ಮಹಿಳಾ ಚೆಸ್ ಚಾಂಪಿಯನ್ ಶಿಪ್ ಗೆ ಚಾಲನೆ

23

Get real time updates directly on you device, subscribe now.


ತುಮಕೂರು: ನಗರದ ಶ್ರೀದೇವಿ ವೈದ್ಯಕೀಯ ಮಹಾ ವಿದ್ಯಾಲಯ ಸಭಾಂಗಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ರಾಜ್ಯ ಮಹಿಳಾ ಚಾಂಪಿಯನ್ ಶಿಪ್ 2024ಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ನ್ಯೂ ತುಮಕೂರು ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಷನ್, ತುಮಕೂರು ಚೆಸ್ ಅಕಾಡೆಮಿಯಿಂದ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಿರುವ ಮಹಿಳಾ ಚೆಸ್ ಚಾಂಪಿಯನ್ ಶಿಪ್ಗೆ ಶ್ರೀದೇವಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕಿ ಡಾ.ಲಾವಣ್ಯರಮಣ್ ಚಾಲನೆ ನೀಡಿ ಮಾತನಾಡಿ ಚೆಸ್ ಅರ್ಥಾತ್ ಚದುರಂಗದಾಟ ಇಡೀ ವಿಶ್ವದಾದ್ಯಂತ ಮನೆಮಾತಾಗಿರುವ ಇನ್ಡೋರ್ ಆಟಗಳಲ್ಲಿ ಪ್ರಮುಖ ವೆನಿಸಿದೆ, ನಮ್ಮ ಬುದ್ಧಿ ಮತ್ತೆ ಪರೀಕ್ಷಿಸುವ ಗುಣ ಲಕ್ಷಣಗಳ ಈ ಆಟ ನಮ್ಮಲ್ಲಿ ನ ಏಕಾಗ್ರತೆ, ಚಾಣಾಕ್ಷತೆ ಹೆಚ್ಚಿಸಲು ಪೂರಕವಾಗಿದೆ, ರಾಜ್ಯ ಮತ್ತು ಜಿಲ್ಲೆಯ ಚೆಸ್ ಸಂಸ್ಥೆ ಯವರು ನಿರಂತರವಾಗಿ ರಾಜ್ಯ, ರಾಷ್ಟ್ರ ಮಟ್ಟದ ಚೆಸ್ ಪಂದ್ಯಾವಳಿ ಆಯೋಜಿಸುತ್ತಾ ಬರುತ್ತಿದ್ದು ಮಹಿಳೆಯರಿಗಾಗಿ ಮೂರು ದಿನಗಳ ಪಂದ್ಯಾವಳಿ ಆಯೋಜಿಸಿ, ನಮ್ಮ ಕಾಲೇಜನ್ನೇ ಆಯ್ಕೆ ಮಾಡಿರುವುದು ಖುಷಿ ತರಿಸಿದೆ ಎಂದರು.

ಮಹಿಳೆಯರು ಬೌದ್ಧಿಕ ವಾಗಿ ಪುರುಷರಿಗಿಂತಲೂ ಹೆಚ್ಚು ಬುದ್ದಿವಂತರು, ಬುದ್ಧಿ ವಂತರ ಆಟ ಚೆಸ್ ಕಲಿಕೆಗೆ ಮಹಿಳೆಯರು ಹೆಚ್ಚು ಮುಂದೆ ಬರಬೇಕು, ಅಂತಾರಾಷ್ಟ್ರೀಯ ಕ್ರೀಡೆಯಾದ ಚೆಸ್ ಕಲಿಕೆಗೆ ತಮ್ಮ ಮಕ್ಕಳನ್ನು ಪೋಷಕರು ಪ್ರೋತ್ಸಾಹಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಚೆಸ್ ಪಂದ್ಯಾವಳಿ ವೀಕ್ಷಿಸಿ ಮಾತನಾಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಮೊದಲನೆಯದಾಗಿ ರಾಜ್ಯದ ವಿವಿಧೆಡೆ ಯಿಂದ ಆಗಮಿಸಿರುವ ಮಹಿಳಾ ಚೆಸ್ ಆಟಗಾರರನ್ನು ಅಭಿನಂದಿಸುವೆ, ಚಿಕ್ಕಂದಿನಲ್ಲಿ ನಾನು ಚೆಸ್ ಆಟಗಾರ್ತಿಯಾಗಿ ಶಾಲಾ ಹಂತದಲ್ಲಿ ಬಹುಮಾನ ಪಡೆದಿದ್ದೆ, ಮಕ್ಕಳನ್ನು ಓದುವ ಹಂತದಲ್ಲೇ ಚೆಸ್ ನಂತಹ ಕ್ರೀಡೆಯಲ್ಲಿ ತೊಡಗಿಸುವುದರಿಂದ ಅವರ ಬುದ್ಧಿ ಮತ್ತೆ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ, ತುಮಕೂರು ಕಲೆಯೊಟ್ಟಿಗೆ ಕ್ರೀಡೆಯಲ್ಲೂ ಹೆಸರಾಗುತ್ತಿದ್ದು ರಾಜ್ಯ ಮಟ್ಟದ ಪಂದ್ಯಾವಳಿ ಜಿಲ್ಲೆಯಲ್ಲಿ ಆಯೋಜಿಸಿರುವ ಮಧುಕರ್ ಮತ್ತವರ ತಂಡವನ್ನು ಅಭಿನಂದಿಸುವುದಾಗಿ ತಿಳಿಸಿದರು.

