ಗುಬ್ಬಿ: ಪರಿಸರ ದಿನ ಆಚರಿಸುವುದೆಂದರೆ ಗಿಡ ನೆಡುವುದು ಮಾತ್ರವಲ್ಲ, ನಮ್ಮ ಸುತ್ತ ಮುತ್ತಲಿನ ಪರಿಸರದೊಂದಿಗೆ ಪ್ರೀತಿಯಿಂದ ಬದುಕುವುದು, ಒಳ್ಳೆಯ ಆರೋಗ್ಯ ಪೂರ್ಣ ಆಹಾರ ಸೇವಿಸುವುದು, ಮಳೆ ನೀರನ್ನು ಹಿಡಿದು ಸಂಗ್ರಹಿಸಿ ಬಳಸುವುದು, ಪ್ರಕೃತಿಯೊಂದಿಗೆ ಬದುಕುವುದು ಎಂದು ಕವಿ, ಜೀವಪರ ಚಿಂತಕ ಕೃಷ್ಣಮೂರ್ತಿ ಬಿಳಿಗೆರೆ ತಿಳಿಸಿದರು.
ಗುಬ್ಬಿ ತಾಲ್ಲೂಕು ಕಾಡಶೆಟ್ಟಿಹಳ್ಳಿ ಗ್ರಾಮದ ಜ್ಞಾನಮಲ್ಲಿಕ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಪರಿಸರ ದಿನದ ಪ್ರಯುಕ್ತ ನಡೆದ ಭೂಮಿಯೊಂದು ಮಹಾಬೀಜ- ಕವಿ ಕೃಷ್ಣ ಮೂರ್ತಿ ಬಿಳಿಗೆರೆ ಯವರೊಂದಿಗೆ ಮಾತುಕಥೆ ಕಾರ್ಯಕ್ರಮದಲ್ಲಿ ಮಾತನಾಡಿ, ತಾವು ರಚಿಸಿದ ಪರಿಸರ ಗೀತೆಗಳನ್ನು ಮಕ್ಕಳೊಂದಿಗೆ ಹಾಡುವ ಮೂಲಕ ಪರಿಸರದೊಂದಿಗೆ ಪ್ರೀತಿಯೊಂದಿಗೆ ಬದುಕುವ ಆಶಯವನ್ನು ಮಕ್ಕಳಲ್ಲಿ ಬಿತ್ತುವ ಪ್ರಯತ್ನ ಮಾಡಿದರು, ಕಾಡಶೆಟ್ಟಿಹಳ್ಳಿ ಯ ಸರ್ಕಾರಿ ಶಾಲೆ ಒಂದು ಮಾದರಿ ಶಾಲೆಯಾಗಿದ್ದು ಇಲ್ಲಿನ ಶಿಕ್ಷಕರು ಮಾದರಿ ಶಿಕ್ಷಕರಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತಿ ಸದಸ್ಯ ಕಾಡಶೆಟ್ಟಿಹಳ್ಳಿ ಸತೀಶ್ ಮಾತನಾಡಿ, ಕೃಷ್ಣಮೂರ್ತಿ ಬಿಳಿಗೆರೆ ಅವರ ಮಕ್ಕಳ ಹಾಡುಗಳನ್ನು ಶಾಲಾ ಪಠ್ಯದಲ್ಲಿ ಸೇರಿಸಬೇಕು, ಬಿಳಿಗೆರೆಯವರ ಬರವಣಿಗೆಗಳು ಮಕ್ಕಳಲ್ಲಿ ಪರಿಸರ ಪ್ರೀತಿ ಹುಟ್ಟುವಂತೆ ಮಾಡುತ್ತವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಪರಿಸರ ದಿನದ ಮಹತ್ವ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
Comments are closed.