ಕುಣಿಗಲ್: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ ಗೆಲುವಿಗೆ ಬಿಜೆಪಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಪಟ್ಟಣದ ಹುಚ್ಚ ಮಾಸ್ತಿಗೌಡ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.
ಹುಚ್ಚಮಾಸ್ತಿ ಗೌಡ ವೃತ್ತದಲ್ಲಿ ಪ್ರಧಾನಿ ಮೋದಿ ಭಾವಚಿತ್ರಕ್ಕೆ ಪುಷ್ಟಾರ್ಚನೆ, ಹಾಲಿನ ಅಭಿಷೇಕ ನೆರವೇರಿಸಿ, ಬಸ್ ನ ಪ್ರಯಾಣಿಕರಿಗೆ ಸಾರ್ವಜನಿಕರಿಗೆ ಮೈಸೂರು ಪಾಕ್ ವಿತರಿಸಿ ಸಂಭ್ರಮಿಸಿದರು, ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಚಿವ, ಜೆಡಿಎಸ್ ವರಿಷ್ಠ ಡಿ.ನಾಗರಾಜಯ್ಯ, ಜೆಡಿಎಸ್, ಬಿಜೆಪಿ ಮುಖಂಡರು ಕಾರ್ಯಕರ್ತರು ಒಗ್ಗಟ್ಟಿನ, ಒಮ್ಮತದ ಪ್ರಯತ್ನದ ಫಲವಾಗಿ ತಾಲೂಕಿನಲ್ಲಿ ಮೈತ್ರಿ ಅಭ್ಯರ್ಥಿಗೆ 20 ಸಾವಿರಕ್ಕೂ ಹೆಚ್ಚು ಲೀಡ್ನ ಮತಗಳು ಬಂದಿವೆ, ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ ಅವರ ವೈಯಕ್ತಿಕ ವರ್ಚಸ್ಸು ಗೆಲುವಿಗೆ ಕಾರಣವಾಗಿದೆ, ಮಾಜಿ ಸಂಸದ ಡಿ.ಕೆ.ಸುರೇಶ್, ಶಾಸಕ ಡಾ.ರಂಗನಾಥ್ ಅವರ ತಾಲೂಕು ವಿರೋಧಿ ನಡೆಯಿಮದಾಗಿ ಬೇಸತ್ತ ಜನ ಸಂಸದರ ವಿರುದ್ಧವಾಗಿ ಮತ ಚಲಾವಣೆ ಮಾಡಿದ್ದಾರೆ, ಸಂಸದ ಡಿ.ಕೆ.ಸುರೇಶ್ ಗೆ ತಾಲೂಕಿನ ಜನರು ಮೂರು ಬಾರಿ, ಶಾಸಕ ಡಾ.ರಂಗನಾಥ್ ಗೆ ಎರಡು ಬಾರಿ ತಾಲೂಕಿನ ಜನ ಮತ ನೀಡಿದರೂ ತಾಲೂಕಿಗೆ ನೀರಾವರಿ ವಿಷಯದಲ್ಲಿ ಅನ್ಯಾಯ ಮಾಡಿದ್ದಾರೆ, ಈಗ ಆಯ್ಕೆಯಾಗಿರುವ ನೂತನ ಸಂಸದ ಡಾ.ಮಂಜುನಾಥ ತಾಲೂಕಿನ ನೀರಾವರಿ ಸಮಸ್ಯೆ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಲಿದ್ದಾರೆ ಎಂದರು.
ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಮಾತನಾಡಿ, ತಾಲೂಕಿನಲ್ಲಿ ಜೆಡಿಎಸ್, ಬಿಜೆಪಿ ಶಕ್ತಿ ಏನೆಂದು ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆಯ ಫಲಿತಾಂಶ ತೋರಿಸಿ ಕೊಟ್ಟಿದ್ದು, ತಾಲೂಕಿನ ರಾಜಕಾರಣದಲ್ಲಿ ದಾಸೇಗೌಡರ ಕುಟುಂಬ ಒಂದಾದರೆ ಏನಾಗುತ್ತದೆ ಎಂದು ಕಾಂಗ್ರೆಸ್ ನವರಿಗೆ ತೋರಿಸಿ ಕೊಟ್ಟಿದ್ದೇವೆ, ಪ್ರಧಾನಿ ಮೋದಿಯವರ ವರ್ಚಸ್ಸು, ಡಾ.ಮಂಜುನಾಥರವರ ವರ್ಚಸ್ಸು ಈ ಫಲಿತಾಂಶಕ್ಕೆ ಕಾರಣ, ಹಿಂದಿನ ಸಂಸದ,ಹಾಲಿ ಶಾಸಕರು ತಾಲೂಕಿಗೆ ನೀರಾವರಿ ಅನ್ಯಾಯ ಮಾಡಿದ್ದು ದೊಡ್ಡಕೆರೆ ಅಚ್ಚುಕಟ್ಟು ಪ್ರದೇಶಕ್ಕೆ 17 ವರ್ಷದಿಂದ ನೀರು ಬಿಟ್ಟಿಲ್ಲ, ತಾಲೂಕಿಗೆ ಅನ್ಯಾಯ ಮಾಡಿ ನೆಲಮಂಗಲಕ್ಕೆ ನೀರು ಹರಿಸಲು ಮುಂದಾಗಿದ್ದು, ಇದೀಗ ಲಿಂಕ್ ಕೆನಾಲ್ ಮೂಲಕ ಮತ್ತೊಂದು ರೀತಿಯ ಅನ್ಯಾಯಕ್ಕೆ ಮುಂದಾಗಿದ್ದು ನೂತನ ಸಂಸದ ಡಾ.ಮಂಜುನಾಥ ಅವರಿಂದ ತಾಲೂಕಿಗೆ ಆಗಿರುವ ಅನ್ಯಾಯ ಸರಿಪಡಿಸಲು ಅಗತ್ಯ ಕ್ರಮಕೈಗೊಳ್ಳುವ ಜೊತೆಯಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಹೊಸ ಕಾರ್ಯಕ್ರಮದ ಅನುಷ್ಠಾನಕ್ಕೆ ಶ್ರಮಿಸಲಾಗುವುದು ಎಂದರು.
