ಮಕ್ಕಳ ಶಿಕ್ಷಣ ಬಗ್ಗೆ ಪೋಷಕರು ಕಾಳಜಿ ವಹಿಸಲಿ: ಡೀಸಿ

ಪ್ರತಿಷ್ಠಿತ ಶಾಲೆಗೆ 35 ಪ್ರತಿಭಾವಂತ ವಿದ್ಯಾರ್ಥಿಗಳ ಆಯ್ಕೆ

45

Get real time updates directly on you device, subscribe now.


ತುಮಕೂರು: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅರ್ಹತಾ ಪರೀಕ್ಷೆ ಮೂಲಕ ಪ್ರತಿಷ್ಠಿತ ಶಾಲೆಗಳ 6ನೇ ತರಗತಿ ಪ್ರವೇಶಕ್ಕಾಗಿ 35 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಆಯ್ಕೆಯಾದ ವಿದ್ಯಾರ್ಥಿಗಳು ಪ್ರತಿಷ್ಠಿತ ಶಾಲೆಗಳಲ್ಲಿ ಶಿಕ್ಷಣ ಪಡೆದು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಕ್ಕಳಿಗೆ ಶುಭ ಹಾರೈಸಿದರು.
ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಬುಧವಾರ ಸಂಜೆ ಪ್ರತಿಷ್ಠಿತ ಶಾಲೆಗೆ ಆಯ್ಕೆಯಾಗಿರುವ ಪ್ರತಿಭಾವಂತ ಮಕ್ಕಳು ಹಾಗೂ ಅವರ ಪೋಷಕರೊಂದಿಗೆ ಸಭೆ ನಡೆಸಿ ಮಾತನಾಡಿ, ಪ್ರತಿಷ್ಠಿತ ಶಾಲೆಗಳಿಗೆ ಪ್ರವೇಶ ಕಲ್ಪಿಸಲು ಶೇಕಡ 60 ಕ್ಕಿಂತ ಹೆಚ್ಚಿನ ಅಂಕ ಗಳಿಸಿ 5ನೇ ತರಗತಿ ಉತ್ತೀರ್ಣರಾದ ಮಕ್ಕಳನ್ನು ಅರ್ಹತಾ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗಿದೆ, ವಿಶೇಷ ವರ್ಗದ 4 ಹಾಗೂ ಪರಿಶಿಷ್ಟ ಜಾತಿಯ 31 ವಿದ್ಯಾರ್ಥಿಗಳು ಸೇರಿ ಒಟ್ಟು 35 ವಿದ್ಯಾರ್ಥಿಗಳು ಪಡೆದಿರುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಆರು ಪ್ರತಿಷ್ಠಿತ ಶಾಲೆಗಳಲ್ಲಿ ಶೇಕಡ 50 ರಷ್ಟು ಬಾಲಕ ಹಾಗೂ ಶೇಕಡ 50ರಷ್ಟು ಬಾಲಕಿಯರಿಗೆ ಪ್ರವೇಶ ಕಲ್ಪಿಸಲಾಗುವುದು, ಪೋಷಕರು ತಮ್ಮ ಮಕ್ಕಳ ದಾಖಲಾತಿಗೆ ಸಮೀಪದ ಶಾಲೆ ಆಯ್ಕೆ ಮಾಡಿ ಇನ್ನೆರಡು ದಿನಗಳೊಳಗಾಗಿ ಮನವಿ ಸಲ್ಲಿಸಿದಲ್ಲಿ ಆದ್ಯತೆ ಮೇಲೆ ಪ್ರವೇಶಾವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಆಯ್ಕೆಯಾದ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಶಾಲಾ ಪಾಠಗಳನ್ನು ನಿರಂತರವಾಗಿ ಅಭ್ಯಾಸ ಮಾಡಿ ಉನ್ನತ ಸ್ಥಾನ ತಲುಪಬೇಕು, ಮುಂದಿನ 20 ವರ್ಷಗಳ ಬಳಿಕ ಇದೇ ಜಿಲ್ಲಾಧಿಕಾರಿಗಳ ಸ್ಥಾನದಲ್ಲಿ ಈ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನೋಡಲು ನಾನು ಬಯಸುತ್ತೇನೆ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾಲಹರಣ ಮಾಡದೆ ನಿರಂತರ ಅಭ್ಯಾಸ ಮಾಡಬೇಕು ಎಂದು ತಿಳಿಸಿದರಲ್ಲದೆ, ಬಡತನದಲ್ಲಿ ಹುಟ್ಟಿ ತಮ್ಮ ಕಠಿಣ ಪರಿಶ್ರಮದಿಂದ ದೇಶದ ಅತ್ಯುನ್ನತ ರಾಷ್ಟ್ರಪತಿ ಸ್ಥಾನಕ್ಕೇರಿದ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಬಗ್ಗೆ ಮಕ್ಕಳಿಗೆ ತಿಳಿಸುತ್ತಾ, ಅವರ ಪರಿಶ್ರಮದ ಹಾದಿಯನ್ನು ಮಕ್ಕಳು ಅನುಸರಿಸಬೇಕೆಂದು ಉತ್ತೇಜನ ನುಡಿಗಳನ್ನಾಡಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಮಾತನಾಡಿ, ಜಿಲ್ಲೆಯಲ್ಲಿ ತುಮಕೂರು ನಗರದ ಬಟವಾಡಿಯ ಚೇತನ ವಿದ್ಯಾ ಮಂದಿರ, ಶಿರಾ ರಸ್ತೆ ಶ್ರೀದೇವಿ ವಿದ್ಯಾ ಮಂದಿರ ಹಾಗೂ ಡಾನ್ ಬಾಸ್ಕೋ ಶಾಲೆ, ಬನಶಂಕರಿಯ ಎಸ್ ವಿ ಎಸ್ ನರ್ಸರಿ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಬೆಳಗುಂಬದ ಕೆಂಪೇಗೌಡ ವಸತಿ ಶಾಲೆ ಹಾಗೂ ಕೊರಟಗೆರೆಯ ರವೀಂದ್ರ ಭಾರತಿ ವಿದ್ಯಾಮಂದಿರ ಸೇರಿ 6 ಶಾಲೆಗಳನ್ನು ಪ್ರತಿಷ್ಠಿತ ಶಾಲೆಗಳೆಂದು ಗುರುತಿಸಲಾಗಿದೆ, ಪ.ಜಾತಿಗೆ ಸೇರಿದ 31 ವಿದ್ಯಾರ್ಥಿಗಳು ಸೇರಿದಂತೆ ಪ್ರತಿಷ್ಠಿತ ಶಾಲೆಗಳ ಪ್ರವೇಶಕ್ಕೆ ಸರ್ಕಾರದಿಂದ ವಿಶೇಷ ವರ್ಗವೆಂದು ಪರಿಗಣಿಸಲಾದ ವಿಕಲಚೇತನ ಹೊಂದಿದ, ಕೋವಿಡ್- 19 ಮುಂತಾದ ಪ್ರಕೃತಿ ವಿಕೋಪದಿಂದ ತಂದೆ ತಾಯಿ ಕಳೆದುಕೊಂಡ, ಸಫಾಯಿ ಕರ್ಮಚಾರಿಗಳ, ದೇವದಾಸಿಯರ, ಸಿಂಗಲ್ ಫ್ಯಾಮಿಲಿ, ಯೋಜನಾ ನಿರಾಶ್ರಿತರ, ಮಾಜಿ ಸೈನಿಕರ, ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಮಕ್ಕಳು, ಕೃಷಿ ಕಾರ್ಮಿಕರ, ಸಾಲ ಬಾಧೆಯಿಂದ ಆತ್ಮಹತ್ಯೆಗೆ ಗುರಿಯಾದವರ, ದೌರ್ಜನ್ಯದಲ್ಲಿ ನೊಂದವರ, ಜೀತ ವಿಮುಕ್ತರ, ಅಲೆಮಾರಿ ಜನಾಂಗದ 4 ಮಕ್ಕಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಯಟ್ ಪ್ರಾಚಾರ್ಯ ಮಂಜುನಾಥ್, ಪ್ರತಿಷ್ಠಿತ ಶಾಲೆಗೆ ಆಯ್ಕೆಯಾದ ಮಕ್ಕಳು ಹಾಗೂ ಅವರ ಪೋಷಕರು ಸೇರಿದಂತೆ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!