯ (ಸೇವಾಸಿಂಧು) ವಿದ್ಯಾರ್ಥಿಗಳಿಗೆ ವಂಚನೆ ಮಾಡುತ್ತಿದೆ, ವಿದ್ಯಾರ್ಥಿಗಳು ತಾವೇ ಮೊಬೈಲ್ ಫೋನ್ ಅಥವಾ ಲ್ಯಾಪ್ ಟಾಪ್ ಮೂಲಕ ಉಚಿತವಾಗಿ ಅರ್ಜಿ ಸಲ್ಲಿಸಬಹುದು, ಆದರೆ ಮೇಲ್ಕಂಡ ತಾಂತ್ರಿಕ ತೊಂದರೆಗಳಿಂದ ವಿದ್ಯಾರ್ಥಿಗಳು ಉಚಿತವಾಗಿ ಅರ್ಜಿ ಹಾಕಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಅನಿವಾರ್ಯವಾಗಿ ಒನ್ ಸೆಂಟರ್ ಗಳಿಗೆ ಹೋಗಿ 100, 150 ರೂ. ಕೊಟ್ಟು ಅರ್ಜಿ ಸಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ವಿದ್ಯಾರ್ಥಿಗಳ ಆಗ್ರಹ: ಕಳೆದ ವರ್ಷದಂತೆಯೇ ವಿದ್ಯಾರ್ಥಿಗಳು ಮೊಬೈಲ್ ಮೂಲಕ ಅರ್ಜಿ ಸಲ್ಲಿಸುವಂತೆ ಸೇವಾಸಿಂಧು ಪೋರ್ಟಲ್ ಅನ್ನು ಬಳಕೆದಾರ ಸ್ನೇಹಿಯಾಗಿ ರೂಪಿಸಬೇಕು, ಪಾಸ್ ವರ್ಡ್ ಚೇಂಜ್ ನಂತಹ ಅನಗತ್ಯ ಹಂತಗಳನ್ನು ತೆಗೆಯಬೇಕು ಎನ್ನುವುದು ವಿದ್ಯಾರ್ಥಿಗಳ ಆಗ್ರಹವಾಗಿದೆ.
Comments are closed.