ನಮ್ಮ ಭೂಮ್ತಾಯಿ ರಕ್ಷಣೆ ನಮ್ಮೆಲ್ಲರ ಹೊಣೆ

ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಪವಿತ್ರ ಕರೆ

22

Get real time updates directly on you device, subscribe now.


ತುಮಕೂರು: ಪರಿಸರ ಸಂರಕ್ಷಣೆ ಎಂದರೆ ಕೇವಲ ಗಿಡ, ಮರಗಳನ್ನು ನಡೆವುದಲ್ಲ, ಭೂಮಿಯಲ್ಲಿ ಕೊಳೆಯದ ತ್ಯಾಜ್ಯವನ್ನು ಭೂ ತಾಯಿಯ ಒಡಲು ಸೇರದಂತೆ ಆ ಮೂಲಕ ಗಾಳಿ, ನೀರು, ಮಣ್ಣು ಕುಷಿತವಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ವಲಯ ಅರಣ್ಯಾಧಿಕಾರಿ ಪವಿತ್ರ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕೆ ಎಸ್ ಆರ್ ಟಿ ಸಿ ಕಾರ್ಯಾಗಾರ ಘಟಕ- 2 ರಲ್ಲಿ ಕನ್ನಡ ಕ್ರಿಯಾ ಸಮಿತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಕೆ ಎಸ್ ಆರ್ ಟಿ ಸಿ ಯಿಂದಲೂ ಸಾಕಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತದೆ, ಇದರ ಸೂಕ್ತ ನಿರ್ವಹಣೆಯಿಂದ ಪರಿಸರಕ್ಕೆ ಹೆಚ್ಚು ಕೊಡುಗೆ ನೀಡಬಹುದು, ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಕಸ ಉತ್ಪತ್ತಿಯಾಗುತ್ತದೆ, ಇದನ್ನು ಪರಿಸರಕ್ಕೆ ಹಾನಿಯಾಗದ ರೀತಿ ವಿಂಗಡಿಸುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.

ಪುರಾಣಗಳ ಪ್ರವಚನಕಾರ ಮುರುಳಿಕೃಷ್ಣ ಮಾತನಾಡಿ, ಮನುಷ್ಯನಿಂದ ಪರಿಸರದ ಮೇಲಿನ ದೌರ್ಜನ್ಯದಿಂದ ನಮ್ಮ ಪರಿಸರದ ಮೇಲೆ ಅಗಾಧ ದುಷ್ಪರಿಣಾಮ ಉಂಟು ಮಾಡಿದೆ, ಇದರ ಪರಿಣಾಮ ರಾಷ್ಟ್ರದ ಪ್ರಮುಖ ನಗರಗಳಲ್ಲಿ 50 ಡಿಗ್ರಿ ಉಷ್ಣಾಂಶ ಉಂಟಾಗಿದೆ, ಅತಿಯಾದ ಕೈಗಾರಿಕೆ ಮತ್ತು ಗಣಿಗಾರಿಕೆಯಿಂದ ಪರಿಸರ ದಿನದಿಂದ ದಿನಕ್ಕೆ ಹೆಚ್ಚು ಮಲೀನವಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಸರಕಾರಗಳು ಮುಂದಾಗಬೇಕು, ಇದರ ಜೊತೆಗೆ ಜನರು ಮರ, ಗಿಡಗಳನ್ನು ಹೊಸದಾಗಿ ಹಾಕದಿದ್ದರೂ ಚಿಂತೆಯಿಲ್ಲ, ಇರುವ ಮರಗಳಿಗೆ ಕೊಡಲಿ ಪೆಟ್ಟು ನೀಡದಂತೆ ಎಚ್ಚರಿಕೆ ವಹಿಸಿದರೆ ಹೆಚ್ಚು ಉಪಯೋಗವಾಗಲಿದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿದ್ದೇಶಗೌಡ ಮಾತನಾಡಿ, ಜೀವ ಸಂಕುಲದ ಒಳಿತಿಗಾಗಿ, ಒಳ್ಳೆಯ ಪರಿಸರಕ್ಕಾಗಿ ಗಿಡ ಮರಗಳನ್ನು ನೆಟ್ಟು ಬೆಳೆಸುವುದರ ಜೊತೆಗೆ ಐಷರಾಮಿ ಜೀವನ ತ್ಯಜಿಸಿ ಸಾರ್ವಜನಿಕ ಸಾರಿಗೆ ಬಳಸಿ, ಪರಿಸರ ಮಾಲಿನ್ಯ ತೆಡೆಯುವ ಕೆಲಸ ಆಗಬೇಕಿದೆ ಎಂದರು.