ತಾಲೂಕಿನಾದ್ಯಂತ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದು ಕೆಲ ಕಾರ್ಯಕರ್ತರು ಆಯಾ ಗ್ರಾಮದ ಗ್ರಾಮ ದೇವತೆ ದೇವಾಲಯದ ಮುಂದೆ 51,101,108 ಈಡುಗಾಯಿ ಹೊಡೆದು ಮೈತ್ರಿ ಅಭ್ಯರ್ಥಿ ಗೆಲುವು ಸಂಭ್ರಮಿಸಿದರು. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರಸ್ ಅಭ್ಯರ್ಥಿಯಾದ ಶಾಸಕ ಡಾ.ರಂಗನಾಥ್ 25 ಸಾವಿರಕ್ಕೂ ಹೆಚ್ಚು ಮತಪಡೆದಿದ್ದರೆ, ಲೋಕಸಭೆ ಚುನಾವಣೆಯಲ್ಲಿ ಮೈತ್ರಿಇಭ್ಯರ್ಥಿ 97257 ಪಡೆದಿದ್ದು ಕಾಂಗ್ರೆಸ್ ಅಭ್ಯರ್ಥಿಗೆ 73281 ಮತ ಚಲಾವಣೆಯಾಗಿ ಕಾಂಗ್ರೆಸ್ ಅಭ್ಯರ್ಥಿಗಿಂತ 23,876 ಮತ ಹೆಚ್ಚಿನದಾಗಿ ಮೈತ್ರಿಇಭ್ಯರ್ಥಿ ಗಳಿಸುವ ಮೂಲಕ ಮೈತ್ರಿಯ ಶಕ್ತಿ ಏನೆಂದು ತೋರಿಸಲಾಗಿದೆ ಎಂದು ಮೈತ್ರಿ ಮುಖಂಡರು ಹೇಳಿದ್ದಾರೆ.
ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್, ಮೈತ್ರಿ ಮುಖಂಡರಾದ ಸಂತೋಶ್.ಜಿ, ಕೃಷ್ಣ, ಇ.ಮಂಜು, ನವೀನ್, ಗೋಪಿ, ಕೃಷ್ಣೇಗೌಡ, ಸುರೇಶ, ಶ್ರೀನಿವಾಸ, ಗಿರೀಶ್, ವೆಂಕಟೇಶ, ಪ್ರಮೋದ, ಶಿವಣ್ಣ, ಲೋಕೇಶ, ರಮೇಶ ಇತರರು ಇದ್ದರು.
ವೈದ್ಯರ ಕಾರ್ಯವೈಖರಿ ಮೇಲೆ ಕಣ್ಣು!
ಕುಣಿಗಲ್: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿ ಹೃದ್ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ ಎರಡುವರೆ ಲಕ್ಷಕ್ಕೂ ಅಧಿಕ ಮತಗಳಿಂದ ಆಯ್ಕೆಯಾಗುವ ಮೂಲಕ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ.
ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿರುವ ಕೀಲು ಮತ್ತು ಮೂಳೆ ರೋಗ ತಜ್ಞ ಡಾ.ರಂಗನಾಥ್ ಅವರು ವೈದ್ಯರೆ, ಹೀಗಾಗಿ ನೂತನ ಲೋಕಸಭಾ ಸದಸ್ಯ ವೈದ್ಯ ಆಯ್ಕೆಯಾಗುವ ಮೂಲಕ ಕುಣಿಗಲ್ ಕ್ಷೇತ್ರಕ್ಕೆ ಸಂಸದರು ಹಾಗೂ ಶಾಸಕರು ಇಬ್ಬರು ವೈದ್ಯರಾಗಿದ್ದಾರೆ, ಇದು ಈ ತಾಲೂಕಿನ ವಿಶೇಷವಾಗಿದೆ, ಮುಂದಿನ ದಿನಗಳಲ್ಲಿ ಇಬ್ಬರು ವೈದ್ಯ ಶಾಸಕ, ಸಂಸದರಿಂದ ತಾಲೂಕಿನ ಅಭಿವೃದ್ಧಿ ಹಾಗೂ ತಾಲೂಕಿನ ಆರೋಗ್ಯ ಕ್ಷೇತ್ರದ ಸಮಸ್ಯೆ ಎಷ್ಟರ ಮಟ್ಟಿಗೆ ಬಗೆಹರಿಯುತ್ತದೆ ಎಂಬುದು ಕಾದು ನೋಡಬೇಕಾಗಿದೆ.
Comments are closed.