ಧಾರ್ಮಿಕ, ಸಾಮಾಜಿಕ, ಜನಜಾಗೃತಿ ಕಾರ್ಯಕ್ರಮ

ಸಿದ್ಧರಬೆಟ್ಟ ಬಾಳೆಹೊನ್ನೂರು ಶಾಖಾ ಮಠದ 18ನೇ ವಾರ್ಷಿಕೋತ್ಸವ

31

Get real time updates directly on you device, subscribe now.


ತುಮಕೂರು: ಕೊರಟಗೆರೆ ತಾಲ್ಲೂಕು ಶ್ರೀಕ್ಷೇತ್ರ ಸಿದ್ಧರಬೆಟ್ಟದ ಶ್ರೀಬಾಳೆಹೊನ್ನೂರು ಖಾಸಾ ಶಾಖಾ ಮಠದ 18ನೇ ವಾಷೀಕೋತ್ಸವ, ಶ್ರೀರೇಣುಕಾಚಾರ್ಯರ, ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವ, ಸಾಮೂಹಿಕ ವಿವಾಹ ಹಾಗೂ ಜನಜಾಗೃತಿ ಧರ್ಮ ಸಮಾರಂಭ ಈ ತಿಂಗಳ 8 ಮತ್ತು 9 ರಂದು ಏರ್ಪಡಿಸಲಾಗಿದೆ.
ಶ್ರೀಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಶನಿವಾರ ನಗರದ ವೀರಶೈವ ಸಮಾಜ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿ, ಭಕ್ತರನ್ನು ಶ್ರೀಮಠಕ್ಕೆ ಆಹ್ವಾನಿಸುವ ಸದುದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಿರುವುದಾಗಿ ಹೇಳಿದರು.

ಮಠಗಳು ಧಾರ್ಮಿಕ ಕಾರ್ಯ ಮಾತ್ರವಲ್ಲದೆ, ಭಕ್ತರಲ್ಲಿ ಸಾಮಾಜಿಕ ಕಳಕಳಿ ಮೂಡಿಸುವುದು, ಮೌಲ್ಯ ತುಂಬುವುದು, ಸಾಹಿತ್ಯ ಓದುವ ಆಸಕ್ತಿ ಬೆಳೆಸಿ ಪ್ರಜ್ಞಾವಂತರನ್ನಾಗಿಸುವ ಕೆಲಸ ಮಾಡಬೇಕಾಗಿದೆ, ಈ ಉದ್ದೇಶದಿಂದ ಶ್ರೀಮಠದ 18ನೇ ವಾರ್ಷಿಕೋತ್ಸವ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.

