ತುಮಕೂರು: ಬಿದರಕಟ್ಟೆಯಲ್ಲಿ ನಿರ್ಮಾಣವಾಗಿರುವ ವಿಶ್ವ ವಿದ್ಯಾಲಯದ ನೂತನ ಕ್ಯಾಂಪಸ್ ಜ್ಞಾನ ಸಿರಿಯಲ್ಲಿ 20,000 ಗಿಡಗಳನ್ನು ನೆಡುವ ಗುರಿ ಹೊಂದಿದ್ದು ಮುಂಬರುವ ದಿನಗಳಲ್ಲಿ ಪರಿಸರ ಸ್ನೇಹಿ ಕ್ಯಾಂಪಸ್ ಕಾಣಬಹುದು ಎಂದು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯದ ಬಿದರಕಟ್ಟೆ ಕ್ಯಾಂಪಸ್ ನಲ್ಲಿ ಸ್ನಾತಕೋತ್ತರ ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಬುಧವಾರ ಭೂ ಪುನಃಸ್ಥಾಪನೆ, ಮರು ಭೂಮೀಕರಣ ಮತ್ತು ಬರ ಸ್ಥಿತಿ ಸ್ಥಾಪಕತ್ವ ಎಂಬ ಘೋಷವಾಕ್ಯ ದೊಂದಿಗೆ ಆಯೋಜಿಸಿದ್ದ ವಿಶ್ವಪರಿಸರ ದಿನ ಆಚರಣೆಯನ್ನುಗಿಡ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ವಿಪ್ರೋ ಸಂಸ್ಥೆಯು ವಿಶ್ವ ವಿದ್ಯಾಲಯದ ಸಹಯೋಗದೊಂದಿಗೆ ಜ್ಞಾನಸಿರಿ ಕ್ಯಾಂಪಸ್ ನಲ್ಲಿ ಜೀವ ವೈವಿಧ್ಯ ಅಭಯಾರಣ್ಯ ಸ್ಥಾಪಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದು, ಮುಂದಿನ ವಾರದಲ್ಲಿ ಕ್ಯಾಂಪಸ್ ನ ವಿಜ್ಞಾನ ಕೇಂದ್ರದಲ್ಲಿ 400 ಗಿಡಗಳನ್ನು ನೆಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಕೃತಿಯೊಂದಿಗೆ ಜ್ಞಾನ ಪರಿಕಲ್ಪನೆಯಲ್ಲಿ ಹಸಿರು ಗ್ರಂಥಾಲಯ ನಿರ್ಮಿಸುವ ಯೋಜನೆ ಪ್ರಗತಿಯಲ್ಲಿದ್ದು, ಮಾಲಿನ್ಯ ರಹಿತ ಕ್ಯಾಂಪಸ್ ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ವೃಕ್ಷ ಮಿತ್ರ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಸಿದ್ದಪ್ಪ ಅವರ ನೇತೃತ್ವದಲ್ಲಿ 20 ಬೇವಿನ ಸಸಿಗಳನ್ನು ನೆಡಲಾಯಿತು, ಮುಂಬರುವ ದಿನಗಳಲ್ಲಿ ವಿವಿಯ ನೂತನ ಕ್ಯಾಂಪಸ್ ಗೆ 20,000 ಸಸಿ ಪೂರೈಸುವುದಾಗಿ ಭರವಸೆ ನೀಡಿದರು.
ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್ ಕೆ., ಕಾರ್ಯಪಾಲಕ ಅಭಿಯಂತರ ಸುರೇಶ್.ಜಿ.ಆರ್., ಸ್ನಾತಕೋತ್ತರ ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಯೋಜಕ ಡಾ.ದ್ವಾರಕಾನಾಥ್.ವಿ, ವಿಜ್ಞಾನ ನಿಕಾಯದ ಡೀನ್ ಪ್ರೊ.ಮನೋಹರ ಶಿಂಧೆ ಇನ್ನಿತರರು ಭಾಗವಹಿಸಿದ್ದರು.
Comments are closed.