ಕೆಎಸ್ ಸಿಎ ರಾಜ್ಯ ಉಪಾಧ್ಯಕ್ಷ ಹಾಗೂ ನ್ಯೂ ತುಮಕೂರು ಚೆಸ್ ಅಸೋಸಿಯೇಷನ್ ಅಧ್ಯಕ್ಷ ಟಿ.ಎನ್.ಮಧುಕರ್ ಪ್ರಾಸ್ತಾವಿಕ ನುಡಿಗಳನ್ನಾಡಿ ತುಮಕೂರಿನಲ್ಲಿ ಈಗಾಗಲೇ ಏಳು ವರ್ಷದೊಳಗಿನವರು, ವಿಶೇಷಚೇತನರು ಹಾಗೂ ಅಂಧರ ರಾಷ್ಟ್ರೀಯ ಚೆಸ್ ಪಂದ್ಯಾವಳಿ ಆಯೋಜಿಸಿದ್ದು ಶ್ರೀದೇವಿ ಕಾಲೇಜಿನ ಮುಖ್ಯ ಸ್ಥ ಡಾ.ಎಂ.ಆರ್.ಹುಲಿನಾಯ್ಕರ್, ಕುಟುಂಬದವರು ಮತ್ತು ಆಡಳಿತ ಮಂಡಳಿ ಯವರ ಸಹಕಾರ ಸ್ಮರಣೀಯ, ತುಮಕೂರು ಹಾಗೂ ಮಂಡ್ಯ ರಾಜ್ಯದಲ್ಲಿ ಚೆಸ್ ಪಂದ್ಯಾವಳಿ ಆಯೋಜನೆ, ತರಬೇತಿಯಲ್ಲಿ ಮುಂಚೂಣಿಯಲ್ಲಿ ಮುಂದಿನ ದಿನಗಳಲ್ಲಿ ಒಂದು ವಾರಗಳ ಚೆಸ್ ಹಬ್ಬವನ್ನೂ ತುಮಕೂರಲ್ಲಿ ಆಯೋಜಿಸಿ ವಿಶ್ವದ ಭೂಪಟದಲ್ಲಿ ತುಮಕೂರು ಚೆಸ್ ಕ್ರೀಡೆಯಲ್ಲಿ ಗುರುತಿಸಲ್ಪಡುವಂತೆ ಮಾಡುವ ಸಂಕಲ್ಪ ಹೊಂದಿರುವುದಾಗಿ ತಿಳಿಸಿದರು.
ರಾಜ್ಯ ಕಾರ್ಯದರ್ಶಿ ಅರವಿಂದ ಶಾಸ್ತ್ರಿ ಮಾತನಾಡಿ, ಮಹಿಳೆಯರನ್ನು ಚೆಸ್ ಆಟಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸದರಿ ಪಂದ್ಯಾವಳಿಯ ಬಹುಮಾನದ ಮೊತ್ತವನ್ನು ನಲವತ್ತು ಸಾವಿರದಿಂದ ಲಕ್ಷಕ್ಕೆ ಏರಿಸಲು ನಮ್ಮ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಹೇಳಿ ಶ್ರೀದೇವಿ ಸಂಸ್ಥೆ ಸಹಕಾರ ಸ್ಮರಿಸಿದರು.

ಪತ್ರಕರ್ತ ಎಸ್.ನಾಗಣ್ಣ, ಶ್ರೀದೇವಿ ವೈದ್ಯಕೀಯ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ರಮಣ್ ಹುಲಿನಾಯ್ಕರ್, ಬೆಂಗಳೂರು ನಗರ ಚೆಸ್ ಅಸೋಸಿಯೇಷನ್ ಅಧ್ಯಕ್ಷೆ ಎಂ.ಯು.ಸೌಮ್ಯ, ನಿವೃತ್ತ ಪ್ರಾಂಶುಪಾಲೆ ಟಿ.ಆರ್.ಲೀಲಾವ ತಿ, ಅಂತಾರಾಷ್ಟ್ರೀಯ ಚೆಸ್ ಕೋಚ್ ಮಾಧುರಿ, ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿ ಅಖಿಲಾನಂದ್, ಮಂಜುನಾಥ್ ಜೈನ್, ತ್ಯಾಗರಾಜ್ ಸೇರಿ ರಾಜ್ಯ, ಜಿಲ್ಲಾ ಚೆಸ್ ಅಸೋಸಿಯೇಷನ್ ಪದಾಧಿಕಾರಿಗಳು ಪಾಲ್ಗೊಂಡರು, ಮೂರು ದಿನಗಳ ಈ ಪಂದ್ಯಾವಳಿಯಲ್ಲಿ ನೂರಕ್ಕೂ ಅಧಿಕ ಸ್ಪರ್ಧಾಳುಗಳು ಪಾಲ್ಗೊಂಡಿದ್ದು, ಭಾನುವಾರ ಸಂಜೆ ಸಮಾರೋಪ ನಡೆಯಲಿದೆ.

Get real time updates directly on you device, subscribe now.

Comments are closed.

error: Content is protected !!