ಕೆ ಎಸ್ ಆರ್ ಟಿ ಸಿ ಕಾರ್ಯಾಗಾರದ ವ್ಯವಸ್ಥಾಪಕ ಮಂಜುನಾಥ್ ಮಾತನಾಡಿ, ಪರಿಸರ ನಮ್ಮನ್ನು ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿದೆ, ಹಾಗಾಗಿ ನಾವು ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರವನ್ನು ಬಳುವಳಿಯಾಗಿ ನೀಡಬೇಕಾಗಿದೆ, ನಮ್ಮ ನಿಗಮವೂ ಕಡಿಮೆ ಹೊಗೆ ಉಗುಳುವ ವಾಹನಗಳನ್ನು ಓಡಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದೆ, ಅಲ್ಲದೆ ನಿಗಮದ ಖಾಲಿ ಜಾಗಗಳಲ್ಲಿ ಮರಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ ಎಸ್ ಆರ್ ಟಿ ಸಿ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಮಾತನಾಡಿ, ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ, ನಿಗಮದ ಕನ್ನಡ ಕ್ರಿಯಾ ಸಮಿತಿ ಇಂತಹ ಹಲವಾರು ಕಾರ್ಯಕ್ರಮ ಮಾಡುತ್ತಿದೆ, ನಿಗಮವೂ ಕೂಡ ಬಿಎಸ್ 6 ಬಸ್ ಗಳನ್ನು ಹೆಚ್ಚಾಗಿ ಓಡಿಸುತ್ತಿದ್ದು, ಇವು ಕಡಿಮೆ ಹೊಗೆ ಸೂಸುವುದರಿಂದ ಪರಿಸರಕ್ಕೆ ಹೆಚ್ಚಿನ ಹಾನಿಯಾಗುವುದಿಲ್ಲ, ಪರಿಸರ ಸಂರಕ್ಷಣೆ ಕುರಿತು ಮಕ್ಕಳಲ್ಲಿ ಮತ್ತು ಯುವ ಜನತೆಯಲ್ಲಿ ಹೆಚ್ಚಿನ ಅರಿವು ಮೂಡಿಸಬೇಕಿದೆ, ಅಲ್ಲದೆ ಜಲಮೂಲಗಳನ್ನು ರಕ್ಷಿಸುವತ್ತ ಯುವ ಜನರು ಹೆಚ್ಚು ಒತ್ತು ನೀಡುವಂತೆ ಪ್ರೇರೆಪಿಸಬೇಕಿದೆ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಕೆ ಎಸ್ ಆರ್ ಟಿ ಸಿ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವಿ.ಡಿ.ಹನುಮಂತರಾಯಪ್ಪ ಮಾತನಾಡಿ, ನಮ್ಮ ಡಿಪೋ ಆರಂಭಗೊಂಡು 25 ವರ್ಷಗಳಾಗಿದ್ದು,ಅಂದಿನಿಂದ ಕನ್ನಡ ಕ್ರಿಯಾ ಸಮಿತಿ ಹುಟ್ಟಿಕೊಂಡಿದ್ದು, ನಾಡು, ನುಡಿ, ನೆಲ, ಜಲ, ಪರಿಸರದ ವಿಚಾರದಲ್ಲಿ ಸಾಕಷ್ಟು ಕೆಲಸ ಮಾಡಿದೆ, ಜಾಗೃತಿ ಜಾಥಾದಂತಹ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ, ಪ್ರಾಣಿ, ಪಕ್ಷಿ, ಮಾನವರಿಗೆ ಅನುಕೂಲವಾಗುಂತಹ ಮರ ಗಿಡಗಳನ್ನು ನೆಟ್ಟು ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡುವ ಗುರಿ ನಮ್ಮದಾಗಿದೆ ಎಂದರು.

ಸಾಹಿತಿಗಳಾದ ಬಾಪೂಜ, ಮಹದೇವಪ್ಪ, ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವಿ.ಡಿ.ಹನುಮಂತರಾಯಪ್ಪ, ಉಪಾಧ್ಯಕ್ಷ ಮಂಜುನಾಥ್, ಕೆ ಎಸ್ ಆರ್ ಟಿ ಸಿ ನಿಗಮದ ಅಧಿಕಾರಿಗಳಾದ ಆಸೀಫ್ ವುಲ್ಲಾ , ಬಿಟಿಓ ಬಸವರಾಜು, ಆಡಳಿತಾಧಿಕಾರಿ ಬಸವರಾಜು, ಹೊನ್ನಮ್ಮ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!