ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಪಡೆದ ಎನ್ಡಿಎ ಅಭ್ಯರ್ಥಿ ವಿ.ಸೋಮಣ್ಣ ಅವರು ತಮ್ಮ ಗೆಲುವಿಗೆ ಸಹಕರಿಸಿದ ಮತದಾರರಿಗೆ, ಶ್ರಮಿಸಿದ ಬಿಜೆಪಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ತಮ್ಮ ಗೆಲುವನ್ನು ಸಮರ್ಪಿಸುವುದಾಗಿ ಹೇಳಿದರು.
ಮಂಗಳವಾರ ಮತ ಎಣಿಕೆ ಮುಗಿದು ತಮ್ಮ ಗೆಲುವು ಘೋಷಣೆಯಾದ ನಂತರ ನಗರದ ಬಿಜೆಪಿ ಹಾಗೂ ಜೆಡಿಎಸ್ ಕಚೇರಿಗೆ ಭೇಟಿ ನೀಡಿದ ವಿ.ಸೋಮಣ್ಣ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರ ಅಭಿನಂದನೆ ಸ್ವೀಕರಿಸಿ, ಧನ್ಯವಾದ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಸೋಮಣ್ಣ, ತಮ್ಮ ಗೆಲುವು ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ನಂಬಿಕೆಯ ಗೆಲುವು, ಎರಡೂ ಪಕ್ಷದವರು ಒಟ್ಟಾಗಿ ಕೆಲಸ ಮಾಡಿದ್ದರ ಫಲ ಮತದಾರರ ವಿಶ್ವಾಸ ಪಡೆದು ಗೆಲುವು ಸಾಧ್ಯವಾಯಿತು, ಕೂಡಿ ಬಾಳಿದರೆ ಎಲ್ಲವೂ ಸಾಧ್ಯವಾಗುತ್ತದೆ, ಎಲ್ಲವೂ ಸಿಗುತ್ತದೆ ಎಂಬುದಕ್ಕೆ ಈ ಚುನಾವಣೆಯಲ್ಲಿ ನಿಮ್ಮೊಡನೆ ಕೆಲಸ ಮಾಡಿದ ಅನುಭವ ನನಗಾಗಿದೆ, ಮುಂದೆ ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಒಂದಾಗಿ ಕೆಲಸ ಮಾಡೋಣ ಎಂದು ಹೇಳಿದರು.
ಶಾಸಕ ಸುರೇಶ್ಗೌಡ ಮಾತನಾಡಿ, ತುಮಕೂರು ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ 1.8 ಲಕ್ಷಕ್ಕೂ ಅಧಿಕ ದಾಖಲೆ ಮತಗಳಿಂದ ಜಯ ಗಳಿಸಿದೆ, ಇದೊಂದು ಐತಿಹಾಸಿದ ಗೆಲುವು ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಸೇರಿದಂತೆ ಹಲವಾರು ಮುಖಂಡರು, ಅಪಾರ ಸಂಖ್ಯೆಯ ಕಾರ್ಯಕರ್ತರು ಹಾಜರಿದ್ದು ಸೋಮಣ್ಣರನ್ನು ಅಭಿನಂದಿಸಿದರು.
ಜೆಡಿಎಸ್ ಕಚೇರಿಗೆ ಭೇಟಿ
ನಂತರ ಜಿಲ್ಲಾ ಜೆಡಿಎಸ್ ಕಚೇರಿಗೆ ಭೇಟಿ ನೀಡಿದ ನೂತನ ಸಂಸದ ವಿ.ಸೋಮಣ್ಣ ಅವರನ್ನು ಪಕ್ಷದ ಶಾಸಕರು, ಮಾಜಿ ಶಾಸಕರು, ಮುಖಂಡರು ಸ್ವಾಗತಿಸಿ ಬರಮಾಡಿಕೊಂಡರು.
ಈ ಚುನಾವಣೆಯಲ್ಲಿ ಜೆಡಿಎಸ್ ನವರು ನೀಡಿದ ಸಹಕಾರ, ಗೆಲುವಿಗಾಗಿ ಹಾಕಿದ ಶ್ರಮ, ಕಾರ್ಯ ವೈಖರಿಯನ್ನು ಶ್ಲಾಸಿದ ವಿ.ಸೋಮಣ್ಣ, ನನ್ನ ಜೀವ ಇರುವವರೆಗೂ ಜೆಡಿಎಸ್ ನವರ ಸಹಕಾರ ಮರೆಯುವುದಿಲ್ಲ ಎಂದು ಹೇಳಿದರು.
ಶಾಸಕರಾದ ಎಂ.ಟಿ.ಕೃಷ್ಣಪ್ಪ, ಸಿ.ಬಿ.ಸುರೇಶ್ ಬಾಬು, ಮಾಜಿ ಶಾಸಕರಾದ ಎಂ.ವಿ.ವೀರಭದ್ರಯ್ಯ, ಸುಧಾಕರಲಾಲ್, ಹೆಚ್.ನಿಂಗಪ್ಪ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜ್ ಮೊದಲಾದವರು ಈ ವೇಳೆ ಹಾಜರಿದ್ದರು.
Comments are closed.