ಹಸಿರು ಗ್ರಾಮ ಅಭಿಯಾನ- 3.5 ಲಕ್ಷ ಸಸಿ ನೆಡುವ ನಿರ್ಧಾರ

37

Get real time updates directly on you device, subscribe now.


ತುಮಕೂರು: ಜಿಲ್ಲೆಯಲ್ಲಿ ಹಸಿರು ಗ್ರಾಮ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಅಭಿಯಾನದಡಿ ಬಯಲು ಸೀಮೆಗೆ ಅನುಗುಣವಾಗಿರುವ 24 ಜಾತಿಯ 3.5 ಲಕ್ಷ ಸಸಿ ನೆಟ್ಟು, ಪೋಷಿಸಿ ಬೆಳೆಸುವ ದೃಢ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಭು.ಜಿ. ತಿಳಿಸಿದರು.

ಹಸಿರು ಗ್ರಾಮ ಅಭಿಯಾನದ ಅಂಗವಾಗಿ ಕೊರಟಗೆರೆ ತಾಲ್ಲೂಕು ಬೂದಗವಿ ಗ್ರಾಮ ಪಂಚಾಯತಿ ಹೊರ ವಲಯದಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಜಿಲ್ಲೆಯು ಬಯಲುಸೀಮೆ ಪ್ರದೇಶ ಒಳಗೊಂಡಿರುವುದರಿಂದ ಮರಗಳನ್ನು ಬೆಳೆಸಿ ಹಸಿರೀಕರಣಕ್ಕೆ ಹೆಚ್ಚು ಒತ್ತು ನೀಡುವುದು ನಮ್ಮ ಜವಾಬ್ದಾರಿಯಾಗಿದೆ, ನರೇಗಾ ಯೋಜನೆಯಡಿ ಸಾಮಾಜಿಕ ಅರಣ್ಯ ಇಲಾಖೆ, ತಾಲ್ಲೂಕು ಪಂಚಾಯತಿ, ಗ್ರಾಮ ಪಂಚಾಯತಿ ಸಹಭಾಗಿತ್ವದಲ್ಲಿ 3.5 ಲಕ್ಷ ಮರಗಳನ್ನು ಬೆಳೆಸುವ ಬಹುದೊಡ್ಡ ಅಭಿಯಾನ ಇದಾಗಿದೆ ಎಂದು ತಿಳಿಸಿದರು.

ಈಗಾಗಲೇ ಸದೃಢವಾಗಿ ಬೆಳೆದಿರುವ ಸಸಿಗಳು ಸಿದ್ಧವಿದ್ದು, ಮಳೆಗಾಲ ಮುಗಿಯುವ ವೇಳೆಗೆ ಸಸಿ ನೆಡಬೇಕಾಗಿದೆ, ಪ್ರತೀ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 1000 ಗಿಡಗಳನ್ನು ನೆಟ್ಟು ಮೂರು ವರ್ಷಗಳ ಕಾಲ ಪೋಷಣೆ ಮಾಡುವ ಯೋಜನೆ ರೂಪಿಸಲಾಗಿದೆ, ಗಿಡಗಳನ್ನು ಬೆಳೆಸುವ ಜವಾಬ್ದಾರಿಯನ್ನು ಸಾಮಾಜಿಕ ಅರಣ್ಯ ಇಲಾಖೆ ಮತ್ತು ಗ್ರಾಮ ಪಂಚಾಯತಿಗೆ ವಹಿಸಲಾಗಿದೆ ಎಂದರು.

ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜು ಮಾತನಾಡಿ, ಜಿಲ್ಲೆಯಾದ್ಯಂತ 3.5 ಲಕ್ಷ ಸಸಿಗಳನ್ನು ನೆಡಲಾಗುತ್ತಿದೆ, ಇವುಗಳನ್ನು ಮೂರು ವರ್ಷಗಳ ಕಾಲ ಸದೃಢವಾಗಿ ಬೆಳೆಸುವ ಪಣ ತೊಡಲಾಗಿದೆ ಎಂದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶಾಲಾ ಮಕ್ಕಳೊಂದಿಗೆ ವಿದ್ಯಾಭ್ಯಾಸದ ಬಗ್ಗೆ ಚರ್ಚಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕೊರಟಗೆರೆ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ, ಸಹಾಯಕ ನಿರ್ದೇಶಕರು, ವಲಯ ಅರಣ್ಯಾಧಿಕಾರಿ, ಶಾಲಾ ಶಿಕ್ಷಕರು, ಶಾಲಾ ಮಕ್ಕಳು ಹಾಗೂ ಸ್ಥಳೀಯರು ಭಾಗಿಯಾಗಿದ್ದರು.

Get real time updates directly on you device, subscribe now.

Comments are closed.

error: Content is protected !!