ಈ ತಿಂಗಳ 8 ರಂದು ಶನಿವಾರ ಸಂಜೆ ಗಂಗಾ ಪೂಜೆಯೊಂದಿಗೆ ಧಾರ್ಮಿಕ ಆಚರಣೆಗಳ ಪ್ರಾರಂಭ, ಗಣಪತಿ ಪೂಜೆ, ಪುಣ್ಯಾಹ ನಾಂದಿ, ಪಂಚಕಳಸ ಸ್ಥಾಪನೆ, ನವಗ್ರಹ ಹಾಗೂ ಶ್ರೀರುದ್ರ ಹೋಮ ಹವನಾದಿಗಳೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಅಂದು ಬೆಳಗ್ಗೆ 11 ಗಂಟೆಗೆ ಪುಸ್ತಕ ದಾಸೋಹ ಸಮಾರಂಭದ ಅಂಗವಾಗಿ ಭಕ್ತರು ತಾವು ಓದಿದ ಒಂದು ಪುಸ್ತಕ ತಂದು ಕೊಟ್ಟು ಮಠದಿಂದ ಉಚಿತವಾಗಿ ಎರಡು ಪುಸ್ತಕ ತೆಗೆದುಕೊಂಡು ಹೋಗಿ ಓದುವ ಕಾರ್ಯಕ್ರಮ ಮಾಡಲಾಗುತ್ತಿದೆ, ಈ ಸಮಾರಂಭದಲ್ಲಿ ವಿವಿಧ ಮಠಗಳ ಪೂಜ್ಯರು ಭಾಗವಹಿಸುವರು ಎಂದು ಹೇಳಿದರು.
ಇದೇ 9ರಂದು ಭಾನುವಾರ ಬೆಳಗ್ಗೆ ಮಹಾ ರುದ್ರಾಭಿಷೇಕ, ನಂತರ ಸಾಮೂಹಿಕ ದೀಕ್ಷಾ ಸಮಾರಂಭ, ಆ ನಂತರ ಸಾಮೂಹಿಕ ವಿವಾಹ ನಡೆಯಲಿದೆ, ಸಾಮೂಹಿಕ ವಿವಾಹ ಶಾಸ್ತ್ರ ಹಾಗೂ ಧಾರೆ ಎರೆಯುವ ಕಾರ್ಯ ನೆರವೇರಲಿವೆ ಎಂದು ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಬೆಳಗ್ಗೆ 10 ಗಂಟೆಗೆ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರ ಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯರ ಸಾನಿಧ್ಯದಲ್ಲಿ ಜನಜಾಗೃತಿ ಧರ್ಮ ಸಮಾರಂಭ ನಡೆಯಲಿದೆ, ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಯಡಿಯೂರು ಮಠದ ರೇಣುಕ ಶಿವಾಚಾರ್ಯ ಸ್ವಾಮೀಜಿ, ಎಲೆರಾಂಪುರ ಮಠದ ಹನುಮಂತನಾಥ ಸ್ವಾಮೀಜಿ, ಬೆಳ್ಳಾವಿ ಮಠದ ಕಾರದ ವೀರಬಸವ ಸ್ವಾಮೀಜಿ, ಕಲ್ಯಾಣ ಮಠದ ಕಲ್ಯಾಣ ಸ್ವಾಮೀಜಿ, ತಂಗನಹಳ್ಳಿ ಮಠದ ಬಸವಲಿಂಗ ಸ್ವಾಮೀಜಿ, ನರೇಗಲ್ ಸವದತ್ತಿ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಕನಕಗಿರಿ ಮಠದ ಡಾ.ಚನ್ನಮಲ್ಲ ಸ್ವಾಮೀಜಿ, ಚಳಗೇರಿ ಮಠದ ವೀರಸಂಗಮೇಶ್ವರ ಸ್ವಾಮೀಜಿ ಭಾಗವಹಿಸುವರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯ ಈ ಸಮಾರಂಭವನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ಉದ್ಘಾಟಿಸುವರು, ಮಾಜಿ ಸಂಸದ ಜಿ.ಎಸ್.ಬಸವರಾಜು, ನೂತನ ಸಂಸದ ವಿ.ಸೋಮಣ್ಣ ಸೇರಿದಂತೆ ಶಾಸಕರು, ವಿವಿಧ ಮುಖಂಡರು ಭಾಗವಹಿಸುವರು ಎಂದು ಹೇಳಿದರು.

ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್, ಉಪಾಧ್ಯಕ್ಷ ಎಸ್.ಜಿ.ಚಂದ್ರಮೌಳಿ, ಕಾರ್ಯದರ್ಶಿ ಅತ್ತಿ ರೇಣುಕಾನಂದ, ಅಖಿಲ ಭಾರತ ವೀರಶೈವ ಮಹಾ ಸಭಾ ಜಿಲ್ಲಾಧ್ಯಕ್ಷ ಮೋಹನ್ಕುಮಾರ್ ಪಟೇಲ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಎಸ್.ಸಿದ್ಧಲಿಂಗಪ್ಪ, ಮುಖಂಡರಾದ ಮಲ್ಲಸಂದ್ರ ಶಿವಣ್ಣ, ಟಿ.ಆರ್.ಸದಾಶಿವಯ್ಯ, ನಾ.ಚಂ.ಗಂಗಾಧರ ಶಾಸ್ತ್ರಿ, ಮಹೇಶ್, ಎಂ.ಎಸ್.ಉಮೇಶ್,ರುದ್ರಾರಾಧ್ಯ, ರುದ್ರೇಶ್, ಮಂಜುನಾಥ್, ಶಿವಕುಮಾರ್, ಕಲ್ಯಾಣ್ ಕುಮಾರ್ ಮೊದಲಾದವರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!